ADVERTISEMENT

ಕುಷ್ಟಗಿ | ತೇವಾಂಶದ ಕೊರತೆ: ಮುಂಗಾರು ಬೆಳೆಗೆ ಆತಂಕದ ಕಾರ್ಮೋಡ

ನಾರಾಯಣರಾವ ಕುಲಕರ್ಣಿ
Published 26 ಜೂನ್ 2025, 6:13 IST
Last Updated 26 ಜೂನ್ 2025, 6:13 IST
ಕುಷ್ಟಗಿ ಬಳಿ ರೈತ ಮಾನಪ್ಪ ಗದ್ದಿ ಹೆಸರು ಬೆಳೆಯಲ್ಲಿ ಅಂತರ ಬೇಸಾಯ ಕೈಗೊಂಡಿರುವುದು
ಕುಷ್ಟಗಿ ಬಳಿ ರೈತ ಮಾನಪ್ಪ ಗದ್ದಿ ಹೆಸರು ಬೆಳೆಯಲ್ಲಿ ಅಂತರ ಬೇಸಾಯ ಕೈಗೊಂಡಿರುವುದು   

ಕುಷ್ಟಗಿ: ಪ್ರಾರಂಭದಲ್ಲಿ ಮುಂಗಾರು ಹಂಗಾಮಿನ ಮಳೆ ಬಹಳಷ್ಟು ನಿರೀಕ್ಷೆ ಹುಟ್ಟಿಸಿತ್ತು. ಸಕಾಲದಲ್ಲಿ ಮಳೆಯಾಗಿದ್ದರಿಂದ ಖುಷಿಯಲ್ಲಿದ್ದ ರೈತರು ಅಲ್ಪಾವಧಿ ಮತ್ತು ದೀರ್ಘಾವಧಿ ಬೆಳೆಗಳ ಬಿತ್ತನೆ ನಡೆಸಿದ್ದು, ಬೆಳೆಗಳೂ ಉತ್ತಮ ರೀತಿಯಲ್ಲಿವೆ. ಆದರೆ, ತೇವಾಂಶದ ಕೊರತೆ ಎದುರಾಗಿದ್ದು ರೈತರು ಮತ್ತೆ ಮಳೆರಾಯನ ನಿರೀಕ್ಷೆಯಲ್ಲಿದ್ದಾರೆ.

ಎರಡು ವಾರದ ಹಿಂದೆ ಪ್ರಖರ ಬಿಸಿಲು ಇದ್ದರೆ ಒಂದು ವಾರದಿಂದ ಮೋಡಗಳು ಗಾಳಿಗೆ ಸರಿದು ಹೋಗುತ್ತಿವೆ, ಮಳೆ ನಿತ್ಯ ಅತಿಥಿಯಂತೆಯೇ ಅನಿಸುತ್ತಿದೆಯಾದರೂ ಮೇಲ್ಮೈ ಮಣ್ಣು ಸಹ ತೇವಗೊಂಡಿಲ್ಲ. ವಾತಾವರಣದಲ್ಲಿ ಆರ್ದ್ರತೆ ಇದ್ದರೂ ಭೂಮಿಯಲ್ಲಿ ಮಾತ್ರ ತೇವಾಂಶದ ಕೊರತೆ ಇಲ್ಲ. ಆಷಾಢ ಮಾಸ ಬರುವ ಮೊದಲೇ ಬಿರುಗಾಳಿ ಬೀಸಿ ಮಳೆ ಕ್ಷೀಣಿಸುವಂತೆ ಮಾಡಿದೆ. ಈ ಕಾರಣಕ್ಕೆ ಕುಷ್ಟಗಿ ಸೇರಿದಂತೆ ಸುತ್ತಲಿನ ತಾಲ್ಲೂಕುಗಳ ಬೆಳೆಗಳು ಬಾಡುತ್ತಿರುವುದರಿಂದ ರೈತರಲ್ಲಿ ಆತಂಕ ಆವರಿಸಿದೆ.

ಮಳೆ ಬೆಳೆ ಕುರಿತಂತೆ ಟೆಂಗುಂಟಿ ಗ್ರಾಮದ ಹಿರಿಯ ರೈತ ಹನುಮಗೌಡ ಪಾಟೀಲ ಹೇಳುವಂತೆ,‘ಪ್ರತಿವರ್ಷ ಒಂದಲ್ಲ ಒಂದು ಸಮಸ್ಯೆ ಎದುರಿಸುವುದು ಸಾಮಾನ್ಯ ಎನ್ನುವಂತಾಗಿದೆ. ಕೆಲ ವರ್ಷಗಳ ಹಿಂದೆ ಮಳೆಯಾಗದೆ ಮುಂಗಾರು ಬಿತ್ತನೆಯಾಗಿರಲಿಲ್ಲ. ಆಗ ಮಳೆ ಬರಲಿಲ್ಲ ಎನ್ನುವ ಚಿಂತೆ, ಈಗ ಬಿತ್ತನೆಯಾದರೂ ಬೆಳವಣಿಗೆ ಹಂತದಲ್ಲಿ ಮಳೆ ಕೈಕೊಟ್ಟಿದೆ. ಇನ್ನು ಒಂದು ವಾರದ ಒಳಗೆ ಮಳೆಯಾಗದಿದ್ದರೆ ಬೆಳೆಗಳು ಕೈ ತಪ್ಪುತ್ತವೆ. ಮಳೆಯಾಗಲಿ ಆಗದಿರಲಿ ರೈತರಿಗೆ ಚಿಂತೆ ತಪ್ಪುತ್ತಿಲ್ಲ’ ಎಂದು ನೋವು ತೋಡಿಕೊಂಡರು.

