
ಕುಷ್ಟಗಿ: ಕೆಲ ದಶಕಗಳ ಹಿಂದಿನಿಂದಲೂ ಬಾಕಿ ಉಳಿದಿರುವ ಹೆಚ್ಚುವರಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ವಸೂಲಿಗೆ ಮುಂದಾಗಿರುವ ಕಂದಾಯ ಇಲಾಖೆ ಬಾಕಿ ಪಾವತಿಸದ ಜಮೀನಿನ ಹಾಲಿ ಮಾಲೀಕರ ಹೆಸರಿನ ಪಹಣಿಯಲ್ಲಿ ಭೋಜಾ ದಾಖಲಿಸುವಂತೆ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯ ಕ್ರಮ ‘ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೋ ಶಿಕ್ಷೆ’ ಎನ್ನುವಂತಾಗಿದೆ ಎಂಬ ಆಕ್ಷೇಪ ಕೇಳಿಬಂದಿದೆ.
ಜಿಲ್ಲಾಧಿಕಾರಿ ನೀಡಿದ ಸೂಚನೆಯಂತೆ ತಹಶೀಲ್ದಾರ್ ಕಂದಾಯ ನಿರೀಕ್ಷಕರಿಗೆ ಆದೇಶ ನೀಡಿದ್ದು ಒಟ್ಟು ₹1.72 ಲಕ್ಷ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಬಾಕಿ ಬರಬೇಕಿದೆ. ಅದನ್ನು ಭೂ ಕಂದಾಯ ಬಾಕಿ ಎಂದೆ ಪರಿಗಣಿಸಿ ವಸೂಲಿ ಮಾಡಬೇಕು. ಒಂದು ವೇಳೆ ಬಾಕಿ ಮೊತ್ತ ಪಾವತಿಯಾಗದಿದ್ದರೆ ಅಂಥ ಪ್ರಕರಣಗಳಲ್ಲಿ ಪಹಣಿ ಪತ್ರಿಕೆಗಳ ಕಾಲಂ ಸಂಖ್ಯೆ 11ರ ಇತರೆ ಹಕ್ಕುಗಳ ಕಾಲಂದಲ್ಲಿ ಭೋಜಾ ದಾಖಲಿಸಬೇಕು. ಈ ವಿಷಯ ಅತೀ ಜರೂರು ಆಗಿರುವುದರಿಂದ ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ತಹಶೀಲ್ದಾರ್ ಆದೇಶ ನೀಡುತ್ತಿದ್ದಂತೆ ಕ್ರಮಕ್ಕೆ ಮುಂದಾಗಿರುವ ಗ್ರಾಮ ಆಡಳಿತಾಧಿಕಾರಿಗಳು ಸಂಬಂಧಿಸಿದ ಭೂ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದು ಹತ್ತು ದಿನಗಳ ಒಳಗಾಗಿ ನಿಯಮದ ಪ್ರಕಾರ ಉಪ ಖಜಾನೆ ಮೂಲಕ ಅಥವಾ ಗ್ರಾಮ ಆಡಳಿತಾಧಿಕಾರಿ ಮೂಲಕವಾದರೂ ಶುಲ್ಕ ಬಾಕಿ ಹಣ ಪಾವತಿಸುವಂತೆ ನೋಟಿಸ್ ಮೂಲಕ ತಾಕೀತು ಮಾಡಿರುವುದು ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲ ಈ ವಿಷಯದಲ್ಲಿ ನೋಂದಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ ತಪ್ಪಿಗೆ ನಾವೇಕೆ ಶಿಕ್ಷೆ ಅನುಭವಿಸಬೇಕು ಎಂದೆ ನೋಟಿಸ್ ಪಡೆದಿರುವ ಭೂ ಮಾಲೀಕರಿಂದ ಅಸಮಾಧಾನ ವ್ಯಕ್ತವಾಗಿದೆ.
ಆಗಿದ್ದೇನು?: ಉಪ ನೋಂದಣಾಧಿಕಾರಿ ಕಚೇರಿಯಿಂದ ನೀಡಿರುವ ಬಾಕಿದಾರರ ಪಟ್ಟಿಯ ಪ್ರಕಾರ ತಾಲ್ಲೂಕಿನಲ್ಲಿ ತಾವರಗೇರಾ ಮತ್ತು ಕುಷ್ಟಗಿ ಹೋಬಳಿ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಸೇರಿದ ಒಟ್ಟು 7 ಜನ ಭೂ ಮಾಲೀಕರಿಗೆ ಈ ರೀತಿ ನೋಟಿಸ್ ಜಾರಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಮೂಲ ಮಾಲೀಕರು ದಶಕಗಳ ಹಿಂದೆಯೇ ಜಮೀನು ಮಾರಾಟ ಮಾಡಿರುವುದು ಕಂಡುಬಂದಿದೆ.
ಆಗಿನ ನೋಂದಣಿ ಸಂದರ್ಭದಲ್ಲಿದ್ದ ಕರ್ತವ್ಯದಲ್ಲಿದ್ದ ಉಪಖಜಾನೆ ಅಧಿಕಾರಿಗಳು ಕಡಿಮೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ ನಿಗದಿಪಡಿಸಿ ನೋಂದಣಿ ಪ್ರಕ್ರಿಯೆ ನಡೆಸಿ ಕೈತೊಳೆದುಕೊಂಡಿದ್ದಾರೆ. ಆದರೆ ನಂತರ ಮುದ್ರಾಂಕ ಶುಲ್ಕ ಜಮೀನಿನ ಮೌಲ್ಯಕ್ಕೆ ಸರಿಹೊಂದದೆ ಕೊರತೆಯಾಗಿರುವುದನ್ನು ಆಡಿಟ್ ವರದಿಯಲ್ಲಿ ಗುರುತಿಸಲಾಗಿದ್ದು, ವಸೂಲಿ ಕಂದಾಯ ಇಲಾಖೆಗೆ ಪೀಕಲಾಟ ಶುರುವಾಗಿದೆ. ಕೆಲವರು ಸುಮಾರು 20-30 ವರ್ಷಗಳ ಹಿಂದೆಯೇ ಜಮೀನು ಖರೀದಿಸಿದ್ದು ಈಗ ನೋಟಿಸ್ ಪಡೆಯುವಂತಾಗಿದೆ.
