ADVERTISEMENT

ಕುಷ್ಟಗಿ: ಸಮೀಕ್ಷೆಯತ್ತ ಪುರಸಭೆ ಸಿಬ್ಬಂದಿ, ಕಚೇರಿ ಭಣ ಭಣ

ಸರ್ಕಾರದ ವಿವಿಧ ಸೇವೆ ದೊರೆಯದೆ ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 2:51 IST
Last Updated 5 ಅಕ್ಟೋಬರ್ 2025, 2:51 IST
ಕುಷ್ಟಗಿ ಪುರಸಭೆ ಕಚೇರಿ ಸಿಬ್ಬಂದಿ ಇಲ್ಲದೆ ಭಣಗುಡುತ್ತಿದ್ದುದು ಶುಕ್ರವಾರ ಬೆಳಿಗ್ಗೆ ಕಂಡುಬಂದಿತು
ಕುಷ್ಟಗಿ ಪುರಸಭೆ ಕಚೇರಿ ಸಿಬ್ಬಂದಿ ಇಲ್ಲದೆ ಭಣಗುಡುತ್ತಿದ್ದುದು ಶುಕ್ರವಾರ ಬೆಳಿಗ್ಗೆ ಕಂಡುಬಂದಿತು   

ಕುಷ್ಟಗಿ: ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇಲ್ಲಿಯ ಪುರಸಭೆಯ ಎಲ್ಲ ಸಿಬ್ಬಂದಿ ತೆರಳಿದ್ದರಿಂದ ಅಧಿಕಾರಿ, ಸಿಬ್ಬಂದಿ ಇಲ್ಲದೇ ಕಚೇರಿ ಭಣಗುಡುತ್ತಿದ್ದುದು ಶುಕ್ರವಾರ ಕಂಡುಬಂದಿತು.

ವಿದ್ಯುತ್‌ ಸಂಪರ್ಕದ ಆರ್‌.ಆರ್‌ ಸಂಖ್ಯೆ ಹೊಂದಿರುವ ಪಟ್ಟಣದ 23 ವಾರ್ಡುಗಳಿಗೆ ಜಿಪಿಎಸ್‌ ಆಧಾರಿತ ಜಿಯೊ ಟ್ಯಾಗ್‌ ಮಾಡಿ ಯುಎಚ್‌ಐಡಿ ಸಂಖ್ಯೆಯನ್ನೂ ನಮೂದಿಸಲಾಗಿದೆ. ಆದರೆ ಜಿಯೊ ಟ್ಯಾಗ್‌ ಮಾಡಿದ ಆರ್‌ಆರ್‌ ಸಂಖ್ಯೆ ಮನೆಗಳು ಮಾತ್ರ ಬೇರೆ ಬೇರೆ ವಾರ್ಡುಗಳಲ್ಲಿರುವುದರಿಂದ ಸಮೀಕ್ಷೆದಾರರ ಕರ್ತವ್ಯಕ್ಕೆ ಅಡ್ಡಿಯಾಗಿತ್ತು.

ಇದರಿಂದ ಸಮೀಕ್ಷೆ ನಿಗದಿತ ಅವಧಿಯಲ್ಲಿ ಮುಗಿಯುವುದೇ ಅನುಮಾನ ಎಂದರಿತ ಅಧಿಕಾರಿಗಳು ಮನೆಗಳನ್ನು ಪತ್ತೆಹಚ್ಚುವ ಕೆಲಸಕ್ಕೆ ಪುರಸಭೆ ಸಿಬ್ಬಂದಿ ನೆರವು ಪಡೆಯುತ್ತಿದ್ದಾರೆ. ಹಾಗಾಗಿ ಕರ್ತವ್ಯದಲ್ಲಿರುವ ಪುರಸಭೆಯ ಮುಖ್ಯಾಧಿಕಾರಿ ಸಹಿತ ಎಲ್ಲ ಸಿಬ್ಬಂದಿ ಮನೆಗಳ ಪತ್ತೆ ಕಾರ್ಯಕ್ಕೆ ಸಮೀಕ್ಷಕರಿಗೆ ಸಹಕರಿಸುತ್ತಿದ್ದಾರೆ. ಈ ಕಾರಣದಿಂದ ಪುರಸಭೆ ಕಚೇರಿಯಲ್ಲಿ ಬಹಳಷ್ಟು ಸಿಬ್ಬಂದಿ ಪೈಕಿ ಕೇವಲ ಇಬ್ಬರು ಮಾತ್ರ ಇರುವುದು ಕಂಡುಬಂದಿತು.

