ADVERTISEMENT

ಲಾಕ್‌ಡೌನ್‌; ಜನರಿಂದ ಪೂರ್ಣ ಸಹಕಾರ

ಕುಷ್ಟಗಿ: ಅಘೋಷಿತ ಬಂದ್‌, ಪೊಲೀಸರು ನಿರಾಳ

​ಪ್ರಜಾವಾಣಿ ವಾರ್ತೆ
Published 18 ಮೇ 2021, 2:48 IST
Last Updated 18 ಮೇ 2021, 2:48 IST
ಕುಷ್ಟಗಿಯ ಜನನಿಬಿಡ ಮುಖ್ಯರಸ್ತೆ ಸೋಮವಾರ ಬಿಕೋ ಎನ್ನುತ್ತಿತ್ತು
ಕುಷ್ಟಗಿಯ ಜನನಿಬಿಡ ಮುಖ್ಯರಸ್ತೆ ಸೋಮವಾರ ಬಿಕೋ ಎನ್ನುತ್ತಿತ್ತು   

ಕುಷ್ಟಗಿ: ಜನರು ಸ್ವಯಂ ಪ್ರೇರಣೆಯಿಂದ ಮನೆ ಸೇರಿದ್ದರಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮೊದಲ ದಿನದ ಸಂಪೂರ್ಣ ಲಾಕ್‌ಡೌನ್‌ ಯಶಸ್ವಿಯಾಗಿದೆ.

ಬೆಳಿಗ್ಗೆಯಿಂದ ಸಂಜೆವರೆಗೂ ತೀರಾ ಅಗತ್ಯ ಇದ್ದ ಬೆರಳೆಣಿಕೆ ಜನರನ್ನು ಹೊರತುಪಡಿಸಿ ಯಾರೂ ಮನೆಯಿಂದ ಹೊರಗೆ ಬಾರದಿರುವುದು, ಪೆಟ್ಟಿಗೆ ಅಂಗಡಿ ಸೇರಿ ಯಾವುದೇ ಅಂಗಡಿಗಳು ಬಾಗಿಲು ತೆರೆಯದಿರುವುದು ಅಘೋಷಿತ ಬಂದ್‌ನಂತೆ ಕಂಡುಬಂದಿತು.

ಪ್ರತಿ ಬಾರಿ ಲಾಕ್‌ಡೌನ್‌ ಜಾರಿಯಾದ ಸಂದರ್ಭದಲ್ಲಿ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದ ಪೊಲೀಸರು ಈ ದಿನ ಮಾತ್ರ ನಿರಾಳರಾಗಿದ್ದರು.

ADVERTISEMENT

ಗೂಡ್ಸ್‌ ವಾಹನಗಳಿಗೆ ಮಾತ್ರ ಅವಕಾಶ ಇದ್ದುರಿಂದ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಡಿಮೆ ಪ್ರಮಾಣದಲ್ಲಿ ವಾಹನಗಳು ಸಂಚರಿಸಿದವು. ಪಟ್ಟಣದ ಪ್ರಮುಖ ರಸ್ತೆಗಳು, ವೃತ್ತಗಳು, ಜನನಿಬಿಡ ಪ್ರದೇಶ, ಮಾರುಕಟ್ಟೆ ಪ್ರಾಂಗಣಗಳು ಮತ್ತು ಸಂತೆ ಮೈದಾನಗಳು ಜನರು ಇಲ್ಲದೆ ಬಿಕೋ ಎನ್ನುತ್ತಿದ್ದವು.

ಐದು ದಿನಗಳವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಎಲ್ಲ ಸರ್ಕಾರಿ ಕಚೇರಿಗಳು, ಬ್ಯಾಂಕ್‌ ಶಾಖೆಗಳು ಮುಚ್ಚಲ್ಪಟ್ಟಿದ್ದವು. ಐದು ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಳಿಗ್ಗೆ ರಸ್ತೆಗೆ ಇಳಿದಿದ್ದ ತಹಶೀಲ್ದಾರ್ ಎಂ.ಸಿದ್ದೇಶ್, ಸರ್ಕಲ್‌ ಇನ್‌ಸ್ಪೆಕ್ಟರ್ ಎಸ್‌.ಆರ್‌.ನಿಂಗಪ್ಪ ಮತ್ತು ಸಬ್‌ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ ಪರಿಸ್ಥಿತಿಯನ್ನು ಅವಲೋಕಿಸಿದರು. ರಸ್ತೆಗೆ ಬಂದ ಬೈಕ್‌ ಹಾಗೂ ವಾಹನಗಳ ತಪಾಸಣೆ ಮಾಡಿದರು. ಅಲ್ಲದೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದ ಪೊಲೀಸ್‌ ಅಧಿಕಾರಿಗಳು ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ, ಮಾಸ್ಕ್‌ ಕಡ್ಡಾಯವಾಗಿ ಹಾಕಿಕೊಳ್ಳಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

'ಜನರು ನಮಗಲ್ಲ ಸಾವಿಗೆ ಹೆದರಿ ಮನೆ ಬಿಟ್ಟು ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ಹಿಂದೆ ಎಷ್ಟು ಹೇಳಿದರೂ ಕೇಳದೆ ರಸ್ತೆಗೆ ಇಳಿಯುತ್ತಿದ್ದರು. ಈಗ ಯಾರಿಗೂ ಹೇಳುವ ಅಗತ್ಯವೇ ಇಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು 'ಪ್ರಜಾವಾಣಿ' ಬಳಿ ಹೇಳಿದರು.

ಈ ಮಧ್ಯೆ ಐದು ದಿನಗಳವರೆಗೆ ಔಷಧ ಅಂಗಡಿಗಳನ್ನು ಹೊರತುಪಡಿಸಿ ತರಕಾರಿ ಮಾರಾಟ ಸೇರಿದಂತೆ ಎಲ್ಲ ರೀತಿಯ ವ್ಯಾಪಾರ ವಹಿವಾಟನ್ನು ಸಂಪೂರ್ಣ ನಿಷೇಧಿಸಿದೆ. ಹಾಗಾಗಿ ಜನರು ಭಾನುವಾರದಂದೆ ಅಗತ್ಯ ವಸ್ತುಗಳನ್ನು ಖರೀದಿಸಿ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.