ADVERTISEMENT

ಸ್ಟಾಫ್ ನರ್ಸ್ ಹುದ್ದೆಯಿಂದ ಸ್ಥಳೀಯರು ವಂಚಿತ

ಅರ್ಜಿ ಸಲ್ಲಿಕೆಗೆ ಡಿ.10 ಕೊನೆಯ ದಿನ; 20ರಂದು ಹೊರ ಬೀಳುವ ಬಿಎಸ್ಸಿ ನರ್ಸಿಂಗ್‌ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 10:31 IST
Last Updated 4 ಡಿಸೆಂಬರ್ 2019, 10:31 IST
ಅಮರೇಗೌಡ ಬಯ್ಯಾಪುರ
ಅಮರೇಗೌಡ ಬಯ್ಯಾಪುರ   

ಕುಷ್ಟಗಿ: ಬಿಎಸ್‌ಸಿ ನರ್ಸಿಂಗ್‌ ಕೋರ್ಸ್ ಪರೀಕ್ಷೆ ಫಲಿತಾಂಶ ಪ್ರಕಟ ಗೊಳ್ಳುವ ಕೇವಲ ಹತ್ತು ದಿನಗಳ ಮೊದಲೇ ಆರೋಗ್ಯ ಇಲಾಖೆಯು ಗುತ್ತಿಗೆ ಆಧಾರಿತ ಸ್ಟಾಫ್‌ ನರ್ಸ್ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಇದರಿಂದ ಸ್ಥಳೀಯರು ಅವಕಾಶ ವಂಚಿತರಾಗಲಿದ್ದಾರೆ.

ಕಲ್ಯಾಣ ಕರ್ನಾಟಕದ ಆರೂ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿ ಯಾನ ಯೋಜನೆಯಲ್ಲಿ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿ ನ.16 ರಂದು ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು ಅರ್ಜಿ ಸಲ್ಲಿಕೆಗೆ ಡಿ.10 ಅನ್ನು ಕೊನೆಯ ದಿನವನ್ನಾಗಿ ನಿಗದಿಪಡಿಸಿದೆ.

ಅಲ್ಲದೇ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಅಭ್ಯರ್ಥಿಗಳು ಲಭ್ಯವಿಲ್ಲದಿ ದ್ದಲ್ಲಿ ರೋಸ್ಟರ್‌ ನಿಯಮದ ಅನುಸಾರ ಇತರೆ ಜಿಲ್ಲೆಗಳಿಗೆ ಸೇರಿದ ಅಭ್ಯರ್ಥಿಗಳನ್ನೇ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿನ ನೇಮಕಾತಿಗೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.

ADVERTISEMENT

ಕೊಪ್ಪಳದಲ್ಲಿ 49, ಕಲಬುರ್ಗಿಯಲ್ಲಿ 65, ಬೀದರ್ 39, ಬಳ್ಳಾರಿ (ಹೊಸಪೇಟೆ ತಾಲ್ಲೂಕು ಹೊರತುಪಡಿಸಿ) 116, ರಾಯಚೂರು 30 ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಒಟ್ಟ 47 ಸ್ಟಾಫ್‌ನರ್ಸ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

ಬಿಎಸ್ಸಿ ನರ್ಸಿಂಗ್‌ ಪರೀಕ್ಷೆಯ ಅಂತಿಮ ಫಲಿತಾಂಶ ಈ ತಿಂಗಳ ಡಿ.20 ರಂದು ಪ್ರಕಟಗೊಳ್ಳಲಿದ್ದುಈ ಭಾಗದ ಸುಮಾರು 1,500ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದಕ್ಕೆ ಅರ್ಹರಾಗಲಿದ್ದಾರೆ. ಈ ಭಾಗದಅಭ್ಯರ್ಥಿಗಳು ಇಲ್ಲವೆಂಬ ವಿಷಯ ಗೊತ್ತಿದ್ದರೂ ಈ ಭಾಗದ ಸ್ಟಾಪ್‌ನರ್ಸ್ ಖಾಲಿ ಹುದ್ದೆಗಳಿಗೆ ಅನ್ಯ ಜಿಲ್ಲೆಗಳ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಮುತುವರ್ಜಿ ವಹಿಸಿರುವ ಇಲಾಖೆಯ ಕ್ರಮಕ್ಕೆ ಫಲಿತಾಂಶದ ನಿರೀಕ್ಷೆಯಲ್ಲಿರುವ ಜಿಲ್ಲೆಯ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಿಪಡಿಸಿದ್ದಾರೆ.

‘ಅನ್ಯ ಜಿಲ್ಲೆಗಳ ಅಭ್ಯರ್ಥಿಗಳ ಬದಲು ಇದೇ ಪ್ರದೇಶದವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ದಿನಾಂಕವನ್ನು ಮುಂದೂಡುವಂತೆ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಈ ಜಿಲ್ಲೆಯ ಜಿಲ್ಲಾಧಿಕಾರಿ,ಸಿಇಒ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮಾಹಿತಿ ನೀಡಬಹುದಿತ್ತು. ಆದರೆ, ಅಂಥ ಕೆಲಸಕ್ಕೆ ಅಧಿಕಾರಿಗಳು ಮುಂದಾಗದೇ ಇರುವುದು ಬೇಸರ ಮೂಡಿಸಿದೆ’ ಎನ್ನುತ್ತಾರೆ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.