ADVERTISEMENT

ಕಳಪೆ ಬಿತ್ತನೆ ಬೀಜ ವಿತರಣೆ: ಆಕ್ರೋಶ

ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಪರಣ್ಣ ಮುನವಳ್ಳಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 5:29 IST
Last Updated 3 ಜೂನ್ 2021, 5:29 IST
ಗಂಗಾವತಿಯ ರೈತ ಸಂಪರ್ಕ ಕೇಂದ್ರದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರು ಬುಧವಾರ ಬಿತ್ತನೆ ಬೀಜ ಪರಿಶೀಲಿಸಿದರು
ಗಂಗಾವತಿಯ ರೈತ ಸಂಪರ್ಕ ಕೇಂದ್ರದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರು ಬುಧವಾರ ಬಿತ್ತನೆ ಬೀಜ ಪರಿಶೀಲಿಸಿದರು   

ಗಂಗಾವತಿ: ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಪರಣ್ಣ ಮುನವಳ್ಳಿ ಸಮ್ಮುಖದಲ್ಲಿ ರೈತರು ಭತ್ತದ ಬಿತ್ತನೆ ಬೀಜ ಕಳಪೆ ಗುಣಮಟ್ಟದಿಂದ ಕೂಡಿರುವುದನ್ನು ಸಾಬೀತುಪಡಿಸಿದರು. ಕೃಷಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಪರಣ್ಣ ಮುನವಳ್ಳಿ ಬಿತ್ತನೆ ಬೀಜ ಪರಿಶೀಲಿಸಿ ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಮುಂಗಾರು ಹಂಗಾಮಿನಲ್ಲಿ ರೈತರ ಅನುಕೂಲಕ್ಕಾಗಿ ಸರ್ಕಾರ ಶೀಘ್ರ ಬೀಜ ಮತ್ತು ಗೊಬ್ಬರ ವಿತರಿಸಲು ಅವಕಾಶ ನೀಡಿದೆ. ಆದರೆ ಭತ್ತದ ಬೀಜ ಕಳಪೆಯಾಗಿರುವುದನ್ನು ರೈತರು ಗುರುತಿಸಿದ್ದಾರೆ. ಇದು ಕೃಷಿ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ’ ಎಂದು ಹೇಳಿದರು.

ADVERTISEMENT

ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರ ಗಮನಕ್ಕೆ ತಂದು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ತಕ್ಷಣ ಕಳಪೆ ಬೀಜ ಬದಲಾಯಿಸಿ ಗುಣಮಟ್ಟದ ಬೀಜ ವಿತರಿಸಬೇಕು ಎಂದು ಸೂಚಿಸಿದರು.

ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ,‘ಬೀಜ ವಿತರಣೆಗೂ ಮುಂಚೆ ಅಧಿಕಾರಿಗಳು ಗಮನಿಸಬೇಕು. ರೈತರು ತಕ್ಷಣ ತೆಗೆದುಕೊಂಡು ಹೋಗಿ ಸಸಿಮಡಿಗೆ ಹಾಕುತ್ತಾರೆ. ಒಂದು ತಿಂಗಳ ನಂತರ ಅವರಿಗೆ ಸಮಸ್ಯೆಯಾಗಿ ಆತಂಕಕ್ಕೀಡಾಗುತ್ತಾರೆ. ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು. ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಜಲಾಶಯಕ್ಕೂ ನೀರು ಬರುತ್ತಿದೆ. ಜುಲೈ ತಿಂಗಳಲ್ಲಿ ನೀರು ಬಿಡುವ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇನೆ’ ಎಂದರು.

ನಂತರ ಕೃಷಿ ಅಧಿಕಾರಿ ಸಂತೋಷ ಮಾತನಾಡಿ,‘ಎಲ್ಲವನ್ನು ಪರಿಶೀಲಿಸಲಾಗುತ್ತದೆ. ಇದು ಈಗ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಇದನ್ನು ಹಿಂದಿರುಗಿಸಲಾಗುವುದು’ ಎಂದರು.

ಪ್ರಮುಖರಾದ ಕಳಕಪ್ಪ, ವಲಿಸಾಬ, ಚಂದ್ರಶೇಖರ ನಾಡಗೌಡ, ನಗರಸಭೆ ಸದಸ್ಯ ರಮೇಶ ಚೌಡ್ಕಿ, ನಗರ ಪ್ರಾಧಿಕಾರ ಅಧ್ಯಕ್ಷ ಮಲ್ಲೇಶಪ್ಪ ಹೊಸಮಲಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಚನ್ನಪ್ಪ ಮಳಗಿ ಹಾಗೂ ಯಮನೂರಪ್ಪ ಚೌಡ್ಕಿ ಇದ್ದರು.

ಕಳಪೆ ಬೀಜ ವಿತರಿಸಿದರೆ ಕ್ರಮ: ಬೀಜ ವಿತರಣೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕಳಪೆ ಬೀಜ ಪೂರೈಕೆಯಾಗುತ್ತಿರುವುದನ್ನು ರೈತರು ಬಯಲು ಮಾಡುತ್ತಿದ್ದಂತೆ ಎಚ್ಚೆತ್ತ ತಹಶೀಲ್ದಾರ್ ಯು.ನಾಗರಾಜ ಅವರು ಕಳಪೆ ಬೀಜ ಪೂರೈಕೆ ಆಗಿರುವ ಕುರಿತು ಕೃಷಿ ಅಧಿಕಾರಿಗಳು ತಕ್ಷಣ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಜಿಲ್ಲಾಧಿಕಾರಿಗಳಿಗೂ ವರದಿ ಸಲ್ಲಿಸಲಾಗುವುದು. ಕಳಪೆ ಬೀಜ ವಿತರಣೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಪರವಾನಗಿ ಇಲ್ಲದೆ ಬಿತ್ತನೆ ಬೀಜ ಮಾರಾಟ: ದಾಳಿ
ಗಂಗಾವತಿ:
ನಗರದ ಮಲ್ಲಿಕಾರ್ಜುನ ಸೀಡ್ ಸೆಂಟರ್ ಮೇಲೆ ಕೃಷಿ ಜಾಗೃತ ದಳದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ‌

ಪರವಾನಗಿ ಪಡೆಯದೇ ಬೀಜ, ಗೊಬ್ಬರ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರವಾನಗಿ ಇಲ್ಲದೆ ದಾಸ್ತಾನು ಮಾಡಿದ್ದ ₹14 ಲಕ್ಷ ಮೌಲ್ಯದ ಬಿತ್ತನೆ ಬೀಜ ಹಾಗೂ 58 ಕ್ವಿಂಟಲ್ ತೊಗರಿ, ಸಜ್ಜೆ, ಮೆಕ್ಕೆಜೋಳ ವಶಪಡಿಸಿಕೊಳ್ಳಲಾಗಿದೆ.

ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ಜಾಗೃತ ದಳದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.