ADVERTISEMENT

ಸರ್ಕಾರದ ವಿವಿಧ ಸೇವೆಗಳಿಗೆಂದು ಪುರಸಭೆಗೆ ಬಂದಿದ್ದ ಸಾರ್ವಜನಿಕರು ಬಂದ ದಾರಿಗೆ ಸುಂಕ ಇಲ್ಲವೆಂದು ಗೊಣಗುತ್ತಿದ್ದರು. ಚೇಂಬರ್‌ನಲ್ಲಿ ಕುಳಿತಿದ್ದ ಅಧ್ಯಕ್ಷ ಮಹಾಂತೇಶ ಕಲಭಾವಿ ಅವರು ಸಿಬ್ಬಂದಿ ಇಲ್ಲ ಸೋಮವಾರ ಬನ್ನಿ ಎಂದು ಹೇಳುತ್ತಿದ್ದುದು ಕಂಡುಬಂದಿತು.

ಈ ಕುರಿತು ನಂತರ ವಿವರಿಸಿದ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ಸಮೀಕ್ಷೆ ಕೆಲಸ ವಿಳಂಬವಾಗುತ್ತಿರುವುದರಿಂದ ಎಲ್ಲ ಸಿಬ್ಬಂದಿ ಸಮೀಕ್ಷೆ ಕೆಲಸದಲ್ಲಿರುವವರಿಗೆ ಮನೆಗಳನ್ನು ಗುರುತಿಸಲು ಸಹಾಯ ಮಾಡಲು ತೆರಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ಮಧ್ಯೆ ಅ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳಕ್ಕೆ ಆಗಮಿಸುತ್ತಿದ್ದಾರೆ. ಸಮೀಕ್ಷೆ ಕೆಲಸವನ್ನು ಅಚ್ಚುಕಟ್ಟಾಗಿ ತ್ವರಿತಗತಿಯಲ್ಲಿ ನಿರ್ವಹಿಸಲು ಜಿಲ್ಲಾಡಳಿತ ಎಲ್ಲ ಸಿಬ್ಬಂದಿಯನ್ನೂ ಸಮೀಕ್ಷೆ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳು ದೊರೆಯದಂತಾಗಿದೆ ಎಂದು ಪುರಸಭೆಯಲ್ಲಿ ಪ್ರತಿನಿಧಿಯೊಬ್ಬರು ಬೇಸರ ಹೊರಹಾಕಿದರು.

ಪ್ರಮುಖ ಸಿಬ್ಬಂದಿ ಹುದ್ದೆ ಖಾಲಿ

ಪುರಸಭೆಯಲ್ಲಿ ಒಟ್ಟು 23 ಸಿಬ್ಬಂದಿ ಇದ್ದಾರೆ. ಆದರೆ ಪ್ರಮುಖ ಶಾಖೆಗಳಾದ ಕಂದಾಯ ಅಧಿಕಾರಿ ಕಂದಾಯ ನಿರೀಕ್ಷಕ ವಿನ್ಯಾಸ ಶಾಖೆಗಳ ಸಿಬ್ಬಂದಿ ವರ್ಗವಾಗಿದ್ದು ಅನೇಕ ತಿಂಗಳುಗಳಿಂದಲೂ ಈ ಹುದ್ದೆಗಳು ಖಾಲಿ ಉಳಿದಿವೆ.

ಕಚೇರಿಯಲ್ಲಿನ ಸಿಬ್ಬಂದಿಗೆ ಹೆಚ್ಚುವರಿಯಾಗಿ ತಲಾ ಮೂರು ನಾಲ್ಕು ಶಾಖೆಗಳ ಪ್ರಭಾರ ಅಧಿಕಾರ ವಹಿಸಲಾಗಿದೆ. ಕಿರಿಯ ಎಂಜಿನಿಯರ್‌ ವಾರದಲ್ಲಿ ಎರಡು ದಿನ ಇಲ್ಲಿಗೆ ಬರಬೇಕಿದ್ದರೂ ಬರುತ್ತಿಲ್ಲ. ಖಾಲಿ ಹುದ್ದೆಗಳ ಭರ್ತಿಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೇವೆ ಎಂದು ಅಧ್ಯಕ್ಷ ಮಹಾಂತೇಶ ಕಲಭಾವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.