ADVERTISEMENT

ಕುಷ್ಟಗಿ: ಕೃಷ್ಣೆ ಉಕ್ಕಿದರೂ ಕೆರೆಗಳಿಗಿಲ್ಲ ‘ಜಲಭಾಗ್ಯ’

ಭಣಗುಡುತ್ತಿರುವ ಕುಷ್ಟಗಿ, ಯಲಬುರ್ಗಾ, ಕನಕಗಿರಿ ತಾಲ್ಲೂಕಿನ ಕೆರೆಗಳು

ನಾರಾಯಣರಾವ ಕುಲಕರ್ಣಿ
Published 25 ಜುಲೈ 2024, 6:13 IST
Last Updated 25 ಜುಲೈ 2024, 6:13 IST
ಕುಷ್ಟಗಿ ತಾಲ್ಲೂಕು ಶಾಖಾಪುರ ಬಳಿಯ ಕೆರೆ ನೀರಿಲ್ಲದೆ ಭಣಡುತ್ತಿರುವುದು
ಕುಷ್ಟಗಿ ತಾಲ್ಲೂಕು ಶಾಖಾಪುರ ಬಳಿಯ ಕೆರೆ ನೀರಿಲ್ಲದೆ ಭಣಡುತ್ತಿರುವುದು   

ಕುಷ್ಟಗಿ: ಕೃಷ್ಣಾ ನದಿ ಉಕ್ಕಿ ಹರಿದರೆ ಬರ ಪೀಡಿತ ಕೊಪ್ಪಳ ಜಿಲ್ಲೆಯ ಕೆರೆಗಳಿಗೆ ಜೀವಕಳೆ. ಸದ್ಯ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಆದರೂ ಕೃಷ್ಣಾ ಭಾಗ್ಯ ಜಲನಿಗಮ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬುವ ಭಾಗ್ಯ ಇಲ್ಲದಂತಾಗಿದೆ.

ಹೆಚ್ಚುವರಿ ನೀರು ಲಭ್ಯವಾದಾಗ ಅದನ್ನು ಬರಪೀಡಿತ ತಾಲ್ಲೂಕುಗಳ ಕೆರೆಗಳಿಗೆ ಹರಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಕೃಷ್ಣಾ ಭಾಗ್ಯ ಜಲ ನಿಗಮ ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಂಡಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ತಾಲ್ಲೂಕಿನ 18 ಹಾಗೂ ಯಲಬುರ್ಗಾ, ಕನಕಗಿರಿ ತಾಲ್ಲೂಕುಗಳ ಅನೇಕ ಕೆರೆಗಳೂ ಈ ಯೋಜನೆಯ ವ್ಯಾಪ್ತಿಯಲ್ಲಿವೆ.

ರಾಜ್ಯದ ಉತ್ತರದ ಜಿಲ್ಲೆಗಳು ಹಾಗೂ ಮಹಾರಾಷ್ಟ್ರದಲ್ಲಿ ಅತಿವೃಷ್ಠಿಯಿಂದ ಕೃಷ್ಣಾ ನದಿಗೆ ಪ್ರವಾಹ ಬಂದರೂ ನೀರಿಲ್ಲದೇ ಕೆರೆಗಳು ಭಣಗುಡುತ್ತಿವೆ. ಕೆರೆ ತುಂಬಿಸುವ ಯೋಜನೆ ಈ ಭಾಗಕ್ಕೆ ವರದಾನವಾಗುವಂತಿದ್ದರೂ ಸಂಬಂಧಿಸಿದವರ ದೂರದೃಷ್ಟಿ ಕೊರತೆಯಿಂದಾಗಿ 'ದೇವರು ವರ ಕೊಟ್ಟರು ಪೂಜಾರಿ ಕೊಡಲೊಲ್ಲ' ಎಂಬಂತಾಗಿದೆ ನಮ್ಮ ಸ್ಥಿತಿ ಎಂಬ ಅಸಮಾಧಾನ ಇಲ್ಲಿಯ ರೈತರದ್ದು.

