ADVERTISEMENT

ಕುಷ್ಟಗಿ: ಅಲೆದಾಟವಿಲ್ಲ, ಆನ್‌ಲೈನ್‌ನಲ್ಲಿ ಭೂ ದಾಖಲೆ

ಕುಷ್ಟಗಿ ತಾಲ್ಲೂಕಿನಲ್ಲಿ ಭೂ ಸುರಕ್ಷಾ ಯೋಜನೆ ಪರಿಣಾಮಕಾರಿ ಅನುಷ್ಠಾನ

ನಾರಾಯಣರಾವ ಕುಲಕರ್ಣಿ
Published 2 ಜುಲೈ 2025, 6:03 IST
Last Updated 2 ಜುಲೈ 2025, 6:03 IST
ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಶಾಸಕ ದೊಡ್ಡನಗೌಡ ಪಾಟೀಲ ಅರ್ಜಿದಾರರಿಗೆ ಡಿಜಟಲೀಕರಣದ ಕಡತ ಹಸ್ತಾಂತರಿಸಿದರು
ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಶಾಸಕ ದೊಡ್ಡನಗೌಡ ಪಾಟೀಲ ಅರ್ಜಿದಾರರಿಗೆ ಡಿಜಟಲೀಕರಣದ ಕಡತ ಹಸ್ತಾಂತರಿಸಿದರು   

ಕುಷ್ಟಗಿ: ಜೀರ್ಣಾವಸ್ಥೆಯಲ್ಲಿರುವ ಹಳೆಯ ದಾಖಲೆಗಳನ್ನು ಡಿಜಿಲಾಕರ್‌ ಮಾದರಿಯಲ್ಲಿ ಸಂರಕ್ಷಿಸುವುದರ ಜೊತೆಗೆ ಸಾರ್ವಜನಿಕರು ಆನ್‌ಲೈನ್‌ ಮೂಲಕ ಸೇರಿದ ದಾಖಲೆ (ಕಡತ)ಗಳನ್ನು ವಿಳಂಬವಿಲ್ಲದೆ ಪಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ಕಂದಾಯ ಇಲಾಖೆ ಭೂ ಸುರಕ್ಷಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವುದು ಕಂಡುಬಂದಿದೆ.

1954ರಿಂದ 2000ರವರೆಗಿನ ದಾಖಲೆಗಳನ್ನು ಡಿಜಟಲೀಕರಣಗೊಳಿಸುವ ಮೂಲಕ ಅವುಗಳಿಗೆ ಸುರಕ್ಷತೆ ಒದಗಿಸುವ ಕೆಲಸ ಭರದಿಂದ ಸಾಗಿದೆ. ಮುಟ್ಟಿದರೆ ಮುನಿಯುವಂತಿರುವ ದಾಖಲೆಗಳನ್ನು ಇಲ್ಲಿವರೆಗೂ ಕಾಪಾಡಿಕೊಂಡು ಬಂದದ್ದೇ ಸಾಹಸದ ಕೆಲಸ. ಏಕೆಂದರೆ ಪುಟ ತೆಗೆಯುತ್ತಲೇ ಕಡತಗಳು ಪುಡಿಪುಡಿಯಾಗುತ್ತಿದ್ದವು. ಕಳೆದು ಹೋದ ಸಂಗತಿಗಳೂ ಇವೆ. ಹಾಗಾಗಿ ಈಗ ಅವುಗಳನ್ನು ಡಿಜಿ ಲಾಕರ್‌ ಮಾದರಿಯಲ್ಲಿ ಸಂಗ್ರಹಿಸಲಾಗುತ್ತಿದೆ. ಸ್ಕ್ಯಾನ್‌ ಮಾಡುವುದು ನಂತರ ನಿಗದಿತ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವ ಕೆಲಸದಲ್ಲಿ ಸಿಬ್ಬಂದಿ ಬಿಡುವಿಲ್ಲದೆ ತೊಡಗಿಕೊಂಡಿದ್ದು ಅವುಗಳನ್ನು ಪರಿಶೀಲಿಸಿ ಅನುಮೋದನೆ ನೀಡುವಲ್ಲಿ ಶಿರಸ್ತೆದಾರರೂ ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದೊಮ್ಮೆ ಕಡತಗಳು ವೆಬ್‌ಸೈಟ್‌ಗೆ ಅಪ್‌ಲೋಡ್‌ ಆದರೆ ಸಾರ್ವಜನಿಕರು ಯಾವುದೇ ಸ್ಥಳದಲ್ಲಿ ಆನ್‌ಲೈನ್‌ ಮೂಲಕ ಬಾರ್‌ಕೋಡ್‌ ಸಹಿತ ಮೂಲ ಕಡತಗಳನ್ನು ಪಡೆಯುವಷ್ಟರ ಮಟ್ಟಿಗೆ ಹೊಸ ಯೋಜನೆ ಅನುಕೂಲ ಕಲ್ಪಿಸಲಿದೆ ಎನ್ನಲಾಗಿದೆ.