ಮೂಲ ಮಾಲೀಕರು ಮಾರಾಟ ಮಾಡಿದ ಮತ್ತು ಇತರೆ ಮೂವರು ಮಾರಾಟ ಮಾಡಿದ್ದಾರೆ. ನಂತರ ನಾಲ್ಕನೆಯವರಾಗಿ ಜಮೀನು ಖರೀದಿಸಿದ್ದೇವೆ. ಶುಲ್ಕ ವಸೂಲಿಗೆ ಈಗ ಕಾನೂನಾತ್ಮಕ ನೋಟಿಸ್ ನೀಡಿದ್ದು ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿದೆಎಂ.ಅಮಿತಕುಮಾರ ನಾಯಕ ಮೆಣೆದಾಳ ಜಮೀನಿನ ಹಾಲಿ ಮಾಲೀಕ
ಬಾಕಿ ಶುಲ್ಕ ವಸೂಲಿಗೆ ಮೇಲಧಿಕಾರಿಗಳ ಆದೇಶವಿದೆ. ಆದರೆ ಹಾಲಿ ಮಾಲೀಕರಿಗೆ ಒತ್ತಾಯಿಸುವುದೂ ಇಲ್ಲ ಮೂಲ ಮಾಲೀಕ ಸಿಗದಿದ್ದರೆ ಭೋಜಾ ಕೂಡಿಸಬೇಕಾಗುತ್ತದೆ. ತಪ್ಪಿಲ್ಲ ಎನ್ನುವುದಾದರೆ ನೋಟಿಸ್‌ನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಅವಕಾಶವಿದೆಅಶೋಕ ಶಿಗ್ಗಾವಿ ತಹಶೀಲ್ದಾರ್
ಕಂದಾಯ ಇಲಾಖೆ ಎನ್‌ಡಿಸಿ ನೀಡಿದ್ದೇಕೆ?
ನೋಂದಣಿ ಸಂದರ್ಭದಲ್ಲಿ ಜಮೀನಿನ ಮೌಲ್ಯದ ಅನ್ವಯ ಶುಲ್ಕ ಕಡಿಮೆಯಾಗಿದೆ ಎಂಬುದು ಮ್ಯುಟಿವೇಶನ್ ಸಂದರ್ಭದಲ್ಲಿ ಕಂದಾಯ ಇಲಾಖೆಯ ಗಮನಕ್ಕೂ ಬಂದೇ ಬರುತ್ತದೆ. ಅಷ್ಟೇ ಅಲ್ಲದೆ ಸದರಿ ಜಮೀನುಗಳ ಮೇಲೆಯೇ ಹಾಲಿ ಭೂ ಮಾಲೀಕರಿಗೆ ಕಂದಾಯ ಇಲಾಖೆಯೇ ಬೇಬಾಕಿ (ಎನ್‌ಡಿಸಿ) ನೀಡಿದ್ದರಿಂದ ಕೆಲ ಭೂ ಮಾಲೀಕರು ಬ್ಯಾಂಕ್‌ಗಳ ಮೂಲಕ ಕೃಷಿ ಸಾಲವನ್ನೂ ಪಡೆದಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಇಷ್ಟು ವರ್ಷಗಳವರೆಗೂ ಸುಮ್ಮನೆ ಇದ್ದು ಈಗ ಬಾಕಿ ಪಾವತಿಸಿ ಇಲ್ಲದಿದ್ದರೆ ಪಹಣಿ ಇತರೆ ಹಕ್ಕುಗಳ ಕಾಲಂದಲ್ಲಿ ಭೋಜಾ ಸೇರಿಸುತ್ತೇವೆ ಎಂದು ಅಮಾಯಕರಿಗೆ ಕಾನೂನು ಪ್ರಕಾರ ನೋಟಿಸ್ ನೀಡಿರುವ ಕಂದಾಯ ಇಲಾಖೆ ಕ್ರಮ ಎಷ್ಟು ಸರಿ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಕೆಲ ಭೂ ಮಾಲೀಕರು 'ಪ್ರಜಾವಾಣಿ' ಬಳಿ ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಕಂದಾಯ ಅಧಿಕಾರಿಯೊಬ್ಬರು ಹತ್ತಿಪ್ಪತ್ತು ವರ್ಷಗಳಲ್ಲಿ ಇಲ್ಲಿ ಕರ್ತವ್ಯ ನಿರ್ವಹಿಸಿರುವ ಅನೇಕ ಉಪ ನೊಂದಣಾಧಿಕಾರಿಗಳು ತಪ್ಪು ಮಾಡಿದ್ದಾರೆ. ನಿಯಮಗಳ ಪ್ರಕಾರ ಅವರೆಲ್ಲರ ವಿರುದ್ಧವೂ ಕ್ರಮ ಜರುಗಿಸಬೇಕು ಇದು ಸಾಧ್ಯವೆ? ಎಂದರು. ಹಾಗಾಗಿರುವಾಗ ತಪ್ಪು ಮಾಡದವರಿಗೆ ನೋಟಿಸ್ ನೀಡಿದ್ದು ಸರಿಯೇ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡದೆ ಜಾರಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.