ADVERTISEMENT

ಕುಷ್ಟಗಿ: ಬೇಸಿಗೆಯಲ್ಲೂ ಧುಮ್ಮಿಕ್ಕುತ್ತಿದೆ ಜೀವಜಲ

ಎ.ನಾರಾಯಣರಾವ ಕುಲಕರ್ಣಿ
Published 5 ಮಾರ್ಚ್ 2025, 6:41 IST
Last Updated 5 ಮಾರ್ಚ್ 2025, 6:41 IST
ಕುಷ್ಟಗಿ ತಾಲ್ಲೂಕು ಹಿರೇನಂದಿಹಾಳ ಕೆರೆಗೆ ಬಂದ ಕೃಷ್ಣಾ ನೀರಲ್ಲಿ ಮಿಂದೆದ್ದ ರೈತ
ಕುಷ್ಟಗಿ ತಾಲ್ಲೂಕು ಹಿರೇನಂದಿಹಾಳ ಕೆರೆಗೆ ಬಂದ ಕೃಷ್ಣಾ ನೀರಲ್ಲಿ ಮಿಂದೆದ್ದ ರೈತ   

ಕುಷ್ಟಗಿ: ಹದಿನೈದು ವರ್ಷಗಳಿಂದ ಕೆರೆಯಲ್ಲಿ ಹನಿ ನೀರು ಇದ್ದಿಲ್ರಿ ಈಗ ನೋಡ್ರಿ ಬ್ಯಾಸಗಿಯೊಳಗ ಕೆರಿಯೊಳಗ ತಿಳಿ ನೀರು ಭರ್ತಿಯಾಗೇತಿ, ಇದಕ್ಕಿಂತ ಸಂತೋಷ ಬ್ಯಾರೆ ಏನೈತ್ರಿ ಹಳ್ಳಿ ಮಂದಿಗೆ...

ತಾಲ್ಲೂಕಿನ ಹಿರೇನಂದಿಹಾಳ ಗ್ರಾಮದ ಕೆರೆಗೆ ಕೃಷ್ಣಾ ನದಿಯಿಂದ ಕೆರೆ ತುಂಬಿಸುವ ಯೋಜನೆಯ ಕೊಳವೆಗಳ ಮೂಲಕ ಧುಮ್ಮಿಕ್ಕುತ್ತಿದ್ದ ಜಲಧಾರೆಗೆ ಮೈಯೊಡ್ಡಿದ್ದ ರೈತ ಯಮನೂರಪ್ಪ ವೀರಾಪುರ ಸಂತಸ ಹಂಚಿಕೊಂಡ ಪರಿ ಇದು.

ತಾಲ್ಲೂಕಿನ ಒಟ್ಟು 18 ಕೆರೆಗಳಿಗೆ ಆಲಮಟ್ಟಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಕೊಪ್ಪಳ ಜಿಲ್ಲೆಯ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಕೃಷ್ಣಾ ಬಿ ಸ್ಕೀಂನಲ್ಲಿಯ ಉದ್ದೇಶಿತ ಕೊಪ್ಪಳ ಏತ ನೀರಾವರಿ ಇನ್ನೂ ಕಾರ್ಯಗತವಾಗಿಲ್ಲ. ಆದರೆ ತಾತ್ಕಾಲಿಕವಾಗಿ ಕೆರೆ ತುಂಬಿಸುವ ಯೋಜನೆಯಲ್ಲಾದರೂ ಬರಪೀಡಿತ ಪ್ರದೇಶಗಳ ಕೆರೆಗಳಿಗೆ ನೀರು ಭರ್ತಿ ಮಾಡಲಾಗುತ್ತಿದೆ. ತಾಲ್ಲೂಕಿನ 18 ಕೆರೆಗಳ ಪೈಕಿ ಸದ್ಯ 15 ಕೆರೆಗಳಿಗೆ ಕೃಷ್ಣೆ ಹರಿಯುತ್ತಿದ್ದಾಳೆ. ಅವುಗಳ ಪೈಕಿ ಹಿರೇನಂದಿಹಾಳ ಗ್ರಾಮದ ಕೆರೆಯೂ ಒಂದಾಗಿದೆ.

