ADVERTISEMENT

ಕೊಪ್ಪಳ: ಹಲವಾಗಲಿಯಲ್ಲಿ ಬಸ್ ನಿಲ್ದಾಣ ಇಲ್ಲದೇ ಪರದಾಟ

ಜುನಸಾಬ ವಡ್ಡಟ್ಟಿ
Published 23 ಆಗಸ್ಟ್ 2025, 5:05 IST
Last Updated 23 ಆಗಸ್ಟ್ 2025, 5:05 IST
ಅಳವಂಡಿ ಸಮೀಪದ ಹಲವಾಗಲಿ ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದೇ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಿರುವುದು
ಅಳವಂಡಿ ಸಮೀಪದ ಹಲವಾಗಲಿ ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದೇ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಿರುವುದು   

ಅಳವಂಡಿ: ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳು ಸೇರಿದಂತೆ ವಿವಿಧ ಗ್ರಾಮಗಳಿಗೆ ಪ್ರತಿನಿತ್ಯ ಸಂಚರಿಸಲು ಹಳ್ಳಿ ಜನರು ಬಸ್‌ಗಾಗಿ ಕಾಯಲು ಸೂಕ್ತ ನಿಲ್ದಾಣ ಇಲ್ಲದೇ ಪರದಾಡುತ್ತಿದ್ದಾರೆ.

ಸಮೀಪದ ಹಲವಾಗಲಿ ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದೆ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ಗಾಗಿ ರಸ್ತೆಯಬದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಲವಾಗಲಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿತ್ಯ ಶಾಲಾ–ಕಾಲೇಜು, ವ್ಯಾಪಾರ ವಹಿವಾಟಿಗೆ ಮತ್ತು ಇತರೆ ಕೆಲಸ ಕಾರ್ಯಗಳಿಗೆ ಅಳವಂಡಿ, ಕೊಪ್ಪಳ ಹಾಗೂ ಮುಂಡರಗಿ ಸೇರಿದಂತೆ ಅನೇಕ ಕಡೆ ತೆರಳಲು ಬಸ್‌ಗಾಗಿ ರಸ್ತೆ ಬದಿಯಲ್ಲಿ ನಿಲ್ಲಬೇಕು.

ADVERTISEMENT
ಹಲವಾಗಲಿ ಗ್ರಾಮದ ರಸ್ತೆಯ ದುಸ್ಥಿತಿ

ರಸ್ತೆ ಕೂಡ ಸಂಪೂರ್ಣ ತೆಗ್ಗು–ಗುಂಡಿಗಳಿಂದ ಕೂಡಿದೆ. ಮಳೆಯಿಂದ ತೆಗ್ಗು–ಗುಂಡಿಗಳಲ್ಲಿ ನೀರು ಸಂಗ್ರಹವಾಗಿದೆ. ಅಂತಹ ಕೆಸರಿನ ಮಧ್ಯೆ ಕೂಡ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್‌ಗಾಗಿ ಕಾಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲವು ಸಲ ಬಿಸಿಲಿನಲ್ಲಿ ಬಸ್‌ಗಾಗಿ ಕಾಯುವುದು ಅನಿವಾರ್ಯ ಎನ್ನುತ್ತಾರೆ ಇಲ್ಲಿನ ಜನರು.

ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಈವರೆಗೂ ಬಸ್ ನಿಲ್ದಾಣ ನಿರ್ಮಾಣ ಮಾಡುವ ಕಾರ್ಯಕ್ಕೆ ಯಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೂ ಮುಂದಾಗುತ್ತಿಲ್ಲ ಎಂದು ಇಲ್ಲಿನ ಜನ ಆರೋಪಿಸಿದ್ದಾರೆ.

‘ಬಸ್ ನಿಲ್ದಾಣ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದ್ದು, ಸೂಕ್ತ ಬಸ್ ನಿಲ್ದಾಣ ನಿರ್ಮಾಣ ಮಾಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉದಾಸೀನ ಮಾಡುತ್ತಿದ್ದಾರೆ’ ಗ್ರಾಮದ ಯುವಕರು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮೂರಾಗ ಬಸ್ ನಿಲ್ದಾಣ ಇಲ್ಲದೆ ನಾವು ಪ್ರತಿದಿನ ಕಾಲೇಜಿಗೆ ಹೋಗಬೇಕು ಅಂದ್ರ ರೋಡ್‌ನ್ಯಾಗ ನಿಂತು ಬಸ್ಸಿಗೆ ಕಾಯಬೇಕ್ರಿ
ಶಾಂತಮ್ಮ ವಿದ್ಯಾರ್ಥಿನಿ
‘ಹಲವಾಗಲಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಬಸ್ ನಿಲ್ದಾಣ ಇಲ್ಲ. ಬಸ್‌ಗಾಗಿ ರಸ್ತೆಯಲ್ಲಿ ನಿಲ್ಲಬೇಕು. ಈ ಬಸ್ ನಿಲ್ದಾಣ ನಿರ್ಮಾಣ ಮಾಡಲು ಯಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಇನ್ನಾದರೂ ಶಾಸಕರು ಹಾಗೂ ಅಧಿಕಾರಿಗಳು ಬಸ್ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕಿದೆ
ಶಾಂತಪ್ಪ ಗಂಡಾಳಿಯರ್ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.