ADVERTISEMENT

ಮೆಕ್ಕೆಜೋಳ, ಸಜ್ಜೆ, ತೊಗರಿ, ಶೇಂಗಾ ಮತ್ತು ಅಲ್ಪಾವಧಿ ಬೆಳೆಗಳಾದ ಎಳ್ಳು, ಹೆಸರು ಹೀಗೆ ವಿವಿಧ ಬೆಳೆಗಳು ತಿಂಗಳ ಅವಧಿಯಲ್ಲಿದ್ದು ಸದ್ಯ ಉತ್ತಮವಾಗಿವೆ. ಈಗಲಾದರೂ ಮಳೆಯಾದರೆ ಉತ್ತಮ ಇಳುವರಿ ನಿರೀಕ್ಷಿಸಬಹುದು ಎನ್ನುತ್ತಾರೆ ರೈತರು.

‘ಹೆಸರು ಬೆಳೆ ಅತ್ಯುತ್ತಮವಾಗಿವೆ, ತೇವಾಂಶ ಕೊರತೆ ಎದುರಾಗಿದ್ದು ಅಂತರ ಬೇಸಾಯ ಕೈಗೊಳ್ಳುವ ಮೂಲಕ ತೇವಾಂಶ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದೇವೆ. ಇನ್ನೂ ಕಾಲ ಮಿಂಚಿಲ್ಲ ಮಳೆಯಾಗುವ ನಿರೀಕ್ಷೆ ಇದೆ’ ಎಂದು ನೆರೆಬೆಂಚಿ ರೈತ ಮಾನಪ್ಪ ಗದ್ದಿ ಹೇಳಿದರು.

ಬಿತ್ತನೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಆದರೆ ಮಳೆಯಿಲ್ಲದೆ ಬೆಳೆಗಳು ತೇವಾಂಶ ಕೊರತೆಯಿಂದ ಬಾಡುತ್ತಿವೆ. ವಾರದೊಳಗೆ ಮಳೆಯಾದರೆ ಮಾತ್ರ ಅನುಕೂಲ.
ನಾಗರಾಜ ಕಾತರಕಿ ಸಹಾಯಕ ಕೃಷಿ ನಿರ್ದೇಶಕ.
ಸದ್ಯ ತೇವಾಂಶ ಕೊರತೆ ಇರಬಹುದು. ಆದರೆ ಇಂದಲ್ಲ ನಾಳೆ ಮಳೆಯಾಗುವ ಆಶಾಭಾವನೆ ಇದ್ದು ನಿರಾಶೆಗೊಳಗಾಗುವ ಅಗತ್ಯವಿಲ್ಲ.
ಮಾನಪ್ಪ ಗದ್ದಿ ನೆರೆಬೆಂಚಿ ರೈತ
ಏಕ ಬೆಳೆಯತ್ತ ರೈತರ ಚಿತ್ತ
ಕಳೆದ ವರ್ಷ ಮಸಾರಿ ಜಮೀನಿನಲ್ಲಿ ಮೆಕ್ಕೆಜೋಳ ನಿರೀಕ್ಷೆಗೂ ಮೀರಿ ಹೆಚ್ಚಿನ ಇಳುವರಿ ಬಂದಿತ್ತು. ಈ ಬಾರಿ ರೈತರು ಮೆಕ್ಕೆಜೋಳ ಏಕ ಬೆಳೆಯತ್ತ ಗಮನಹರಿಸಿರುವುದು ಕಂಡುಬರುತ್ತಿದೆ. ತಾಲ್ಲೂಕಿನಲ್ಲಿ ಶೇ 70ರಷ್ಟು ಮುಂಗಾರು ಬಿತ್ತನೆಯಾಗಿದ್ದು ಕೃಷಿ ಇಲಾಖೆ ಅಂದಾಜಿನಂತೆ 23 ಸಾವಿರ ಹೆಕ್ಟರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಇದೆ. ಹೆಸರು ಬೆಳೆಯುತ್ತಿದ್ದ ಎರೆ ಜಮೀನಿನ ರೈತರು ಪರ್ಯಾಯವಾಗಿ ತೊಗರಿ ಬೆಳೆಯಲ್ಲಿ ಆಸಕ್ತಿ ವಹಿಸಿದ್ದು ಸುಮಾರು 14 ಸಾವಿರ ಹೆಕ್ಟರ್‌ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದೆ. ಹೆಸರು ಬೆಳೆ ಕ್ಷೇತ್ರ ಕೇವಲ 263 ಹೆಕ್ಟರ್‌ ಮಾತ್ರ. ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಸಜ್ಜೆ ಸುಮಾರು 10 ಸಾವಿರ ಹೆಕ್ಟರ್‌ ಪ್ರದೇಶದಲ್ಲಿದ್ದು ಮೂರನೇ ಸ್ಥಾನಕ್ಕೆ ಕುಸಿದಿದೆ. ಇತ್ತೀಚಿನ ದಿನಗಳಲ್ಲಿ ರೈತರು ಶೇಂಗಾ ಬೆಳೆಯುವುದನ್ನೇ ಕೈಬಿಟ್ಟಿದ್ದು ಬೆರಳೆಣಿಕೆ ಜಮೀನಿನಲ್ಲಿ ಶೇಂಗಾ ಬೆಳೆದಿರುವುದು ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.