ADVERTISEMENT

ನರೇಗಾ ಕೂಲಿ ಪಾವತಿಸಲು ಮನವಿ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ ಮಹಿಳಾ ಕೂಲಿಕಾರರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 14:08 IST
Last Updated 23 ಏಪ್ರಿಲ್ 2021, 14:08 IST
ನರೇಗಾ ಕೂಲಿಹಣ ಪಾವತಿಗೆ ಒತ್ತಾಯಿಸಿ ಮಹಿಳಾ ಕೂಲಿಕಾರರು ಕುಷ್ಟಗಿ ತಾಲ್ಲೂಕು ಲಿಂಗದಹಳ್ಳಿ ಪಿಡಿಒಗೆ ಮನವಿ ಸಲ್ಲಿಸಿದರು
ನರೇಗಾ ಕೂಲಿಹಣ ಪಾವತಿಗೆ ಒತ್ತಾಯಿಸಿ ಮಹಿಳಾ ಕೂಲಿಕಾರರು ಕುಷ್ಟಗಿ ತಾಲ್ಲೂಕು ಲಿಂಗದಹಳ್ಳಿ ಪಿಡಿಒಗೆ ಮನವಿ ಸಲ್ಲಿಸಿದರು   

ಲಿಂಗದಹಳ್ಳಿ (ಕುಷ್ಟಗಿ): ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ಮಾಡಿದವರಿಗೆ ತಿಂಗಳಾದರೂ ಕೂಲಿ ಹಣ ಪಾವತಿಸಿಲ್ಲ’ ಎಂದು ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಕೂಲಿಕಾರರು ದೂರಿದ್ದಾರೆ.

ಕೂಲಿಹಣ ಪಾವತಿಸುವಂತೆ ಒತ್ತಾಯಿಸಿ ಲಿಂಗದಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ ಮಹಿಳಾ ಕೂಲಿಕಾರರು, ಕಾಯಕಬಂಧುಗಳು ನಂತರ ಮಾಹಿತಿ ನೀಡಿದರು.

ಲಿಂಗದಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಕೆರೆಯಲ್ಲಿ ತಿಂಗಳ ಹಿಂದೆ ಕೆರೆ ಹೂಳು ತೆಗೆಯುವ ಕೆಲಸ ನಿರ್ವಹಿಸಿದ್ದೆವು. ಆದರೆ ಇಲ್ಲಿಯವರೆಗೂ ದುಡಿದ ಕೂಲಿಹಣ ನಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ. ಈ ಬಗ್ಗೆ ಕೇಳಿದರೂ ಪಂಚಾಯಿತಿ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಈ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಅಳಲು ತೋಡಿಕೊಂಡರು.

ADVERTISEMENT

ಸರಿಯಾದ ಸಮಯಕ್ಕೆ ಕೂಲಿಹಣ ಪಾವತಿಯಾಗದ ಕಾರಣ ಜನರು ನರೇಗಾ ಕೆಲಸಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುವಂತಾಗಿದೆ. ಬಡ ಕೂಲಿಕಾರರಿಗೆ ನೆರವಾಗಬೇಕಿದ್ದ ಯೋಜನೆಯಿಂದ ಜನರಿಗೆ ಹೆಚ್ಚಿನ ಪ್ರಯೋಜನವೂ ದೊರೆಯುತ್ತಿಲ್ಲ. ನೂನ್ಯತೆಗಳನ್ನು ಸರಿಪಡಿಸಿ ಈಗಲಾದರೂ ಸಕಾಲದಲ್ಲಿ ಕೂಲಿ ಹಣ ಪಾವತಿಯಾಗುವಂತೆ ಮೇಲಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾವೇರಿ, ಮಂಜುಳಾ, ಶ್ರೀದೇವಿ, ವೀಣಾ, ಹಂಪಮ್ಮ, ಗಂಗಮ್ಮ ಹಾಗೂ ಅಮರಮ್ಮ ಇದ್ದರು.

ನರೇಗಾ ಯೋಜನೆಯಲ್ಲಿನ ಅನುದಾನ ಬಿಡುಗಡೆಯಾಗದ ಕಾರಣ ಕೂಲಿಕಾರರಿಗೆ ಹಣ ಪಾವತಿಯಾಗುತ್ತಿಲ್ಲ. ಕೇವಲ ತಾಲ್ಲೂಕು ಅಷ್ಟೇ ಅಲ್ಲ ಇಡೀ ಜಿಲ್ಲೆಯಲ್ಲಿ ಇದೇ ಸ್ಥಿತಿ ಇದೆ ಎಂದು ಮೂಲಗಳು ತಿಳಿಸಿವೆ. ಈ ವಿಷಯದ ಕುರಿತು ಮಾಹಿತಿಗಾಗಿ ಸಂಪರ್ಕಿಸಿದರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ತಿಮ್ಮಪ್ಪ ಅವರ ಮೊಬೈಲ್‌ ಬಂದ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.