ADVERTISEMENT

ಕುಷ್ಟಗಿ ತಾಲ್ಲೂಕಿನ 18 ಕೆರೆಗಳ ಪೈಕಿ 11 ಕೆರೆಗಳು ಕೃಷ್ಣಾ ಭಾಗ್ಯ ಜಲನಿಗಮದ ಇಳಕಲ್‌ ಉಪ ವಿಭಾಗಕ್ಕೆ ಮತ್ತು ಉಳಿದ 7 ಕೆರೆಗಳು ಕುಷ್ಟಗಿ ಉಪ ವಿಭಾಗಕ್ಕೆ ಸೇರಿವೆ. ಈ ಹಿಂದೆ ಬಿರು ಬೇಸಿಗೆಯಲ್ಲೂ ಒಂದೆರಡು ಬಾರಿ ಕೆರೆಗಳಿಗೆ ನೀರು ತುಂಬಿಸಲಾಗಿತ್ತು. ಈಗ ನದಿಯಲ್ಲಿ ನೀರಿದ್ದರೂ ಕೆರೆಗಳಿಗೆ ನೀರು ಹರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದೆ ಇಲ್ಲಿಯ ಜನರು ಕೊರಗುತ್ತಿದ್ದಾರೆ.

ಈ ಕುರಿತು 'ಪ್ರಜಾವಾಣಿ'ಗೆ ವಿವರಿಸಿದ ಇಳಕಲ್‌ ಉಪ ವಿಭಾಗದ ಎಇಇ ಅಮರೇಗೌಡ ಪಾಟೀಲ, ನದಿಯಲ್ಲಿ ಸಾಕಷ್ಟು ನೀರಿದೆ. ನದಿ ಬಳಿ ಇರುವ ಜಾಕ್‌ವೆಲ್‌ದಲ್ಲಿ 9000 ಅಶ್ವಶಕ್ತಿಯ 7 ಮೋಟರ್‌ಗಳು ಮತ್ತು ಬಲಕುಂದಿ ಬಳಿ 6000 ಅಶ್ವಶಕ್ತಿಯ 7 ಮೋಟರ್‌ಗಳು ಸಿದ್ಧವಾಗಿವೆ. ಕೇವಲ ಎರಡು ಮೋಟರ್‌ಗಳನ್ನು ಚಾಲೂ ಮಾಡಿದರೆ ಸಾಕಷ್ಟು ನೀರು ಕೆರೆ ತಲುಪುತ್ತದೆ. ಆದರೆ ಗುತ್ತಿಗೆದಾರ ಜಮೀನು ಹಾಳಾಗಿರುವ ರೈತರಿಗೆ ಪರಿಹಾರ ಬಾಕಿ ಮೊತ್ತ ಪಾವತಿಸದ ಕಾರಣ ನೀರು ಹರಿಸಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು.

’ಕಲಾಲಬಂಡಿ ಚೇಂಬರ್‌ಗೆ ನೀರು ಬಂದರೆ ಮಾತ್ರ ಕುಷ್ಟಗಿ ಉಪವಿಭಾಗದ ಉಳಿದ ಕೆರೆಗಳಿಗೆ ನೀರು ಹರಿಸಲು ಸಾಧ್ಯ’ ಎಂದು ಕುಷ್ಟಗಿ ಉಪ ವಿಭಾಗದ ಎಇಇ ರಮೇಶ್‌ ಸ್ಪಷ್ಟಪಡಿಸಿದರು.

