ADVERTISEMENT

ರಾಜ್ಯದಾದ್ಯಂತ ಮನೆಗೊಂದು ಗ್ರಂಥಾಲಯ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:07 IST
Last Updated 22 ನವೆಂಬರ್ 2025, 6:07 IST
ಕೊಪ್ಪಳದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರನ್ನು ಸದಸ್ಯರು ಹಾಗೂ ಇತರರು ಸನ್ಮಾನಿಸಿದರು
ಕೊಪ್ಪಳದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರನ್ನು ಸದಸ್ಯರು ಹಾಗೂ ಇತರರು ಸನ್ಮಾನಿಸಿದರು   

ಕೊಪ್ಪಳ: ’ಪ್ರಸ್ತುತ ದಿನಮಾನಗಳಲ್ಲಿ ಪುಸ್ತಕ ಓದುಗರಿಗಿಂತ ಬರೆಯುವವರ ಸಂಖ್ಯೆಯೇ ಹೆಚ್ಚಿದ್ದು, ಓದುಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿ ರಚಿಸಲಾಗಿದೆ. ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿ ಹೊಂದಲಾಗಿದೆ‘ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ನಮ್ಮ ಹಿರಿಯರು ಮನೆಯಲ್ಲಿ ದೇವರಮನೆ ಕಟ್ಟಿದಂತೆ ಗ್ರಂಥಾಲಯ ಸ್ಥಾಪಿಸುವ ಪರಂಪರೆ ಬೆಳೆಸಬೇಕಿದೆ. ಪುಸ್ತಕಗಳು ಜ್ಞಾನದ ಸಂಕೇತ. ಮನೆಯಲ್ಲಿ ಗ್ರಂಥಾಲಯವಿದ್ದರೆ ಮನೆಯ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತವೆ’ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಗಂಗಾವತಿಯ ಶರಣಬಸಪ್ಪ ಕೋಲ್ಕಾರ್‌ ಮಾತನಾಡಿ ‘ಮಾನಸಾ ಅವರ ಕನಸಿನ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಡಿ ಪ್ರತಿ ಮನೆಗೆ ಅಡುಗೆ ಕೋಣೆ ಇರುವಂತೆ ಗ್ರಂಥಾಲಯ ಇರಬೇಕು ಎನ್ನುವುದು ಪರಿಕಲ್ಪನೆಯಾಗಿದೆ. ಇಂದಿನ ದಿನಗಳಲ್ಲಿ ಓದುವ ಸಂಸ್ಕೃತಿ ಕಡಿಮೆ ಇದೆ. ಹಾಗಾಗಿ ಮನೆಯಲ್ಲಿ ಗ್ರಂಥಾಲಯ ಇದ್ದರೆ ಓದುವ ಹವ್ಯಾಸ ಬೆಳೆಯುತ್ತದೆ’ ಎಂದರು.

ADVERTISEMENT

‘ಶಾಲಾ-ಕಾಲೇಜಿನ ವಿದ್ಯಾರ್ಥಿಗಳಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ. ಪ್ರಾಧಿಕಾರದ ಅಧ್ಯಕ್ಷರು ಈ‌ ನಿಟ್ಟಿನಲ್ಲಿ ಶಿಕ್ಷಕರು, ಬರಹಗಾರರ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಿ ಪುಸ್ತಕ ಸಂಸ್ಕೃತಿ ಬೆಳೆಸಲು ಪುಸ್ತಕ ಪ್ರಾಧಿಕಾರ ಮುಂದಾಗುತ್ತಿದೆ. ಪ್ರಾಧಿಕಾರ ಜಾರಿಯಾದಾಗಿನ ಜನಸಾಮಾನ್ಯರಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿ ಸಂಚಾಲಕ ಜಿ.ಎಸ್.ಗೋನಾಳ, ಸದಸ್ಯರಾದ ಫಕೀರಪ್ಪ ವಜ್ರಬಂಡಿ, ಮಹ್ಮದರಫಿ, ಅರಳಿ ನಾಗಭೂಷಣ, ರವೀಂದ್ರ ಬಾಕಳೆ, ಕರಿಸಿದ್ಧನಗೌಡ ಮಾಲಿಪಾಟೀಲ್, ಬಸವರಾಜ ಬೋದೂರು, ಅಂಜನಾದೇವಿ, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್, ಪ್ರಮುಖರಾದ ಸಿದ್ಧಲಿಂಗಪ್ಪ ಕೋಟ್ನೆಕಲ್, ರಾಜಕುಮಾರ, ನಾಗರಾಜ ದಂಡೋತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಚಲನಚಿತ್ರ ನಟರು ಜನಪ್ರತಿನಿಧಿಗಳು ರಾಜಕಾರಣಿಗಳ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಯೋಜನೆ ಇದೆ. ಇದಕ್ಕೆ ಕಾರ್ಯ ಚಳವಳಿ ರೂಪ ನೀಡಬೇಕಿದೆ. ಓದುಗರ ಸಂಖ್ಯೆಯೂ ಹೆಚ್ಚಿಸಬೇಕಾಗಿದೆ.
–ಮಾನಸ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.