ಕರ್ನಾಟಕ ಲೋಕಾಯುಕ್ತ
– ಪ್ರಜಾವಾಣಿ ಚಿತ್ರ
ಕೊಪ್ಪಳ: ತಾಲ್ಲೂಕು ಭೂ ದಾಖಲೆ ಕಚೇರಿಯ ಅಧಿಕಾರಿಗಳು ನಿಯಮಿತವಾಗಿ ಸಮಯಕ್ಕೆ ಸರಿಯಾಗಿ ಅರ್ಜಿ ವಿಲೇವಾರಿ ಮಾಡದ ಕಾರಣ ಉಪಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಅಕ್ಟೋಬರ್ ಕೊನೆಯಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ಅವರ ತಂಡದವರು ಜಿಲ್ಲಾ ಕೇಂದ್ರಕ್ಕೆ ಬಂದಿದ್ದರು. ಆಗ ವಿವಿಧ ಕಚೇರಿಗಳಿಗೆ ಭೇಟಿ ನೀಡಿದ್ದರು. ಖುದ್ದು ದಾಖಲೆಗಳನ್ನು ನೋಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಅವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದ್ದಾರೆ.
ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪ್ರತಿನಿತ್ಯ 25ರಿಂದ 30 ಅರ್ಜಿಗಳ ದಾಖಲೆಗಳನ್ನು ಕೋರಿ ಸ್ವೀಕರಿಸುತ್ತಿದ್ದರೂ, 15ರಿಂದ 20 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿದೆ. 7ರಿಂದ 10 ಅರ್ಜಿಗಳು ಉಳಿದುಕೊಳ್ಳುತ್ತಿವೆ. ನಾವು ಭೇಟಿ ನೀಡಿದಾಗ 200 ಅರ್ಜಿಗಳು ಉಳಿದುಕೊಂಡಿದ್ದವು ಎಂದು ಉಪಲೋಕಾಯುಕ್ತರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ 950 ಅರ್ಜಿಗಳು ಸರ್ವೆಗಾಗಿ ಬಾಕಿ ಇವೆ. ಈ ಅರ್ಜಿಗಳನ್ನು ನಾಲ್ಕೈದು ತಿಂಗಳಲ್ಲಿ ವಿಲೇವಾರಿ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದೇ ಕಚೇರಿಯಲ್ಲಿ 67 ಕೆಜಿಪಿ ಪ್ರಕರಣಗಳು ಬಾಕಿ ಇವೆ ಎಂದು ಸಾರ್ವಜನಿಕರಿಂದ ಗೊತ್ತಾಗಿದೆ. ಹಾಜರಾತಿ ಪರಿಶೀಲಿಸಿದಾಗ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿನಕ್ಕೆ ಒಂದೇ ಬಾರಿ ಸಹಿ ಮಾಡಿದ್ದಾರೆ. ಸಂಜೆ ಕಚೇರಿಯಿಂದ ವಾಪಸ್ ಹೋಗುವಾಗ ಎಡಿಎಲ್‌ಆರ್ ಸೇರಿ ಯಾರೂ ಸಹಿ ಮಾಡಿಲ್ಲ. ಬಯೊಮೆಟ್ರಿಕ್ ಹಾಜರಾತಿ ನಿರ್ವಹಣೆ ಮಾಡಿದ ಬಗ್ಗೆಯೂ ದಾಖಲೆಯಿಲ್ಲ. ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಾತಿ ಪುಸ್ತಕದಲ್ಲಿ ‘ಟಿ’ ಎಂದು ನಮೂದಿಸಿದ್ದು, ಎಲ್ಲಿಗೆ ಹಾಗೂ ಯಾವ ಕರ್ತವ್ಯಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿಯನ್ನೂ ಒದಗಿಸಿಲ್ಲ.
ಈ ಎಲ್ಲ ಲೋಪಗಳನ್ನು ಸರಿಪಡಿಸಿ ಅನುಪಾಲನಾ ವರದಿ ನೀಡಬೇಕು ಎಂದು ಉಪಲೋಕಾಯುಕ್ತರು ಸೂಚಿಸಿದ್ದು, ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ ಕೊರತೆ, ಭೂ ಮಾಪಕರು ಸರಿಯಾಗಿ ಡೈರಿ ನಿರ್ವಹಣೆ ಮಾಡಬೇಕು. ಬಾಕಿ ಉಳಿಸಿಕೊಂಡು ಅರ್ಜಿಗಳ ತ್ವರಿತ ವಿಲೇವಾರಿ, ಸಿಬ್ಬಂದಿ ತಾವು ಕೆಲಸ ಮಾಡುವ ಟೇಬಲ್ ಮೇಲೆ ನಾಮಫಲಕ ಇಲ್ಲದಿರುವುದು ಹೀಗೆ ಹಲವು ಲೋಪಗಳನ್ನು ಉಪಲೋಕಾಯುಕ್ತರು ಪತ್ತೆ ಹಚ್ಚಿದ್ದು, ಇವುಗಳನ್ನು ತ್ವರಿತವಾಗಿ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಗಂಡಿ, ತಪಾಸಕ ಚಂದ್ರಶೇಖರ್ ಎಚ್., ರೆಕಾರ್ಡ್ ಕೀಪರ್ ಸವಿತಾ ರಾಣಿ ಅವರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.