ADVERTISEMENT

ನೈತಿಕ ಮೌಲ್ಯದ ಕೊರತೆಯಿಂದ ಮಹಿಳಾ ದೌರ್ಜನ್ಯ ಹೆಚ್ಚಳ: ನ್ಯಾ.ಎಂ.ಎಲ್‌.ಪೂಜೇರಿ ಕಳವಳ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 4:39 IST
Last Updated 12 ಅಕ್ಟೋಬರ್ 2025, 4:39 IST
ಕುಷ್ಟಗಿಯ ಹೊಳಿಯಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ನಡೆದ ವಿಶ್ವ ಹೆಣ್ಣು ಮಗುವಿನ ದಿನ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿಯರೊಂದಿಗೆ ನ್ಯಾಯಾಧೀಶ ಎಂ.ಎಲ್‌.ಪೂಜೇರಿ ಚಾಲನೆ ನೀಡಿದರು
ಕುಷ್ಟಗಿಯ ಹೊಳಿಯಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ನಡೆದ ವಿಶ್ವ ಹೆಣ್ಣು ಮಗುವಿನ ದಿನ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿಯರೊಂದಿಗೆ ನ್ಯಾಯಾಧೀಶ ಎಂ.ಎಲ್‌.ಪೂಜೇರಿ ಚಾಲನೆ ನೀಡಿದರು   

ಕುಷ್ಟಗಿ: ‘ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವ ಕಾರಣಕ್ಕೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಇಲ್ಲಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಂ.ಎಲ್‌.ಪೂಜೇರಿ ಹೇಳಿದರು.

ವಿಶ್ವ ಹೆಣ್ಣು ಮಗುವಿನ ದಿನಾಚರಣೆ ನಿಮಿತ್ತ ಶನಿವಾರ ಪಟ್ಟಣದ ಹೊಳಿಯಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಇತರೆ ದೇಶಗಳಿಗೆ ಹೋಲಿಸಿದರೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ನಮ್ಮ ದೇಶದಲ್ಲಿ ಹೆಚ್ಚು ಕಠಿಣ ಕಾನೂನುಗಳಿವೆ. ಆದರೂ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿಲ್ಲವೆಂದರೆ ಅದಕ್ಕೆ ಸಾಮಾಜಿಕ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳ ಅಧಃಪತನವೇ ಕಾರಣ’ ಎಂದರು.

ADVERTISEMENT

‘ಹೆಣ್ಣು ಮಕ್ಕಳಿಗೆ ಒಬ್ಬ ಒಳ್ಳೆಯ ತಂದೆ, ಅಣ್ಣ, ತಮ್ಮ ಮತ್ತು ಗಂಡನಾಗಿ ಇರಬೇಕೆಂಬ ಪರಿಕಲ್ಪನೆಯಲ್ಲಿನ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಮುಂದುವರಿದಿದೆ. ಆದರೆ, ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆಯಿಂದಾಗಿ ನಮ್ಮಲ್ಲಿಯ ಆದರ್ಶ ಭಾವನೆಗಳು ಕುಬ್ಜವಾಗುತ್ತಿವೆ. ಪ್ರತಿಯೊಬ್ಬರ ಮನೆಯಲ್ಲೂ ಅಕ್ಕ–ತಂಗಿಯರು ಇರುತ್ತಾರೆ. ಹಾಗಾಗಿ ದಾರಿಯಲ್ಲಿ ನಡೆದು ಒಬ್ಬ ಮಹಿಳೆ ಹೋಗುತ್ತಿದ್ದರೆ ಆಕೆಯೂ ನನ್ನ ಸಹೋದರಿ, ಮಗಳು ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡಬೇಕು. ಅಂಥ ಆದರ್ಶ ಪರಂಪರೆ ಹೆಚ್ಚಬೇಕು’ ಎಂದು ಹೇಳಿದರು.

