ADVERTISEMENT

ಕುಷ್ಟಗಿ-ಚಿಕ್ಕಹೆಸರೂರು ‘ನತದೃಷ್ಟ ರಸ್ತೆ’: ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಮಂಕು

ಹದಗೆಟ್ಟ ರಾಜ್ಯ ಹೆದ್ದಾರಿ, ಬಸ್‌ ಬಂದ್‌

ನಾರಾಯಣರಾವ ಕುಲಕರ್ಣಿ
Published 14 ಆಗಸ್ಟ್ 2025, 6:22 IST
Last Updated 14 ಆಗಸ್ಟ್ 2025, 6:22 IST
ಕುಷ್ಟಗಿ–ಮುದೇನೂರು ಮಾರ್ಗದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಉಂಟಾಗಿರುವುದು
ಕುಷ್ಟಗಿ–ಮುದೇನೂರು ಮಾರ್ಗದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಉಂಟಾಗಿರುವುದು   

ಕುಷ್ಟಗಿ: ಒಂದು ರಸ್ತೆ ಹಾಳಾಗಿರುವ ಕಾರಣಕ್ಕೆ ಗ್ರಾಮಾಂತರ ಪ್ರದೇಶದ ಮಕ್ಕಳ ಶೈಕ್ಷಣಿಕ ಭವಿಷ್ಯವೂ ಹಾಳಾಗುತ್ತಿದ್ದು ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದಿಂದ ಟೆಂಗುಂಟಿ ಮಾರ್ಗವಾಗಿ ಮುದೇನೂರು, ಮುದ್ದಲಗುಂದಿ ಮಾರ್ಗಮಧ್ಯೆ ಬರುವ ತಾಲ್ಲೂಕಿನ ಬಹುತೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಚಿಕ್ಕಹೆಸರೂರು-ಮುಂಡರಗಿ ರಾಜ್ಯ ಹೆದ್ದಾರಿ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿದೆ. ನಿರ್ಮಾಣಗೊಂಡು ದಶಕಗಳೇ ಕಳೆದಿವೆ. ಆದರೆ ಅಂದಿನಿಂದ ಇಲ್ಲಿಯವರೆಗೂ ಕನಿಷ್ಟ ಅರ್ಧವರ್ಷವಾದರೂ ಈ ರಸ್ತೆ ಸುಸ್ಥಿತಿಯಲ್ಲಿಲ್ಲ. ಪ್ರತಿ ವರ್ಷವೂ ದುರಸ್ತಿಯಾಗುತ್ತದೆ. ಆದರೆ ದುಸ್ಥಿತಿ ಹಾಗೇ ಮುಂದುವರಿದು ಈ ಮಾರ್ಗದಲ್ಲಿ ಬರುವ ಹಳ್ಳಿಗಳ ಜನರ ನೆಮ್ಮದಿ ಕಸಿದುಕೊಂಡಿದೆ.

