ADVERTISEMENT

LS Polls | ಸಂಗಣ್ಣ ಕರಡಿಗೆ ಟಿಕೆಟ್ ನಿರಾಕರಣೆ: ಪಕ್ಷದ ಕಚೇರಿಯ ಗಾಜು ಧ್ವಂಸ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 7:09 IST
Last Updated 14 ಮಾರ್ಚ್ 2024, 7:09 IST
   

ಕೊಪ್ಪಳ: ಮುಂಬರುವ ಲೋಕಸಭಾ ಚುನಾವಣೆಗೆ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ನಿರಾಕರಣೆ ಮಾಡಿರುವುದರಿಂದ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.

ಇಲ್ಲಿನ ಬಿಜೆಪಿ ‌ಕಚೇರಿಗೆ ಗುರುವಾರ ಬೆಳಿಗ್ಗೆ ಬಂದು ಪಕ್ಷದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ರಾಜೀನಾಮೆ ನೀಡಿ ಸಂಸದರಿಗೆ ಆದ ಅನ್ಯಾಯ ಸರಿಪಡಿಸಬೇಕು ಎಂದರು‌. ಭಾರತಮಾತೆ ಭಾವಚಿತ್ರಕ್ಕೆ ಇದ್ದ ಗಾಜಿನ ಗ್ಲಾಸ್, ಕಚೇರಿಯ ಕಿಟಕಿಯ ಗಾಜುಗಳನ್ನು ಒಡೆದು ಹಾಕಿದರು.

ಪಕ್ಷ ಘೋಷಣೆ ಮಾಡಿರುವ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪಕ್ಷದಲ್ಲಿ ಯಾರಿಗೂ ಗೊತ್ತೇ ಇಲ್ಲ. ಆದರೂ ಟಿಕೆಟ್ ನೀಡಲಾಗಿದೆ. ಸಂಗಣ್ಣ ಕರಡಿ ಅವರ ರಾಜಕೀಯ ಬದುಕು ಅಂತ್ಯಗೊಳಿಸಲು ಎಲ್ಲರೂ ಸೇರಿ ಹುನ್ನಾರ ಮಾಡಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅಭ್ಯರ್ಥಿ ಬಸವರಾಜ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗ ಅಲ್ಲಿಗೆ ಬಂದ ಸಂಗಣ್ಣ ಬೆಂಬಲಿಗರು ಬಾಗಿಲು ಬಡಿದು ಹೊರಗಡೆ ಬನ್ನಿ ಎಂದು ಆಗ್ರಹಿಸಿದರು.

ಇದಕ್ಕೂ ಮೊದಲು ಬಸವರಾಜ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಸಂಸದ ಸಂಗಣ್ಣ ಅವರನ್ನು ಭೇಟಿಯಾಗಲು ಅವರ ಮನೆಗೆ ಹೋದಾಗ ಕಾರ್ಯಕರ್ತರು ಅಲ್ಲಿಯೂ ವಿರೋಧ ವ್ಯಕ್ತಪಡಿಸಿದರು.

ಕಾರ್ಯಕರ್ತರ ನಡುವೆಯೇ ತಳ್ಳಿಕೊಂಡು ಸಂಗಣ್ಣ ಅವರ ಮನೆ ಒಳಗಡೆ ಹೋದ ಬಸವರಾಜ ಹಾಗೂ ದೊಡ್ಡನಗೌಡ ಅವರಿಗೆ ಸಂಸದರ ಜೊತೆ ಮಾತನಾಡಲು ಕಾರ್ಯಕರ್ತರು ಅವಕಾಶ ಕೊಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.