
ಕುಷ್ಟಗಿ: ಸೋಮವಾರ ಇಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಜನರ ಬೇಕು–ಬೇಡಿಕೆಗಳು ಹಾಗೂ ಸಮಸ್ಯೆ ಇತ್ಯರ್ಥಗೊಳಿಸಲು ಪ್ರಮುಖ ವೇದಿಕೆಯಾಯಿತಲ್ಲದೆ, ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿದ್ದು, ವಿಶೇಷ.
ಅನೇಕ ಜನರು ಆನ್‌ಲೈನ್ ಮೂಲಕ ಅರ್ಜಿ, ಅಹವಾಲುಗಳನ್ನು ಸಲ್ಲಿಸಿದರೆ, ಇನ್ನೂ ಕೆಲವರು ನೇರವಾಗಿ ಅರ್ಜಿ ಸಲ್ಲಿಸಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು. ಕುಡಿಯುವ ನೀರು, ಗ್ರಾಮೀಣ ರಸ್ತೆ, ಭೂ ಮಂಜೂರಾತಿ, ಸ್ಮಶಾನಕ್ಕೆ ಭೂಮಿ, ಶಾಲಾ ಕೊಠಡಿಗಳ ನಿರ್ಮಾಣ ಪ್ರಮುಖ ಬೇಡಿಕೆಗಳಾಗಿದ್ದರೆ ಕಂದಾಯ, ಪಂಚಾಯತ್ ರಾಜ್, ನೀರಾವರಿ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಅರ್ಜಿಗಳು ಅನೇಕ ಇಲಾಖೆಗಳಿಗೆ ಸಂಬಂಧಿಸಿದಾಗಿದ್ದವು. ಒಟ್ಟು 261 ಅರ್ಜಿಗಳ ಪೈಕಿ 141ಕ್ಕೂ ಹೆಚ್ಚು ಅರ್ಜಿಗಳಿಗೆ ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು.
ಸಭೆ ಉದ್ಘಾಟಿಸಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ,‘ಆಯಾ ಇಲಾಖೆಗಳ ಮಟ್ಟದಲ್ಲಿ ಸಮಸ್ಯೆಗಳು ಇತ್ಯರ್ಥವಾಗದ ಕಾರಣ ಜನರು ಮೇಲಿನ ಹಂತಕ್ಕೆ ದೂರು ಒಯ್ಯುವುದು ಮುಖ್ಯಮಂತ್ರಿ ಗಮನಕ್ಕೆ ಬಂದಿದೆ. ಜನ ತಮ್ಮ ಕೆಲಸಗಳಿಗೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸಲು ಸರ್ಕಾರವೇ ಸೂಚಿಸಿದೆ. ಸಭೆಯ ಉದ್ದೇಶ ಈಡೇರಬೇಕಾದರೆ ಯಾವುದೇ ನೆಪ ಹೇಳದೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಮಾತನಾಡಿ,‘ಸೂಕ್ತ ಅರ್ಜಿಗಳನ್ನು ತಳಮಟ್ಟದಲ್ಲಿಯೇ ಇತ್ಯರ್ಥಪಡಿಸಲಾಗಿದ್ದು, ಉಳಿದವುಗಳಿಗೆ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕಾಗುತ್ತದೆ. ಉಳಿದ ಅರ್ಜಿಗಳನ್ನು ನಂತರ ಪರಿಶೀಲಿಸಿ ಇತ್ಯರ್ಥಪಡಿಸಬೇಕು. ಇಲ್ಲವಾದರೆ ಸಂಬಂಧಿಸಿದವರಿಗೆ ಹಿಂಬರಹ ನೀಡಬೇಕು. ಈ ವಿಷಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸುತ್ತೋಲೆ ಮೂಲಕ ನಿರ್ದೇಶನ ನೀಡಿದೆ’ ಎಂದರು.
ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಸಭೆಯ ಪ್ರಮಖ ಅಂಶಗಳು ಕಲಾಲಬಂಡಿ ಬಳಿ ಕೆರೆ ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ವಿದ್ಯುತ್ ಕಡಿತದಿಂದ ಹೆಚ್ಚುವರಿ ನೀರು ಪಂಪ್ ಆಗದೆ ತುಂಬಿ ಹರಿದು ರೈತರ ಹೊಲಗಳಿಗೆ ನುಗ್ಗಿ ಬೆಳೆ ಹಾಳಾಗಿರುವ ಬಗ್ಗೆ ಅಲ್ಲಿಯ ರೈತರು ಹೇಳಿದರು. ಗದಗ–ವಾಡಿ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಟೆಂಗುಂಟಿ–ಕುಷ್ಟಗಿ ಮಧ್ಯದ ಹೆಚ್ಚುವರಿ ಭೂ–ಸ್ವಾಧೀನ ಪ್ರಕ್ರಿಯೆ ತ್ವರಿತ ಗತಿಯಲ್ಲಿ ನಡೆಸಲು ರೈಲ್ವೆ ಹೋರಾಟ ಸಮಿತಿಯವರು ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ‘1.8 ಕಿ.ಮೀ ರೇಲ್ವೆ ಮಾರ್ಗದ ವಿನ್ಯಾಸ ಬದಲಾಗಿದೆ. ಹೊಸದಾಗಿ ಭೂ–ಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಶೀಘ್ರದಲ್ಲಿ ಭೂಮಿಯನ್ನು ರೇಲ್ವೆ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ’ ಎಂದರು. ತಾಲ್ಲೂಕಿನಲ್ಲಿ ವಿಂಡ್‌ಪವರ್ ಕಂಪನಿಗಳು ನಿಯಮ ಉಲ್ಲಂಘಿಸುತ್ತಿದ್ದು ರೈತರಿಗೆ ಅನ್ಯಾಯವಾಗುತ್ತಿದೆ. ಕಂಪನಿಯವರ ಸಭೆ ಕರೆದು ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಮನವಿ ಸಲ್ಲಿಸಿದರೂ ಕ್ರಮಕ್ಕೆ ಮುಂದಾಗದ ತಹಶೀಲ್ದಾರ್ ಮೇಲೆ ಕ್ರಮ ಜರುಗಿಸುವ ಅರ್ಜಿ ಸಲ್ಲಿಕೆಯಾಯಿತು. ಅನೇಕ ದಶಕಗಳಿಂದ ಬಾಕಿ ಉಳಿದ ಭೂ ಕಂದಾಯವನ್ನು ಈಗ ಮಾಲೀಕರಾಗಿರುವವರ ಬದಲು ಮೂಲ ಮಾಲೀಕರನ್ನು ಪತ್ತೆಹಚ್ಚಿ ಅವರಿಂದಲೇ ವಸೂಲಿ ಮಾಡಬೇಕು ಎಂದು ಉಪ ವಿಭಾಗಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆಯಲ್ಲಿ ಲಂಚಾವತಾರ: ಶಾಸಕ ಪುರಸಭೆಗೆ ಸಂಬಂಧಿಸಿದಂತೆ ಅರ್ಜಿ ಬಂದ ಸಂದರ್ಭದಲ್ಲಿ ಮಾತನಾಡಿದ ಶಾಸಕ ದೊಡ್ಡನಗೌಡ‘ ಪುರಸಭೆಯಲ್ಲಿ ಲಂಚಕೊಟ್ಟರೆ ಮಾತ್ರ ಕೆಲಸ ಆಗುತ್ತದೆ. ಸಿಬ್ಬಂದಿ ಕಚೇರಿಯಲ್ಲೇ ಇರುವುದಿಲ್ಲ. ಜನ ತೊಂದರೆ ಅನುಭವಿಸುತ್ತಿದ್ದಾರೆ. ಸಿಬ್ಬಂದಿ ಬೇಜವಾಬ್ದಾರಿ ಮಿತಿ ಮೀರಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ಹೇಳಿದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಜರುಗಿಸಲು ಉಪ ವಿಭಾಗಾಧಿಕಾರಿಗೆ ಡಿಸಿ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.