ಶಿಕ್ಷಣಕ್ಕೆ ಪೆಟ್ಟು: ಕುಷ್ಟಗಿಯಿಂದ ಮುದೇನೂರುವರೆಗಿನ 20 ಕಿಮೀದಲ್ಲಿ ಎಣಿಸುತ್ತ ಹೋದರೆ ತೆಗ್ಗಿಹಾಳ, ಕೂಡ್ಲೂರು, ಮುದೇನೂರು, ಕೆ.ಗೋನಾಳ, ಬಸಾಪುರ, ಟೆಂಗುಂಟಿ ಇತರೆ ಗ್ರಾಮಗಳ ಸೀಮಾಂತರದಲ್ಲಿ ನೂರಾರು ತಗ್ಗು ಗುಂಡಿಗಳು ಕಂಡುಬರುತ್ತವೆ. ಬಸ್‌ಗಳಿಗೆ ಧಕ್ಕೆಯಾಗುತ್ತದೆ, ಟೈರ್‌ಗಳು ಒಡೆಯುತ್ತವೆ ಎಂಬ ಸಹಜ ಕಾರಣಕ್ಕೆ ಸಾರಿಗೆ ಇಲಾಖೆಯವರು ಬಸ್‌ ಸಂಚಾರ ಸ್ಥಗಿತಗೊಳಿಸುತ್ತಾರೆ ಎಂಬುದು ತಿಳಿದಿದೆ. ಟಂಟಂ, ಬೈಕ್‌ ಹೀಗೆ ಇತರೆ ವಾಹನಗಳ ಮೂಲಕ ಜನರು ಹೇಗೋ ಪಟ್ಟಣ ಇತರೆ ಊರುಗಳಿಗೆ ಹೋಗಿ ಬರುತ್ತಾರೆ. ಆದರೆ ಬಸ್‌ ಬಾರದ ಕಾರಣಕ್ಕೆ ಮಕ್ಕಳು ಶಾಲೆಗೆ ಹೋಗಲಾರದೆ ಮನೆಯಲ್ಲಿಯೇ ಉಳಿಯುವಂತಾಗಿದ್ದು ಅವರ ಶೈಕ್ಷಣಿಕ ಭವಿಷ್ಯ ಮಣ್ಣುಪಾಲಾಗುತ್ತದೆ. ಸಮಸ್ಯೆ ಪರಿಹಾರಕ್ಕೆ ಯಾರೂ ಮುಂದಾಗಿಲ್ಲ ಎಂಬ ಅಸಮಾಧಾನ ಆ ಮಾರ್ಗದಲ್ಲಿ ಬರುವ ಗ್ರಾಮಗಳ ಜನರದು.

ADVERTISEMENT

ಬೇಸತ್ತ ಮಕ್ಕಳು: ಬಸ್‌ ಮುಂದೆ ಧರಣಿ

ತೆಗ್ಗಿಹಾಳ, ಕೂಡ್ಲೂರು, ಕೆ.ಗೋನಾಳ ಇತರೆ ಗ್ರಾಮಗಳ ನೂರಾರು ಮಕ್ಕಳು ಮುದೇನೂರಿನಲ್ಲಿರುವ ಪ್ರೌಢಶಾಲೆಗೆ ಹೋಗಬೇಕು. ಆದರೆ ರಸ್ತೆ ಕೆಟ್ಟಿದೆ ಎಂಬ ಕಾರಣಕ್ಕೆ ಒಂದು ವಾರದಿಂದಲೂ ಕುಷ್ಟಗಿ ಘಟಕದ ಸಾರಿಗೆ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿಲ್ಲ. ಕಾರಣ ಮಕ್ಕಳಿಗೆ ಶಾಲೆಗೆ ಹೋಗದಂತಾಗಿದೆ. ಹಾಗಾಗಿ ಬೇಸತ್ತ ತೆಗ್ಗಿಹಾಳ ಗ್ರಾಮದ ಶಾಲಾ ಮಕ್ಕಳು, ಸಾರ್ವಜನಿಕರು ತಮ್ಮ ಗ್ರಾಮದವರೆಗೆ ಮಾತ್ರ ಬಂದ ಸಾರಿಗೆ ಬಸ್‌ ಅನ್ನು ಅಡ್ಡಗಟ್ಟಿ ನಿಲ್ಲಿಸಿ ದಿಢೀರ್ ಪ್ರತಿಭಟನೆಗಿಳಿದಿದ್ದರು.

