ADVERTISEMENT

ತುಂಬಿದ ಕೆರೆ: ಬೆಳೆಗೆ ಜೀವಕಳೆ

ಹಲವು ವರ್ಷಗಳ ಬಳಿಕ ಕೆರೆ ಭರ್ತಿ: ನೀರು ಸೋರಿಕೆ ತಡೆಯಲು ರೈತರ ಆಗ್ರಹ

ಕಿಶನರಾವ್‌ ಕುಲಕರ್ಣಿ
Published 20 ಆಗಸ್ಟ್ 2020, 6:39 IST
Last Updated 20 ಆಗಸ್ಟ್ 2020, 6:39 IST
ಹನುಮಸಾಗರ ಸಮೀಪದ ಬೀಳಗಿ ಕೆರೆ ತುಂಬಿ ನೀರು ಹೊರ ಬರುತ್ತಿರುವುದು
ಹನುಮಸಾಗರ ಸಮೀಪದ ಬೀಳಗಿ ಕೆರೆ ತುಂಬಿ ನೀರು ಹೊರ ಬರುತ್ತಿರುವುದು   

ಹನುಮಸಾಗರ: ಸಮೀಪದ ಬೀಳಗಿ ಕೆರೆ ತುಂಬಿ ನೀರು ಹೊರ ಬರುತ್ತಿದೆ.

‘ಹಲವಾರು ವರ್ಷಗಳ ಬಳಿಕ ಮುಂಗಾರು ಮಳೆಗೆ ಬಿಳಗಿ ಕೆರೆ ತುಂಬಿದೆ. ಸುತ್ತಲಿನ ಪ್ರದೇಶದಲ್ಲಿರುವ ಕೊಳವೆ ಬಾವಿಗಳಿಗೆ ಮರುಜೀವ ಬಂದಿದೆ’ ಎಂದು ರೈತರು ತಿಳಿಸುತ್ತಾರೆ.

ಸುಮಾರು 38 ಎಕರೆ ಪ್ರದೇಶದಲ್ಲಿರುವ ಈ ಕೆರೆಗೆ ಚಂದ್ರಗಿರಿ, ವೆಂಕಟಾಪೂರ ಹಾಗೂ ಚಂದಾಲಿಂಗ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸದ್ಯ ಹೆಚ್ಚಿನ ನೀರು ಹೊರ ಹೋಗುತ್ತಿರುವ ದೃಶ್ಯ ಮನಮೋಹಕವಾಗಿದೆ. ಸಾರ್ವಜನಿಕರು ತುಂಬಿ ಹರಿಯುವ ಕೆರೆ ನೋಡಲು, ವಾಹನಗಳನ್ನು ತೊಳೆಯಲು, ಸ್ನಾನಕ್ಕೆ ಗುಂಪಾಗಿ ಬರುತ್ತಿದ್ದಾರೆ.

ADVERTISEMENT

‘ಸರ್ಕಾರ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಿ, ಬಾಂದ್ ನಿರ್ಮಾಣ, ಹೆಚ್ಚುವರಿ ನೀರು ಹರಿದು ಹೋಗುವ ಮಾರ್ಗ ಎತ್ತರಿಸಿದರೆ, ನೀರು ಸೋರಿಕೆ ತಡೆಗಟ್ಟಿದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಬಹುದಾಗಿದೆ. ಅಲ್ಲದೆ ಈ ಭಾಗದಲ್ಲಿ ಕೆರೆ ವಿಸ್ತಾರ ಮಾಡಲು ಸಾಧ್ಯತೆ ಇದೆ. ಕೆರೆ ಅಭಿವೃದ್ಧಿಯಾದರೆ ಸುತ್ತಲಿನ ನಾಲ್ಕಾರು ಹಳ್ಳಿಗಳಿಗೆ ಅನುಕೂಲವಾಗುತ್ತದೆ. ಈ ಕುರಿತಾಗಿ ಜಲಸಂಪನ್ಮೂಲ ಸಚಿವರಿಗೆ, ಸಂಸದರಿಗೆ ಒತ್ತಾಯಿಸಿದ್ದೇವೆ’ ಎಂದು ಮುಖಂಡ ಬಸವರಾಜ ಹಳ್ಳೂರ ಹೇಳಿದರು.

ಈ ಕೆರೆಗೆ ಎರಡು ಭಾಗಗಳಲ್ಲಿ ಬೆಟ್ಟ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಈಚೆಗೆ ಗ್ರಾಮ ಪಂಚಾಯಿತಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಹೂಳು ತೆಗೆಯಿಸಿತ್ತು. ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಲು ಇದು ಸಹ ಕಾರಣವಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ ಹೇಳಿದರು. ಈ ಮೊದಲು ಕೆರೆ ಆಸುಪಾಸನಲ್ಲಿರುವ ಗದ್ದೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿದ್ದರು. ಆದರೆ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲದ ಕಾರಣ ರೈತರು ಭತ್ತ ಬೆಳೆಯುವುದನ್ನು ಸದ್ಯ ನಿಲ್ಲಿಸಿದ್ದರು.

12 ವರ್ಷಗಳ ಅವಧಿಯಲ್ಲಿ ಎರಡು ಬಾರಿ ಮುಂಗಾರು ಮಳೆಗೆ ಕೆರೆ ತುಂಬಿದ್ದನ್ನು ಹೊರತುಪಡಿಸಿದರೆ ಇಲ್ಲಿಯವರೆಗೆ ಕೆರೆ ತುಂಬಿದ್ದಿಲ್ಲ. ಕೆರೆ ತುಂಬಿರುವುದು ನಮಗೆ ಸಂತಸ ತಂದಿದೆ ಎಂದು ಸ್ಥಳೀಯರಾದ ಉಪನ್ಯಾಸಕ ಮಹಾಂತೇಶ ಜೀವಣ್ಣವರ ಸಂತಸದಿಂದ ಹೇಳುತ್ತಾರೆ.

ಕೆರೆ ತುಂಬಿದ ನಂತರ ಹೆಚ್ಚುವರಿ ನೀರು ಹರಿದು ಕಡೂರ ಕೆರೆ, ಪುರ್ತುಗೇರಿ ಡ್ಯಾಮಂಗೆ ಹರಿದು ಬಳಿಕ ಕೃಷ್ಣೆಯನ್ನು ಸೇರುತ್ತದೆ. ಸದ್ಯ ಈ ಕೆರೆಯ ನೀರಿನಲ್ಲಿ ಬೇಸಾಯ ನಡೆಯುತ್ತಿಲ್ಲ, ಕೇವಲ ಅಂತರ್ಜಲ ಅಭಿವೃದ್ಧಿಗೆ ಆಸರೆಯಾಗಿದೆ. ಆದರೆ ಈ ಕಾಲುವೆಗೆ ವೈಜ್ಞಾನಿಕವಾಗಿ ಕಾಲುವೆಗಳನ್ನು ನಿರ್ಮಾಣ ಮಾಡಿದರೆ ನೀರಾವರಿ ಮಾಡಲು ಅನುಕೂಲವಾಗುತ್ತದೆ ಎಂದು ರೈತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.