ಗಂಗಾವತಿ: ‘ಸರಳ ನ್ಯಾಯದಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳುವ ವ್ಯವಸ್ಥೆ ಖಾಯಂ ಜನತಾ ಅದಾಲತ್ ಆಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಒಂದನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿದರು.
ತಾಲ್ಲೂಕಿನ ವಡ್ಡರಹಟ್ಟಿ ಗ್ರಾ.ಪಂ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾ.ಪಂ, ಪೊಲೀಸ್ ಇಲಾಖೆ, ಸಿಡಿಪಿಒ,ಗ್ರಾ.ಪಂ ವಡ್ಡರಹಟ್ಟಿ ಸೇರಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬುಧವಾರ ನಡೆದ ಖಾಯಂ ಜನತಾ ನ್ಯಾಯಾಲಯ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ಬೇಕಾಗಿದೆ. ಇಂದು ಪ್ರತಿ ವಿಚಾರಕ್ಕೂ ಸಾರ್ವಜನಿಕರು ನ್ಯಾಯಾಲಯಕ್ಕೆ ಬರುತ್ತಾರೆ. ಜನರ ಕ್ಲಿಷ್ಟಕರ ಸಮಸ್ಯೆ, ದಾವೆಗಳನ್ನು ಸುಲಭ ಪ್ರಕ್ರಿಯೆಗಳ ಮೂಲಕ ಇತ್ಯರ್ಥಪಡಿಸುವುದು ನ್ಯಾಯಾಂಗದ ಉದ್ದೇಶವಾಗಿದೆ. ಹಾಗಾಗಿ ಸಾರ್ವಜನಿಕರು ಇದರ ಪ್ರಯೋಜನೆ ಪಡೆಯಬೇಕು.ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಉಪನ್ಯಾಸ ನೀಡಿ, ‘1987ರ ಕಾನೂನು ಸೇವೆ ಪ್ರಾಧಿಕಾರ ಕಾಯ್ದೆ ಪ್ರಕಾರ ವ್ಯಾಜ್ಯಗಳನ್ನು ನ್ಯಾಯಾಲಯದ ಹೊರಗಡೆ ಇತ್ಯರ್ಥಪಡಿಸಿಕೊಳ್ಳುತ್ತಿದ್ದರು. ಮುಂದುವರಿದ ಭಾಗವಾಗಿ 2007ರಲ್ಲಿ ರಾಜ್ಯ ಸರ್ಕಾರ ಕಾಯ್ದೆ ತಿದ್ದುಪಡಿ ತಂದು, ಖಾಯಂ ಜನತಾ ನ್ಯಾಯಾಲಯ ಸ್ಥಾಪಿಸಿದೆ. ಸಾರ್ವಜನಿಕ ಉಪಯುಕ್ತ ಸೇವೆಗಳ ವ್ಯಾಜ್ಯ ಬಂದಲ್ಲಿ ನ್ಯಾಯಾಲಯಕ್ಕೆ ಹೋಗದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿದರೆ ಮೂರು ತಿಂಗಳಲ್ಲಿ ವ್ಯಾಜ್ಯ ಇತ್ಯರ್ಥಪಡಿಸುತ್ತಾರೆ’ ಎಂದರು.
ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಶಿವಪ್ಪ ಹತ್ತಿಮರ, ಹಿರಿಯ ಸಿವಿಲ್ ನ್ಯಾಯಾಧೀಶ ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಾಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮೇಘಾ ಸೋಮಣ್ಣನವರ್, ತಹಶೀಲ್ದಾರ್ ರವಿ ಅಂಗಡಿ, ತಾ.ಪಂ.ಇಒ ರಾಮರೆಡ್ಡಿ ಪಾಟೀಲ, ಸಿಡಿಪಿಒ ಜಯಶ್ರೀ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುರೇಶ ಚಲವಾದಿ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಶರಣಬಸಪ್ಪ ನಾಯಕ, ಉಪಾಧ್ಯಕ್ಷ ಪ್ರಕಾಶ ಕುಸಬಿ, ಗ್ರಾ.ಪಂ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.