ಕುಷ್ಟಗಿ: ‘ಮಳಿ ಹೆಚ್ಚಾಗಿ ಬೆಳಿಯೆಲ್ಲಾ ಹಾಳಾಗಿ ಹೋಗೇತ್ರಿ, ಹತ್ತಾರು ಸಾವಿರ ಖರ್ಚು ಮಾಡಿದ್ದೇವೆ. ಫೋಟೊ ತೆಗಿತೆರಲಾ ಸರ್ಕಾರದಿಂದ ಪರಿಹಾರದ ರೊಕ್ಕಏನಾದ್ರೂ ಬರತೈತೇನ್ರಿ’!
ಜಮೀನಿನಲ್ಲಿ ನೀರು ಸಂಗ್ರಹವಾಗಿ ಹಾಳಾಗಿರುವ ಮೆಕ್ಕೆಜೋಳದ ಬೆಳೆಯಲ್ಲಿ ಕುರಿಗಳನ್ನು ಬಿಟ್ಟು ಮೇಯಿಸುತ್ತಿದ್ದ ಗುಮಗೇರಿಯ ರೈತ ರಾಮಣ್ಣ ಜರಗಡ್ಡಿ ರೈತ ಕೇಳಿದ್ದು ಹೀಗೆ. ಸುಮಾರು ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಹಾಳಾಗಿ ಹೋಗಿದ್ದನ್ನು ತೋರಿಸಿ ಹಾನಿಯ ಕುರಿತು ವಿವರಿಸಿ ನಂತರ ಆತ ಕೇಳಿದ ಪ್ರಶ್ನೆಗೆ ಉತ್ತರ ಇರಲಿಲ್ಲ.
ಈ ಸಮಸ್ಯೆ ಕೇವಲ ಒಬ್ಬ ರೈತನದ್ದಲ್ಲ ಇಡಿ ತಾಲ್ಲೂಕಿನ ಯಾವುದೇ ಮೂಲೆಗೆ ಹೋದರೂ ರೈತರಿಂದ ತೂರಿ ಬರುವ ಪ್ರಶ್ನೆ ಇದು. ಬಿಟ್ಟು ಬಿಡದೆ ಮಳೆ ಪ್ರತಿದಿನ ಸುರಿಯುತ್ತಿದ್ದು ಕೊಯಿಲಿಗೆ ಬಂದಿರುವ ಮತ್ತು ಇನ್ನೂ ಬೆಳವಣಿಗೆ ಹಂತದಲ್ಲಿರುವ ಬೆಳೆಗಳಿಗೆ ಬಹಳಷ್ಟು ಹಾನಿಯಾಗಿದ್ದು ಹಸಿ ಬರಕ್ಕೆ ತುತ್ತಾಗಿ ಹತಾಶೆಗೀಡಾರುವ ರೈತರು ಸರ್ಕಾರದಿಂದ ಬರಬಹುದಾದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ವಾರದ ಹಿಂದೆ ಬಿಡುವು ಮಾಡಿಕೊಂಡಿದ್ದ ಮಳೆ ಕಳೆದ ಒಂದು ವಾರದಿಂದಲೂ ನಿತ್ಯದ ಅತಿಥಿಯಾಗಿದ್ದು ಮುಂಗಾರು ಹಂಗಾಮಿನ ಬೆಳೆದ ಮೆಕ್ಕೆಜೋಳ, ಸಜ್ಜೆ, ಎಳ್ಳು, ತೊಗರಿ, ಸೂರ್ಯಕಾಂತಿ ಹೀಗೆ ಇನ್ನೂ ಕೆಲ ಬೆಳೆಗಳು ಹೊಲದಲ್ಲಿಯೇ ಕೊಳೆಯುತ್ತಿರುವುದು ರೈತರನ್ನು ಕಂಗಾಲಾಗುವಂತೆ ಮಾಡಿದೆ.
