
ಗಂಗಾವತಿ: ಆಡಳಿತ ವೈಫಲ್ಯ, ಕರ್ತವ್ಯಲೋಪ, ದಾಖಲೆಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸೇರಿ ಹಲವು ದೂರುಗಳನ್ವಯ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳ ತಂಡವು, ನಗರಸಭೆ ಕಚೇರಿಗೆ ಭೇಟಿ ನೀಡಿ, ಕಡತಗಳ ಪರಿಶೀಲನೆ ನಡೆಸಿತು.
ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ಲೋಕೇಶ ಅವರನ್ನು ಒಳಗೊಂಡ ತಂಡ ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಗರಸಭೆ ಕಚೇರಿಯಲ್ಲಿ ಕಡತ ಪರಿಶೀಲಿಸಿ, ಅಗತ್ಯ ಮಾಹಿತಿ ಪಡೆದುಕೊಂಡು ವರದಿ ಮಾಡಿಕೊಂಡರು.
ನಗರಸಭೆಯಲ್ಲಿ ಆಡಳಿತ ವೈಫಲ್ಯ, ಸಾರ್ವಜನಿಕ ಕೆಲಸ ವಿಳಂಬ, ದಾಖಲೆ ನಿರ್ವಹಣೆಯಲ್ಲಿ ಲೋಪ ಸೇರಿದಂತೆ ಹಲವು ವಿಷಯಗಳ ಕುರಿತು ಬೆಂಗಳೂರು ಲೋಕಾಯುಕ್ತ ಕಚೇರಿಗೆ ದೂರುಗಳು ಬಂದಿದ್ದು, ಅದರನ್ವಯ ಅಧಿಕಾರಿಗಳು ನಗರಸಭೆ ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಭೇಟಿ ನಂತರ ನಮೂನೆ-3, ಸಕಾಲ ಸೇವೆ, ಕಟ್ಟಡ ಪರವಾನಗಿ, ಮ್ಯೂಟೇಷನ್ ಸೇರಿ ಹಲವು ಸೇವೆಗಳಲ್ಲಿ ಲೋಪದೋಷ, ಕಂದಾಯ ಮತ್ತು ಎಂಜಿನಿಯರ್, ಆರೋಗ್ಯ ಶಾಖೆಯಲ್ಲಿನ ಅಧಿಕಾರಿಗಳು ಕರ್ತವ್ಯ ಲೋಪದೋಷ, ಕಡತ ನಿರ್ವಹಣೆ ಲೋಪದೋಷ ಕಂಡು ಬಂದವು. ನಂತರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಯಿತು.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಸುನೀಲ್, ಚಂದ್ರಪ್ಪ, ಶೈಲಾ ಸಿಬ್ಬಂದಿ ಮಂಜುನಾಥ ಸೇರಿ ಲೋಕಾಯುಕ್ತ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ನಗರಸಭೆ ಕಚೇರಿಗೆ ಭೇಟಿ ನೀಡಿ ಹಲವು ಶಾಖೆಗಳಲ್ಲಿನ ದಾಖಲೆ ಪರಿಶೀಲಿಸಿದ್ದು ಅಧಿಕಾರಿಗಳು ಸೇರಿ ದಾಖಲೆ ನಿರ್ವಹಣೆಯಲ್ಲಿ ತುಂಬ ಲೋಪಗಳಿವೆ. ಅದರ ಹೊಣೆಗಾರಿಕೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ ಹೊರಬೇಕು. ರಾಜ್ಯ ಲೋಕಾಯುಕ್ತ ಕಚೇರಿಗೆ ವರದಿ ಕಳುಹಿಸಲಿದ್ದು ನಂತರ ವಿಚಾರಣೆ ನಡೆಸಲಾಗುತ್ತದೆ.ಲೋಕೇಶ, ಲೋಕಾಯುಕ್ತ ಡಿವೈಎಸ್‌ಪಿ ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.