ಕನಕಗಿರಿ: ದೇಶದ ಕಲೆ, ಸಂಸ್ಕೃತಿಗೆ ಲಂಬಾಣಿ ಅಥವಾ ಬಂಜಾರ ಸಮುದಾಯದ ಕೊಡುಗೆ ಅಪಾರವಾಗಿದೆ. ತಮ್ಮ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುವ ಲಂಬಾಣಿಗರು, ತಾಲ್ಲೂಕಿನ ವಿವಿಧ ತಾಂಡಾಗಳಲ್ಲಿ ಕೃಷಿ ಹಾಗೂ ಕೂಲಿ ಮಾಡುತ್ತಾರೆ. ಅಧುನಿಕತೆ ಬೆಳೆದರೂ ಲಂಬಾಣಿ ಮಹಿಳೆಯರ ಉಡುಗೆ ತೊಡುಗೆಗಳಲ್ಲಿ ಬದಲಾಗಿಲ್ಲ. ಈಗಲೂ ಸಾಂಪ್ರದಾಯಿಕ ಉಡುಗೆಗಳಲ್ಲಿಯೇ ಮಿಂಚುತ್ತಾರೆ.
ಉಡುಗೆ ತೊಡುಗೆಗಳು ಕರಕುಶಲ ಕಲೆಯಿಂದ ಕೂಡಿದ್ದು, ಕನಕಾಚಲಪತಿಯ ಜಾತ್ರಾ ಮಹೋತ್ಸವದಲ್ಲಿ ಸಿಗುತ್ತವೆ. ಕೊಪ್ಪಳ, ವಿಜಯನಗರ, ಬಳ್ಳಾರಿ, ಇಲಕಲ್ ಸೇರಿದಂತೆ ತಾಲ್ಲೂಕಿನ ಅಡವಿಬಾವಿ ತಾಂಡಾ, ಅಡವಿಬಾವಿ ಗ್ರಾಮ, ದೊಡ್ಡ ಅಡವಿಬಾವಿ ತಾಂಡಾ, ಚಿರ್ಚನಗುಡ್ಡತಾಂಡ, ನವಲಿ ತಾಂಡಾ, ಬೊಮಸಾಗರ ತಾಂಡಾದ ಬಂಜಾರರು ಪಟ್ಟಣಕ್ಕೆ ಮಾರಾಟಕ್ಕಾಗಿ ಬರುತ್ತಾರೆ. ಆರೇಳು ತಾಸುಗಳವರೆಗೆ ನಡೆಯುವ ವ್ಯಾಪಾರದಲ್ಲಿ ಸಾಮಗ್ರಿಗಳಾದ ಪೇಟಿಯಾ(ಲಂಗ), ಕಾಂಚಳಿ(ರವಿಕೆ) ಗೋಗರಿ(ತಾಳಿ), ಪಾಮಾಡಿ(ಧವನಿ), ಕೋಡಿ(ಸರ), ಜಾಂಜರ್(ಕಾಲು ಗೆಜ್ಜೆ), ಕೈಖಡ್ಗ, ಫಾವಲಿ(ನಾಲ್ಕಾಣಿ ನಾಣ್ಯ), ಬಳೆ, ಗೋಟ್, ಇತರೆ ಸಾಮಾಗ್ರಿಗಳನ್ನು ಲಂಬಾಣಿಗರು ಚೌಕಾಸಿ ಮಾಡಿ ಖರೀದಿಸಿದರು.
‘ಸಾಮಗ್ರಿಗಳ ಮಾರಾಟಗಾರರು ಜಾತ್ರೆ ಮುಗಿಯುವವರೆಗೆ ಇರುವುದಿಲ್ಲ. ರಥೋತ್ಸವದ ಮರು ದಿನ ಆರೇಳು ಗಂಟೆ ಮಾತ್ರ ಭರ್ಜರಿ ವ್ಯಾಪಾರ ನಡೆಯುತ್ತದೆ’ ಎಂದು ಉಮೇಶ ರಾಠೋಡ್ ತಿಳಿಸಿದರು.
ಯುವ ಪೀಳಿಗೆಯವರು ಉಡುಗೆ ತೊಡುಗೆಗಳಿಂದ ದೂರವಿದ್ದರೂ ಹಬ್ಬಹರಿದಿನಗಳಲ್ಲಿ ಕಡ್ಡಾಯವಾಗಿ ಧರಿಸುತ್ತಾರೆ. ಸೇವಾಲಾಲ್ ಜಯಂತಿ, ಶೀತಲ್ ಹಬ್ಬ(ಹುಂಜದ ಮಾಂಸ ತಿನ್ನುವುದು), ದೀಪಾವಳಿ ಹೀಗೆ ವಿವಿಧ ಹಬ್ಬಗಳಲ್ಲಿ ಲಂಬಾಣಿ ಬಟ್ಟೆ ಧರಿಸಿ ಸಂಭ್ರಮಿಸುತ್ತೇವೆ ಎಂದು ವಿದ್ಯಾರ್ಥಿನಿ ಕಾವೇರಿ ಹೇಳಿದರು.