ADVERTISEMENT

ಒಂದೂವರೆ ದಶಕದಿಂದ ಹೆಸರಿಗೆ ಮಾತ್ರ ಎನ್ನುವಂತಿದ್ದ ಈ ಕೆರೆಯಲ್ಲಿ ಈಗ ಜೀವಜಲ ಸಮೃದ್ಧಿ ಕಂಡುಬರುತ್ತಿದೆ. ಸಣ್ಣನೀರಾವರಿ ಇಲಾಖೆಗೆ ಸೇರಿದ್ದರೂ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ನಿರ್ಮಾಣಗೊಂಡ ಕೆಲ ದಿನಗಳಲ್ಲೇ ಕಟ್ಟಿದ್ದ ಕಾಲುವೆಗಳು ಹಾಳಾಗಿಹೋಗಿದ್ದವು. ಸಾಧಾರಣ ಮಳೆಗೆ ಈ ಕೆರೆಗೆ ನೀರು ಬರುವುದೇ ದುರ್ಲಭ. ಹಾಗಿದ್ದರೂ ಅವೈಜ್ಞಾನಿಕವಾಗಿ ಕೆರೆ ಪ್ರದೇಶ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ತಿಂಗಳವರೆಗೆ ನೀರು ಹರಿದರೆ ನೀರು ಕಾಣದ ಈ ಕೆರೆ ಭರ್ತಿಯಾಗುತ್ತದೆ ಎನ್ನುತ್ತಾರೆ ರೈತರು.

ನೀರು ಅಪರೂಪವಾಗಿದ್ದ ಈ ಬೇಸಿಗೆ ಸಂದರ್ಭದಲ್ಲಿ ಕೃಷ್ಣಾ ನೀರು ವರವಾಗಿ ಬಂದಿದೆ, ಪ್ರಾಣಿ, ಪಕ್ಷಿಗಳಿಗೆ ಬಹಳಷ್ಟು ಆಸರೆಯಾಗಿದೆ. ಬತ್ತಿದ ಸುತ್ತಲಿನ ಕೊಳವೆಬಾವಿಗಳಲ್ಲಿ ಜೀವಜಲ ಉಕ್ಕುತ್ತಿದೆ. ತುಂತುರು ನೀರಾವರಿಯಲ್ಲಿ ಎರಡು ಸ್ಪ್ರಿಂಕ್ಲರ್‌ಗಳ ಪೈಕಿ ಈಗ ಆರೇಳು ಸ್ಪ್ರಿಂಕ್ಲರ್‌ಗಳ ಮೂಲಕ ಚಿಮ್ಮುವಷ್ಟರಮಟ್ಟಿಗೆ ನೀರಿನ ಇಳುವರಿ ಹೆಚ್ಚಾಗಿದೆ ಎನ್ನುತ್ತಾರೆ ರೈತರು.

ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿತ್ತು ಈಗ ಕೆರೆಗೆ ನೀರು ಬಂದು ಅಂತರ್ಜಲ ಮಟ್ಟ ಹೆಚ್ಚಾಗಿ ಬೇಸಿಗೆ ಬೆಳೆಗಳಿಗೆ ಬಹಳಷ್ಟು ಅನುಕೂಲವಾಗಿದೆ
ಯಮನೂರಪ್ಪ ವೀರಾಪುರ ರೈತ ಹಿರೇನಂದಿಹಾಳ
ಈ ತಿಂಗಳ ಅಂತ್ಯದವರೆಗೂ ತಾಲ್ಲೂಕಿನ ಹದಿನೈದು ಕೆರೆಗಳಿಗೆ ನೀರು ಹರಿಸುವ ಪ್ರಯತ್ನ ನಡೆದಿದೆ
ರಮೇಶ ಎಇಇ ಕೆಬಿಜೆಎನ್‌ಎಲ್‌
ಬೇಸಿಗೆಯಲ್ಲಿ ಪಕ್ಷಿಗಳಿಗೆ ಕುಡಿಯುವಷ್ಟೂ ಈ ಪ್ರದೇಶದಲ್ಲಿ ನೀರಿರಲಿಲ್ಲ. ಕೆರೆ ತುಂಬಿಸಿದ ಸರ್ಕಾರ ಪುಣ್ಯ ಕಟ್ಟಿಕೊಂಡಿದೆ
ಹುಚ್ಚೀರಪ್ಪ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.