ಗಂಗಾವತಿ: ‘ಸಾಹಿತ್ಯದ ಓದು ಉಜ್ವಲ ವ್ಯಕ್ತಿತ್ವ ರೂಪಿಸುವುದರ ಜತೆಗೆ ನಮ್ಮ ದೃಷ್ಟಿಕೋನ, ಮನಸ್ಸು, ವೈಚಾರಿಕ ನಿಲುವನ್ನು ವಿಶಾಲವಾಗಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಾಹಿತ್ಯ ಪುಸ್ತಕಗಳನ್ನು ಓದುವ ಅಭಿರುಚಿ ಹೆಚ್ಚಿಸಿಕೊಳ್ಳಬೇಕು’ ಎಂದು ಹಿರಿಯ ಸಾಹಿತಿ ಶರಣಪ್ಪ ಮೆಟ್ರಿ ಹೇಳಿದರು.
ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಲ್ಲಿ ಈಚೆಗೆ ನಡೆದ ಕವಿ ಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಬರವಣಿಗೆ ಎನ್ನುವುದು ತಪಸ್ಸು ಇದ್ದಂತೆ. ನಿರಂತರ ಓದು, ತಾಳ್ಮೆ, ಪದಸಂಬಂಧ, ಕಾಲಮಾನ ಎಲ್ಲವನ್ನೂ ಅರಿತು, ನಿರಂತರ ಬರವಣಿಗೆಯ ಅನುಭವದಿಂದ ಬರಹದಲ್ಲಿ ಪರಿಪಕ್ವತೆ ಲಭಿಸುತ್ತಿದೆ. ನನ್ನ ಬರವಣಿಗೆ ಮೇಲೆ ಡಿವಿಜಿಯವರ ಪ್ರಭಾವ ಸಾಕಷ್ಟಿದೆ. ಅಧ್ಯಾತ್ಮ ವಿಭಿನ್ನ ಅನುಭವ ನೀಡಲಿದ್ದು, ಎಲ್ಲವನ್ನೂ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು’ ಎಂದರು.
ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಮುಮ್ತಾಜ್ ಬೇಗಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿ ಹೊನ್ನೂರಸಾಬ ಕನಕಗಿರಿ ಶರಣಪ್ಪ ಮೆಟ್ರಿ ಅವರ ಎಮ್ಮೆ ತಮ್ಮನ ಕಗ್ಗ ಕೃತಿ ಕುರಿತು ಮಾತನಾಡಿದರು.
ಕಗ್ಗದ ಕೆಲವು ಪದ್ಯಗಳನ್ನು ವಿದ್ಯಾರ್ಥಿಗಳು, ಉಪನ್ಯಾಸಕರು ವಾಚಿಸಿದರು. ನಂತರ ವಿಭಾಗದಿಂದ ಶರಣಪ್ಪ ಮೆಟ್ರಿ ಅವರನ್ನು ಸನ್ಮಾನಿಸಲಾಯಿತು.
ಅತಿಥಿ ಉಪನ್ಯಾಸಕ ಪವನಕುಮಾರ ಗುಂಡೂರು, ಬಸವರಾಜ ವಾಲ್ಮೀಕಿ, ಶ್ರೀನಿವಾಸ, ವೆಂಕಟೇಶರೆಡ್ಡಿ, ಹುಲಿಗೇಶ ಸೇರಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.