ಒಂದು ಜತೆಗೆ ಉಡುಗೆ ಸಿದ್ಧಪಡಿಸಲು ₹ 18-20 ಸಾವಿರ ಬೇಕಾಗುತ್ತದೆ. ಎಷ್ಟೇ ಬಡವರಿದ್ದರೂ ಮದುವೆ ಸಮಯದಲ್ಲಿ ವಧುವಿನ ಕಡೆಯವರು ಕಡ್ಡಾಯವಾಗಿ ಮಗಳಿಗೆ ಕೊಡಬೇಕಾಗುತ್ತದೆ. ಮುಂಬರುವ ಬಸವ ಜಯಂತಿ ಸಮಯದಲ್ಲಿ ಮದುವೆ ಸೀಜನ್ ಆರಂಭವಾಗುವ ಹಿನ್ನೆಲೆಯಲ್ಲಿ ಕರಕುಶಲ ಸಾಮಗ್ರಿ ಖರೀದಿಸಿ ಮನೆಯಲ್ಲಿ ಕಸೂತಿ ಮಾಡಿ, ಉಡುಗೆಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ’ ಎಂದು ಲಕ್ಷ್ಮವ್ವ ದೊಡ್ಡ ಅಡವಿಬಾವಿ ತಾಂಡಾ ಹಾಗೂ ದೊಡ್ಡ ತಾಂಡದ ಕಾವೇರಿ ತಿಳಿಸಿದರು.
ರಾಯಚೂರು, ವಿಜಯನಗರ, ಇತರೆ ಜಿಲ್ಲೆಗಳ ವರ್ತಕರು ಇಲ್ಲಿಗೆ ಬಂದು ವ್ಯಾಪಾರ ವಹಿವಾಟು ಮಾಡುತ್ತಾರೆ. ವ್ಯಾಪಾರಕ್ಕೆ ಸಾಮಗ್ರಿ ಕೊಡುವ ಮಾಲೀಕರು ಸಹ ಜಾತ್ರೆಗೆ ಬಂದು ಸಂಜೆ ವೇಳೆಯಲ್ಲಿ ಹಣ ಪಡೆದುಕೊಂಡು ಹೋಗುತ್ತಾರೆ ಎಂದು ಅಬ್ಬಿಗೇರಿ ತಾಂಡಾದ ಮಾರುತಿ ಹೇಳಿದರು.
ಕಳೆದ ಹದಿನಾರು ವರ್ಷಗಳಿಂದ ಜಾತ್ರೆಗೆ ಬಂದು ಲಮಾಣಿ ಐಟಂ ಮಾರಾಟ ಮಾಡುತ್ತೇವೆ. ವ್ಯಾಪಾರ ಉತ್ತಮವಾಗಿದೆ ಎಂದು ವಿಜಯನಗರ ಚಂದ್ರು ನಾಯ್ಕ್ ತಿಳಿಸಿದರು.
ಕೊಪ್ಪಳದ ಯಾವ ಜಾತ್ರೆಯಲ್ಲೂ ಲಂಬಾಣಿಗರ ಐಟಂಗಳ ಮಾರಾಟ ಇರುವುದಿಲ್ಲ. ಹೀಗಾಗಿ ಜಿಲ್ಲೆಯ ಬಂಜಾರರು ಇಲ್ಲಿಗೆ ಬಂದು ಖರೀದಿಸುತ್ತಾರೆ. ಹೈದರಾಬಾದ್‌ನಲ್ಲಿ ಸಾಮಗ್ರಿ ತರಿಸುತ್ತೇವೆ ಎಂದು ಚಂದ್ರು ವಿವರಿಸಿದರು.
‘ಲಂಬಾಣಿಗರ ಉಡುಗೆ ತೊಡುಗೆಗಳ ಸಾಮಗ್ರಿಗಳು ಈ ಜಾತ್ರೆ ಬಿಟ್ಟರೆ ಗದಗ, ಗಜೇಂದ್ರಗಡದಲ್ಲಿ ಸಿಗುತ್ತವೆ. ಇದು ಸಮೀಪವಾಗುವ ಕಾರಣ ಇಲ್ಲಿ ಖರೀದಿ ಮಾಡುತ್ತೇವೆ’ ಎಂದು ಯಲಬುರ್ಗಾದ ಹುಣಸಿಹಾಳ ತಾಂಡದ ಮಂಜುಳಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.