
ಕುಷ್ಟಗಿ: ಕಾಲಕಾಲಕ್ಕೆ ಬದಲಾವಣೆ ಹೊಂದುವ ಮಹತ್ವದ ಕಾನೂನುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರ ಜನರ ಬಳಿಗೆ ತೆರಳಿ ಮಾಹಿತಿ ನೀಡುವ ಕೆಲಸ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಶಧರ ಶೆಟ್ಟಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಏರ್ಪಡಿಸಿದ್ದ ಅಪ್ರಾಪ್ತ ವಯಸ್ಸಿನವರ ವಿವಾಹ ತಡೆ ಮತ್ತು ಪೋಸ್ಕೊ ಕಾಯ್ದೆ ಕುರಿತ ಕಾನೂನು ಅರಿವು ನೆರವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾನೂನು ಪ್ರಾಧಿಕಾರದ ಸೇವೆಗಳು, ಕಾನೂನಿಗೆ ಸಂಬಂಧಿಸಿದಂತೆ ಒದಗಿಸಲಾಗುವ ಕಾನೂನು ಸೇವಾ ಸೌಲಭ್ಯಗಳು ಮತ್ತು ಅವು ಯಾವ ರೀತಿಯಲ್ಲಿ ಲಭ್ಯವಾಗುತ್ತವೆ ಎಂಬ ಮಾಹಿತಿ ಜನರಲ್ಲಿ ಇಲ್ಲವೇ ಇಲ್ಲ. ಹಾಗಾಗಿ ಕಾನೂನು ಪ್ರಾಧಿಕಾರವೇ ಜನರ ಬಳಿ ಹೋಗಿ ಮಾಹಿತಿ ನೀಡುವ ಉದ್ದೇಶ ಹೊಂದಿದೆ. ಬದಲಾಗಿರುವ ಸನ್ನಿವೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲೂ ಆಮೂಲಾಗ್ರ ಬದಲಾವಣೆಗಳನ್ನು ತರಲಾಗಿದೆ. ಈಗ ನ್ಯಾಯಾಧೀಶರೇ ಗ್ರಾಮಾಂತರ ಪ್ರದೇಶಗಳ ಜನರ ಬಳಿ ತೆರಳಿ ಮಾಹಿತಿ ನೀಡುವ ವ್ಯವಸ್ಥೆ ಇದೆ. ಅದರ ಪ್ರಯೋಜನ ಜನರಿಗೆ ದೊರೆಯಬೇಕು’ ಎಂದು ಹೇಳಿದರು.
ಮಕ್ಕಳು, ಅದರಲ್ಲೂ ಹೆಣ್ಣು ಮಕ್ಕಳು ಬಾಲ್ಯ ವಿವಾಹ, ವಿವಿಧ ರೀತಿಯ ದೌರ್ಜನ್ಯಗಳ ಬಗ್ಗೆ ಜಾಗೃತಿ ಹೊಂದಿರಬೇಕು. ತುರ್ತು ಸಂದರ್ಭದಲ್ಲಿ 15100 ಮತ್ತು ಯಾವುದೇ ತುರ್ತು ಕೊಪ್ಪಳ ಸಂದರ್ಭದಲ್ಲಿ ತೊಂದರೆ ಎದುರಾದಾಗ ಉಚಿತ ಸಹಾಯವಾಣಿಗೆ ಕರೆ ಮಾಡುವ ಮೂಲಕ ಸಮಸ್ಯೆ ಹೊರಬರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಎಸ್.ವಿ.ಡಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ನ್ಯಾಯಾಧೀಶ ಮತ್ತು ಮಂಗಳೂರಿನ ಕಾಯಂ ಜನತಾ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ, ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್.ಪೂಜೇರಿ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಡಾ.ಮೋಹನರಾವ್ ನಾಲ್ವಡೆ, ಗ್ರೇಡ್ 2 ತಹಶೀಲ್ದಾರ್ ರಜನೀಕಾಂತ ಕೆಂಗಾರಿ, ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಸಿಡಿಪಿಒ ಯಲ್ಲಮ್ಮ ಹಂಡಿ, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಶ್ರೀನಿವಾಸ ಉಪಸ್ಥಿತರಿದ್ದರು.
ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು, ನ್ಯಾಯಾಂಗ ಮತ್ತಿತರ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಶಿಕ್ಷಕ ಜೀವನಸಾಬ್ ವಾಲೀಕಾರ ನಿರೂಪಿಸಿದರು.
ಹಿಂದೆ ನ್ಯಾಯಾಧೀಶರ ಬಳಿ ಜನ ಬರುತ್ತಿದ್ದರು. ಈಗ ನ್ಯಾಯಾಧೀಶರೇ ಹಳ್ಳಿಗಾಡಿನ ಜನರ ಮನೆ ಬಾಗಿಲಿಗೆ ಹೋಗಿ ಕಾನೂನು ಸೇವೆಗಳ ಬಗ್ಗೆ ಮಾಹಿತಿ ಮೂಡಿಸುತ್ತಿದ್ದಾರೆ.ಶಶಿಧರ ಶೆಟ್ಟಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.