ಮುಂಚಿತವಾಗಿ ಬಿತ್ತನೆಯಾಗಿದ್ದ ಸಜ್ಜೆ, ಮೆಕ್ಕೆಜೋಳ ಕಟಾವಿಗೆ ಬಂದಿವೆ. ಈಗಾಗಲೇ ಎಳ್ಳಿನ ಬೆಳೆ ಕೊಯಿಲಾಗಿದ್ದು ಒಣಗಿಸಲು ಗೂಡು ಹಾಕಲಾಗಿದೆ. ಕೆಲ ರೈತರು ಈಗಾಗಲೇ ಸಜ್ಜೆಯನ್ನು ಕೊಯ್ದು ಗೂಡು ಹಾಕಿದ್ದಾರೆ. ಮೆಕ್ಕೆಜೋಳ ತೆನೆ ಕಟಾವು ಮಾಡುವ ಕಾಲ ಬಂದಿದೆ. ಆದರೆ ನಿತ್ಯ ಮಳೆ ಸುರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅವಕಾಶ ಸಿಗದಂತಾಗಿದೆ. ಎಳ್ಳು, ಸಜ್ಜೆ ಗೂಡುಗಳಲ್ಲಿ ಮಳೆ ನೀರು ಹೊಕ್ಕು ಹಾಳಾಗುತ್ತಿವೆ. ಇನ್ನು ಹೊಲದಲ್ಲಿಯೇ ಇರುವ ಸಜ್ಜೆ ತೆನೆಗಳಲ್ಲಿ ಮೊಳಕೆ ಬರುತ್ತಿದೆ. ಮೆಕ್ಕೆಜೋಳ ತೆನೆಗಳು ಹೊಲದಲ್ಲಿಯೇ ಕೊಳೆಯುತ್ತಿವೆ. ಸೂರ್ಯಕಾಂತಿ ಬೆಳೆಯೂ ಮಳೆಗೆ ಸಿಲುಕಿ ಹಾಳಾಗುತ್ತಿದೆ. ಬೀಜೋತ್ಪಾದನೆ ಹತ್ತಿ ಕಾಯಿಗಳು ಗಿಡದಲ್ಲಿಯೇ ಕೊಳೆಯುತ್ತಿವೆ. ಗಿಡದಲ್ಲಿನ ಹತ್ತಿ ಬಿಡಿಸಲಾಗದೆ ಹಾಳಾಗುತ್ತಿದೆ ಎಂದು ರೈತರಾದ ವೀರಪ್ಪ ಟೆಂಗುಂಟಿ, ನಡುಗಡ್ಡೆಪ್ಪ ಜಗ್ಗಲರ ಇತರರು ಹಾನಿ ಕುರಿತು ‘ಪ್ರಜಾವಾಣಿ’ಗೆ ವಿವರಿಸಿದರು.
ಹಣ್ಣು ತರಕಾರಿ ಬೆಳೆಗಳಿಗೂ ಹಾನಿ
ಅತಿಯಾದ ಮಳೆಯಿಂದ ತೋಟಗಾರಿಕೆ ಬೆಳೆಗಳಿಗೂ ಧಕ್ಕೆಯಾಗಿರುವುದು ಕಂಡುಬಂದಿದೆ. ಬಹಳಷ್ಟು ಖರ್ಚು ಮಾಡಿ ಶ್ರಮವಹಿಸಿ ಬೆಳೆದಿರುವ ದಾಳಿಂಬೆ ಪಪ್ಪಾಯ ಮತ್ತು ಟೊಮೆಟೊ ಇತರೆ ತರಕಾರಿ ಬೆಳೆಗಳಿಗೂ ಸಾಕಷ್ಟು ಹಾನಿಯಾಗಿರುವ ಕುರಿತು ರೈತರು ತಿಳಿಸಿದ್ದಾರೆ.
ಅನೇಕ ತೋಟಗಳಲ್ಲಿ ಕೊಯಿಲಿಗೆ ಬಂದಿರುವ ದಾಳಿಂಬೆ ಕಟಾವು ಮಾಡಲು ಮಳೆ ಅಡ್ಡಿಯಾಗಿದೆ ಕಟಾವಿಗೆ ಬಾರದ ದಾಳಿಂಬೆಗೆ ವಿವಿಧ ರೀತಿ ರೋಗಬಾಧೆ ಉಂಟಾಗಿದೆ. ಪಪ್ಪಾಯಿ ದರ ಅರ್ಧದಷ್ಟು ಕುಸಿದಿದ್ದು ವ್ಯಾಪಾರಿಗಳು ಕೇಳಿದಷ್ಟು ಹಣಕ್ಕೆ ಸಾಗಹಾಕುವ ಅನಿವಾರ್ಯತೆ ಇದೆ ಎಂದು ಬೆಳೆಗಾರ ಬಸವರಾಜ ಪಾಟೀಲ ನಿಂಗನಗೌಡ ಇತರರು ಹೇಳಿದರು. ಮಾಹಿತಿಗಾಗಿ ತಹಶೀಲ್ದಾರ್ ಮತ್ತು ಸಹಾಯಕ ಕೃಷಿ ನಿರ್ದೇಶಕರನ್ನು ಪದೇಪದೇ ಸಂಪರ್ಕಿಸಿದರೆ ಒಬ್ಬರೂ ದೂರವಾಣಿ ಕರೆ ಸ್ವೀಕರಿಸಲಿಲ್ಲ.
ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದ ಮೆಕ್ಕೆಜೋಳ ಮಳೆಗೆ ಸಿಲುಕಿ ಹಾಳಾಗಿದ್ದು ಕುರಿ ಮೇಯಿಸುವಂಥ ಪರಿಸ್ಥಿತಿ ಬಂದಿದ್ದು ಸರ್ಕಾರ ನೆರವಾಗಬೇಕಿದೆ.ರಾಮಪ್ಪ ಕಟ್ಟಿಹೊಲ, ರೈತ
ಮಳೆ ಹೆಚ್ಚಾದರೆ ತೊಗರಿ ಬೆಳೆ ತಡೆದುಕೊಳ್ಳುವುದಿಲ್ಲ. ಮಳೆ ಇದೇ ರೀತಿ ಮುಂದುವರಿದರೆ ತೊಗರಿ ಬೆಳೆಯೂ ಕೈಗೆ ಬರುವುದಿಲ್ಲ.ಮಾರುತಿ ಹೂಗಾರ ಕಂದಕೂರು, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.