ADVERTISEMENT

ಮಾರ್ಗಸೂಚಿ ಪಾಲನೆಗೆ ಪೊಲೀಸರ ನಿಗಾ

ಲಾಕ್‌ಡೌನ್‌: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ, ಬಸ್ ಸಂಚಾರ ಇಲ್ಲದೆ ತೊಂದರೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 6:05 IST
Last Updated 28 ಏಪ್ರಿಲ್ 2021, 6:05 IST
ನಿಯಮ ಉಲ್ಲಂಘಿಸಿ ವ್ಯಾಪಾರದಲ್ಲಿ ತೊಡಗಿದ್ದ ಕೊಪ್ಪಳದ ಹೊಸಪೇಟೆ ರಸ್ತೆಯ ಫೋಕಸ್ ಮಾರ್ಟ್ ಮೇಲೆ ಡಿವೈಎಸ್‍ಪಿ ನೇತೃತ್ವದ ಪೊಲೀಸರ ತಂಡ ಸೋಮವಾರ ರಾತ್ರಿ ದಾಳಿ ನಡೆಸಿತು ಪ್ರಜಾವಾಣಿ ಚಿತ್ರ: ಭರತ್ ಕಂದಕೂರ
ನಿಯಮ ಉಲ್ಲಂಘಿಸಿ ವ್ಯಾಪಾರದಲ್ಲಿ ತೊಡಗಿದ್ದ ಕೊಪ್ಪಳದ ಹೊಸಪೇಟೆ ರಸ್ತೆಯ ಫೋಕಸ್ ಮಾರ್ಟ್ ಮೇಲೆ ಡಿವೈಎಸ್‍ಪಿ ನೇತೃತ್ವದ ಪೊಲೀಸರ ತಂಡ ಸೋಮವಾರ ರಾತ್ರಿ ದಾಳಿ ನಡೆಸಿತು ಪ್ರಜಾವಾಣಿ ಚಿತ್ರ: ಭರತ್ ಕಂದಕೂರ   

ಕೊಪ್ಪಳ: ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಲಾಕ್‌ಡೌನ್‌ ಜಾರಿಯಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು.

ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ತಡವಾಗಿ ಅನೇಕರು ಬಂದ ಕಾರಣ ಪೊಲೀಸರ ಭಯದಿಂದ ಅಂಗಡಿಗಳನ್ನು ಮುಚ್ಚಿಕೊಂಡು ತೆರಳಿದರು. ಹಾಲು, ಔಷಧ, ತರಕಾರಿ, ಕಿರಾಣಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೃಷಿ ಮತ್ತು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅವಕಾಶ ನೀಡಿದ್ದರೂ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದರಿಂದ ಅನೇಕರು ಪಟ್ಟಣಗಳತ್ತ ಬಾರದೇ ಕೆಲಸ ಕಾರ್ಯಕ್ಕೆ ಅಡೆತಡೆಯಾಯಿತು.

ಬಾರ್‌ಗಳು ಓಪನ್‌ ಇದ್ದರೂ ಉಪಹಾರ ಮಂದಿರಗಳಲ್ಲಿ ಪಾರ್ಸಲ್‌ಗೆ ಅವಕಾಶ ನೀಡಲಾಗಿತ್ತು. ನಗರದ ಒಳಗಿನ ಪ್ರದೇಶಗಳಲ್ಲಿ ಜನರು ಗುಂಪು, ಗುಂಪಾಗಿ ವಿರಾಮವಾಗಿ ಕಾಲ ಕಳೆಯುತ್ತಿದ್ದರು. ಮುಖ್ಯ ರಸ್ತೆ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ADVERTISEMENT

14 ದಿನ ಲಾಕ್‌ಡೌನ್‌ ಘೋಷಣೆ ಮಾಡಿರುವ ಕಾರಣಕ್ಕೆ ಮದುವೆ-ಮುಂಜಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮೊದಲೇ ನಿಗದಿಪಡಿಸಿದ್ದರಿಂದ ತೀವ್ರ ಆತಂಕ ಪಡುವಂತೆ ಆಗಿದೆ. ಮದುವೆಗೆ ನಗರದ ಎಲ್ಲ ಕಲ್ಯಾಣ ಮಂಟಪಗಳನ್ನು ಬುಕ್‌ ಮಾಡಲಾಗಿತ್ತು. ಸೀಮಿತ ಜನರ ಮದುವೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.

ಹೂವು ಮತ್ತು ತರಕಾರಿ ಬೆಳೆಗಳನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ತಂದರೆ ಕೊಳ್ಳುವವರು ಕಡಿಮೆ ಸಂಖ್ಯೆಯಲ್ಲಿ ಬರುವುದರಿಂದ ನಷ್ಟ ಆಗುತ್ತಿದೆ. ಕಲ್ಲಂಗಡಿ ಮತ್ತು ಕರಬೂಜ ಹಣ್ಣಿನ ಅಂಗಡಿಗಳು ಇದ್ದರೂ ಗ್ರಾಹಕರ ಕೊರತೆ ಇದೆ. ಏರುತ್ತಿರುವ ಬಿಸಿಲು, ಉದ್ಯೋಗವಿಲ್ಲದೆ ಬಡವರು ಮತ್ತಷ್ಟು ಕಂಗೆಡುವಂತೆ ಆಗಿದೆ.

ಮಾಸ್ಕ್‌ ಇಲ್ಲದೇ ಸಂಚಾರ ಮಾಡುವವರನ್ನು ಹಿಡಿದು ದಂಡ ವಿಧಿಸುತ್ತಿರುವುದು ಮುಂದುವರಿದಿದೆ. ನಿಯಮ ಮೀರಿ ವ್ಯಾಪಾರ-ವಹಿವಾಟು ನಡೆಸುವ ಅಂಗಡಿಗಳನ್ನು ಸೀಜ್‌ ಮಾಡಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಜನರು ಸೇರಿದಲ್ಲಿ ಅವರನ್ನು ಚದುರುವಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗುತ್ತಿತ್ತು.

ಸರ್ಕಾರ ಸೋಮವಾರ ಲಾಕ್‌ಡೌನ್‌ ಷೋಷಣೆ ಮಾಡಿದ್ದು ರಾತ್ರಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಗುಳೆ ಹೋಗಿದ್ದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಂದು ಇಳಿಯುತ್ತಿರುವುದು ಕಂಡು ಬಂತು. ರೈಲುಗಳು ಭರ್ತಿಯಾಗಿದ್ದವು. ಕೆಲವು ಗ್ರಾಮಗಳಿಗೆ ಬಸ್ ಇಲ್ಲದೆ ಜನರು ಪರದಾಡುತ್ತಿರುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.