‘ಇತ್ತೀಚಿಗೆ ಕಂಡು ಬಂದಿರುವ ಕೆಲ ಉದಾಹರಣೆಗಳ ಪ್ರಕಾರ ಹೆಣ್ಣಿಗೆ ಹೆಣ್ಣೇ ಶತೃ ಎಂಬ ಹಾಗೆ ವಿದ್ಯಾವಂತ ಮಹಿಳೆಯರೇ ಭ್ರೂಣ ಹೆಣ್ಣು ಎಂಬುದನ್ನು ತಿಳಿದು ಹತ್ಯೆ ಮಾಡಿ ಚರಂಡಿಯಲ್ಲಿ ಬಿಸಾಡಿರುವುದು ನಮ್ಮ ನಾಗರಿಕ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ಯಾನಲ್‌ ವಕೀಲೆ ಲತಾ ಸ್ಥಾವರಮಠ ಹೆಣ್ಣುಮಕ್ಕಳ ಹಕ್ಕುಗಳ ಕುರಿತು ತಮ್ಮ ವಿಶೇಷ ಉಪನ್ಯಾಸದಲ್ಲಿ,‘ಪುಸ್ತಕದಲ್ಲಿನ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಅದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯವಾಗಿರುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತ ಹೋದರೆ ಅದರಿಂದ ಸಾಮಾಜಿಕ ವ್ಯವಸ್ಥೆಯ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಯೋಚಿಸಬೇಕಾಗುತ್ತದೆ’ ಎಂದರು.

ಹೊಳಿಯಮ್ಮ ಪದವಿ ಕಾಲೇಜಿನ ಪ್ರಾಚಾರ್ಯ ತಿಪ್ಪಣ್ಣ ಬಿಜಕಲ್‌ ಮಾತನಾಡಿ,‘ಸಮಾಜ ಎಷ್ಟೇ ಬದಲಾದರೂ ಮಹಿಳೆಯನ್ನು ಇನ್ನೂ ದ್ವಿತೀಯ ದರ್ಜೆಯಲ್ಲಿಯೇ ಪರಿಗಣಿಸಲಾಗುತ್ತಿದೆ. ವಿವಿಧ ರೀತಿಯಲ್ಲಿ ಮಹಿಳೆಯರು ಶೋಷಣೆಗೆ ಒಳಗಾಗುತ್ತಿರುವುದು ನಾಗರಿಕ ಸಮಾಜದ ಲಕ್ಷಣವಲ್ಲ’ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಕ್ಕಬುಕ್ಕ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಚೌಡ್ಕಿ ಕಾರ್ಯಕ್ರಮ ಕುರಿತು ಮಾತನಾಡಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ವಕೀಲರಾದ ಸಂಗನಗೌಡ ಪಾಟೀಲ, ಪಿ.ರಮೇಶ್, ಎಂ.ಬಿ.ಕೊನಸಾಗರ, ಎಸ್.ಕೆ.ಪಾಟೀಲ. ಉಪನ್ಯಾಸಕರಾದ ಈರಮ್ಮ ಮಡಿವಾಳರ, ಶಿವಮಲ್ಲಮ್ಮ ಕಂದಕೂರು, ಶರಣಪ್ಪ ಮಡಿವಾಳರ, ಮಂಜುನಾಥ ತಾಳಮರದ, ಸಮೀನಾ ಬೇಗಂ, ಸಂಗಪ್ಪ ಬಿಳಿಯಪ್ಪನವರ ಹಾಗೂ ಎಚ್‌.ಸುಜಾತಾ ಇದ್ದರು.

ಬಸವರಾಜ ಪೂಜಾರ ನಿರೂಪಿಸಿದರು. ವಿಜಯಲಕ್ಷ್ಮಿ ಪಾಟೀಲ ಸ್ವಾಗತಿಸಿದರು. ನಾಗರಾಜ ಹಳ್ಳಿಗುಡಿ ವಂದಿಸಿದರು.

ಇತರೆ ವಕೀಲರು, ನ್ಯಾಯಾಲಯ ಹಾಗೂ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.