ಕೆಲಸ ಪೂರ್ಣಗೊಳಿಸುವಂತೆ ಪದೇಪದೇ ಹೇಳಿದ್ದೇವೆ ಆದರೆ ಗುತ್ತಿಗೆದಾರ ಯಾರ ಮಾತು ಕೇಳುವ ಸ್ಥಿತಿಯಲ್ಲಿಲ್ಲ.
ಅಮರೇಗೌಡ ಪಾಟೀಲ ಎಇಇ ಇಳಕಲ್‌ ಉಪ ವಿಭಾಗ
ರೈತರಿಗೆ ಪರಿಹಾರ ದೊರಕದ ಕಾರಣ ಪಂಪ್‌ಹೌಸ್‌ಗೆ ಕೀಲಿಹಾಕಿದ್ದಾರೆ. ಈ ವಿಷಯವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಬಳಿ ಪ್ರಸ್ತಾಪಿಸಿದ್ದೇನೆ. ಶೀಘ್ರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ದೊಡ್ಡನಗೌಡ ಪಾಟೀಲ ಶಾಸಕ
ನದಿಯಲ್ಲಿ ಸಾಕಷ್ಟು ನೀರಿದೆ ನಮ್ಮಲ್ಲಿ ಮಳೆಯೇ ಇಲ್ಲದ ಕಾರಣ ನಮ್ಮ ಕೆರೆಗಳಲ್ಲಿ ಹನಿ ನೀರಿಲ್ಲ ಕೆರೆ ತುಂಬಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ
ಹನುಮಗೌಡ ಪಾಟೀಲ ಮುದೂಟಗಿ ರೈತ
ಕೆಲಸಕ್ಕೆ ಅಡ್ಡಿ, ಪಂಪ್‌ಹೌಸ್‌ಗೆ ಕೀಲಿ
ಮುದುಟಗಿ ಬಳಿ ಡೆಲೆವರಿ ಚೇಂಬರ್‌ಗೆ ಇಳಕಲ್‌ ತಾಲ್ಲೂಕಿನಲ್ಲಿರುವ ಜಾಕ್‌ವೆಲ್‌ದಿಂದ ಕುಷ್ಟಗಿ ತಾಲ್ಲೂಕಿನ ಮುದುಟಗಿ ಕಲಾಲಬಂಡಿ ಡೆಲೆವರಿ ಚೇಂಬರ್‌ವಾರ್‌ಗೆ ನೀರು ತಲುಪುತ್ತದೆ. ಮುಂದೆ ಯಲಬುರ್ಗಾ ಮತ್ತು ಕನಕಗಿರಿ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಆದರೆ ಮುದುಟಗಿ ಕಲಾಲಬಂಡಿ ನಡುವಿನ ಮುಖ್ಯ ಕೊಳವೆಯಲ್ಲಿ 7-8 ಬಾರಿ ಸೋರಿಕೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ರೈತರ ಜಮೀನಿನ ಮೇಲ್ಮಣ್ಣು ಸಂಪೂರ್ಣ ಕೊಚ್ಚಿಹೋಗಿತ್ತು. ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರೇ ಈ ತಾಂತ್ರಿಕ ದೋಷಕ್ಕೆ ಜವಾಬ್ದಾರರಾಗಿದ್ದು ಅವರೇ ರೈತರಿಗೆ ಪರಿಹಾರ ನೀಡಬೇಕಿದೆ. ಆದರೆ ಪರಿಹಾರ ನೀಡುವವರೆಗೂ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದೆ ರೈತರು ಪಟ್ಟು ಹಿಡಿದಿದ್ದಾರೆ ಎಂದು ನಿಗಮದ ಮೂಲಗಳು ತಿಳಿಸಿವೆ. ಅದೇ ರೀತಿ ಯೋಜನೆಯ ಕೊಳವೆ ಜೋಡಣೆಗೆ ಜಮೀನು ನೀಡಿದ ರೈತರಿಗೂ ಇನ್ನೂ ಪರಿಹಾರ ದೊರಕದ ಕಾರಣ ಮುದುಟಗಿ ಡೆಲೆವರಿ ಚೇಂಬರ್‌ನ ಪಂಪ್‌ಹೌಸ್‌ಗೆ ರೈತರು ಕೀಲಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.