ವೆಬ್‌ಸೈಟ್‌ಗೆ ಪ್ರವೇಶಿಸುವ ಸಾರ್ವಜನಿಕರು ಅಗತ್ಯ ಮಾಹಿತಿ ನಮೂದಿಸಿದರೆ ಅವರ ಲಿಂಕ್‌ ಆಗಿರುವ ಸಂಖ್ಯೆಯ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿ ನಿಗದಿತ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಿದರೆ ಕಡತ ಮುದ್ರಿಸಿಕೊಳ್ಳಲು ಸಾಧ್ಯವಾಗುತ್ತದೆ.

ADVERTISEMENT

ದಾಖಲೆಗಳು ಯಾವವು: ‘ಎ ಮತ್ತು ಬಿ ಕಡತಗಳನ್ನು ಶಾಶ್ವತ ದಾಖಲೆಗಳೆಂದು ವರ್ಗೀಕರಿಸಲಾಗಿದ್ದು ವರ್ಗಾವಣೆ (ಮ್ಯುಟೇಶನ್), ಭೂ ಮಂಜೂರಾತಿ, ಭೂ ಸುಧಾರಣೆ ಹಾಗೂ ಬಿ ಖಾತೆಗಳನ್ನು ಈ ವ್ಯವಸ್ಥೆಯಲ್ಲಿ ಪಡೆಯಬಹುದಾಗಿದೆ. ಹಿಂದೆ ಇದೇ ದಾಖಲೆಗಳನ್ನು ಪಡೆಯುವುದಕ್ಕೆ ಅರ್ಜಿದಾರ ಹಿಡುವಳಿದಾರರು ತಿಂಗಳವರೆಗೆ ಅಲೆಯಬೇಕಿತ್ತು. ಡಿಜಟಲೀಕರಣ ಪೂರ್ಣಗೊಂಡರೆ ಸುಲಭವಾಗಿ ದಾಖಲೆ ಪಡೆಯಲು ಸಾಧ್ಯವಾಗುತ್ತದೆ’ ಎಂದು ಶಿರಸ್ತೆದಾರ ವಿಜಯಾ, ವಿಷಯ ನಿರ್ವಾಹಕ ಸುಂದರ್ ವಿವರಿಸಿದರು.