ಈ ವಿಷಯ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸ ನಡೆಯಿತು. ನಂತರ ಪ್ರಯಾಸವಾದರೂ ಮುದೇನೂರುವರೆಗೆ ಬಸ್‌ ಬಿಡುವುದಕ್ಕೆ ಘಟಕ ವ್ಯವಸ್ಥಾಪಕರು ಒಪ್ಪಿದ ನಂತರ ಮಕ್ಕಳು ಪ್ರತಿಭಟನೆ ಕೈಬಿಟ್ಟರು. ಕಳೆದ ಎರಡು ವಾರಗಳಿಂದಲೂ ನಿರಂತರ ಮಳೆ ಬರುತ್ತಿದ್ದು ರಸ್ತೆ ಗುಂಡಿಗಳು ನೀರಿನಿಂದ ಭರ್ತಿಯಾಗಿವೆ. ಗುಂಡಿ ಎಷ್ಟು ಆಳ ಇವೆ ಎಂಬುದು ಗೊತ್ತಾಗುತ್ತಿಲ್ಲ. ಏನಾದರೂ ಹೆಚ್ಚುಕಡಿಮೆಯಾದರೆ ನಾವೇ ಜವಾಬ್ದಾರಿಯಾಗಬೇಕಾಗುತ್ತದೆ. ರಸ್ತೆ ಸರಿಯಾಗಿದ್ದರೆ ಬಸ್‌ ಓಡಿಸುವುದಕ್ಕೆ ಸಮಸ್ಯೆಯೇ ಇರುವುದಿಲ್ಲ. ಇದನ್ನು ಜನರೂ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿ ಸಮಸ್ಯೆ ವಿವರಿಸಿದರು.

ಕುಷ್ಟಗಿ ತಾಲ್ಲೂಕು ತೆಗ್ಗಿಹಾಳದಲ್ಲಿ ವಿದ್ಯಾರ್ಥಿಗಳು ಬುಧವಾರ ಸಾರಿಗೆ ಬಸ್‌ ನಿಲ್ಲಿಸಿದ್ದರು
ರಸ್ತೆ ಹದಗೆಟ್ಟಿದ್ದರಿಂದ ವಾರದಿಂದಲೂ ಬಸ್‌ ಓಡಿಸಿಲ್ಲ. ಮಕ್ಕಳ ಸಮಸ್ಯೆ ನಮಗೂ ಗೊತ್ತಿದ್ದರೂ ನಾವು ಅಸಹಾಯಕರಾಗಿದ್ದೇವೆ. ಈಗಷ್ಟೇ ದುರಸ್ತಿ ಕೆಲಸ ನಡೆದಿದ್ದು ಬಸ್‌ ಓಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.
–ಸುಂದರಗೌಡ ಪಾಟೀಲ, ಸಾರಿಗೆ ಘಟಕ ವ್ಯವಸ್ಥಾಪಕ
ತೀರಾ ಹದಗೆಟ್ಟಿರುವ ಕುಷ್ಟಗಿ-ಟೆಂಗುಂಟಿ ಮಧ್ಯೆ 4 ಕಿಮೀ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳಲಾಗಿದ್ದು ಮಳೆಗಾಲವಾಗಿರುವುದರಿಂದ ಕೆಲಸಕ್ಕೆ ಅಡ್ಡಿಯಾಗಿದೆ. ತ್ವರಿತ ಕಾಮಗಾರಿಗೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
–ತಾಜುದ್ದೀನ್‌ ಎಇ, ಲೋಕೋಪಯೋಗಿ ಇಲಾಖೆ
ಈ ರಸ್ತೆ ನಮ್ಮ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಪ್ರತಿವರ್ಷ ನಿರ್ವಹಣೆ ದುರಸ್ತಿ ಹೆಸರಿನಲ್ಲಿ ಲಕ್ಷಾಂತರ ಹಣ ಖರ್ಚಾಗುತ್ತದೆ. ಆದರೆ ಕಳಪೆ ಕಾಮಗಾರಿಯಿಂದ ರಸ್ತೆ ಹಾಳಾಗುತ್ತದೆ. ಬಸ್‌ ಬಾರದ ಕಾರಣ ಮಕ್ಕಳು ಶಾಲೆಗೆ ಹೋಗುತ್ತಿಲ್ಲ.
–ನಡುಗಡ್ಡೆಪ್ಪ ಜಗ್ಗಲರ, ತೆಗ್ಗಿಹಾಳ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.