ಕುಷ್ಟಗಿ ರಾಜ್ಯದಲ್ಲೇ ಮುಂಚೂಣಿ

ಕಡತಗಳ ಪುಟಗಳನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡುವಲ್ಲಿ ಕುಷ್ಟಗಿ ತಾಲ್ಲೂಕು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ನಾನ್‌ಪೈಲಟ್‌ ಕಾರ್ಯಕ್ರಮದಲ್ಲಿ ಕಳೆದ ಮೇ 28ರಿಂದ ಜೂನ್‌ 27ರ ಅವಧಿಯಲ್ಲಿ 304 ಅರ್ಜಿಗಳಿಗೆ ಸಂಬಂಧಿಸಿದ 4178 ಪುಟಗಳನ್ನು ಅಪ್‌ಲೋಡ್‌ ಮಾಡಲಾಗಿದ್ದು ಸರ್ಕಾರಕ್ಕೆ ₹34500 ಶುಲ್ಕ ಪಾವತಿಯಾಗಿದೆ. ಬೇರೆ ಜಿಲ್ಲೆಗಳ ತಾಲ್ಲೂಕುಗಳಿಗಿಂತ ಕುಷ್ಟಗಿ ಮೊದಲ ಸ್ಥಾನದಲ್ಲಿರುವುದನ್ನು ವೆಬ್‌ಸೈಟ್‌ದಲ್ಲಿ ಮಾಹಿತಿ ಲಭ್ಯವಾಗಿದೆ. ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಎಲ್ಲ ಕಡತಗಳು ಅಪ್‌ಲೋಡ್‌ ಆಗಲಿವೆ ಎಂದು ತಿಳಿಸಲಾಗಿದೆ. ಅಪ್‌ಲೋಡ್‌ ಕಡತಗಳೆಷ್ಟು: ತಾಲ್ಲೂಕಿನಲ್ಲಿ 76 ಸಾವಿರ ಹಳೆಯ ಕಡತಗಳ ಪುಟಗಳನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್ ಮಾಡಬೇಕಿದ್ದು ಈಗಾಗಲೇ 40 ಸಾವಿರ ಪುಟ ಅಪ್‌ಲೋಡ್‌ ಮಾಡಲಾಗಿದೆ. ಅಲ್ಲದೇ ಈ ಕಚೇರಿಯ ಮೂವರು ಶಿರಸ್ತೆದಾರರು ಕಡಿಮೆ ಅವಧಿಯಲ್ಲಿಯೂ ಅತಿ ಹೆಚ್ಚು ಪುಟಗಳನ್ನು ಅನುಮೋದಿಸಿರುವುದರಲ್ಲಿ ಈ ತಾಲ್ಲೂಕು ರಾಜ್ಯದಲ್ಲಿ 4ನೇ ಸ್ಥಾನದಲ್ಲಿರುವುದು ಮಹತ್ವದ ಸಂಗತಿಯೂ ಹೌದು.

ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಬದ್ಧತೆಯೊಂದಿಗೆ ಕರ್ತವ್ಯ ನಿರ್ವಹಿಸಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿರುವುದು ಹೆಮ್ಮೆಯ ಸಂಗತಿ
-ಅಶೋಕ ಶಿಗ್ಗಾಂವಿ, ಕುಷ್ಟಗಿ ತಹಶೀಲ್ದಾರ್
ಆನ್‌ಲೈನ್‌ದಲ್ಲಿ ಅರ್ಜಿ ಸಲ್ಲಿಸಿದರೂ ಕಡತ ಪಡೆಯಲು ಸಮಸ್ಯೆಯಾದರೆ ಅರ್ಜಿದಾರರು ತಹಶೀಲ್ದಾರ್ ಕಚೇರಿ ಸಂಪರ್ಕಿಸಿದರೆ ಮೂರು ದಿನಗಳಲ್ಲಿ ಕಡತ ದೊರೆಕಿಸಿಕೊಡಲಾಗುತ್ತದೆ
-ಸುಂದರ್, ವಿಷಯ ನಿರ್ವಾಹಕ
ಕಂದಾಯ ಇಲಾಖೆ ಸಿಬ್ಬಂದಿ ಶ್ರಮವಹಿಸಿ ಗರಿಷ್ಠ ಸಂಖ್ಯೆ ಕಡತಗಳನ್ನು ಅಪ್‌ಲೋಡ್‌ ಮಾಡಿರುವುದು ಮೆಚ್ಚುವಂಥ ಸಂಗತಿ
-ದೊಡ್ಡನಗೌಡ ಪಾಟೀಲ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.