ADVERTISEMENT

ಕೊಪ್ಪಳದಲ್ಲಿ ನಾಳೆ ಶಿವರಾತ್ರಿ ಉತ್ಸವ

ಶಿವರಾತ್ರೇಶ್ವರ ದೇವಸ್ಥಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 8:07 IST
Last Updated 14 ಫೆಬ್ರುವರಿ 2026, 8:07 IST
ರಾಜಶೇಖರ ಹಿಟ್ನಾಳ
ರಾಜಶೇಖರ ಹಿಟ್ನಾಳ   

ಕೊಪ್ಪಳ: ಮಹಾಶಿವರಾತ್ರಿ ಅಂಗವಾಗಿ ನಗರದ ವಿವಿಧ ದೇವಸ್ಥಾನಗಳಲ್ಲಿ ಫೆ. 15ರಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ಬಾರಿಗೆ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಹಾಗೂ ಹುಲಿಕೆರೆ ಬಳಿಯಿರುವ ಶಿವರಾತ್ರೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಮಧ್ಯರಾತ್ರಿ ತನಕ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಸಂಸದ ರಾಜಶೇಖರ ಹಿಟ್ನಾಳ ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ದೇವಸ್ಥಾನದ ಆವರಣದಲ್ಲಿ ಸಂಜೆ 6 ಗಂಟೆಗೆ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಚಲನಚಿತ್ರ ಗಾಯಕಿ ಇಂದು ನಾಗರಾಜ್‌ ಹಾಗೂ ತಂಡದವರಿಂದ ಸಂಗೀತ ಸಮಾರಂಭ, ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಹೆಸರು ಮಾಡಿರುವ ದರ್ಶನ್‌, ನಿರೂಪಕಿ ಹೇಮಲತಾ, ಶ್ರೀರಾಮ್‌ ಕಾಸರ್‌ ಮತ್ತು ನಯನಾ ನಾಗರಾಜ್‌ ತಂಡದಿಂದ ಸಂಗೀತ ನಡೆಯಲಿದೆ’ ಎಂದು ತಿಳಿಸಿದರು.

ಡಿಕೆಡಿ ಡ್ಯಾನ್ಸ್‌ ಕಾರ್ಯಕ್ರಮದ ವಿಜೇತರಾದ ಬೃಂದಾ ಹಾಗೂ ದರ್ಶನ್‌ ತಂಡದಿಂದ ನೃತ್ಯ, ಶರಣು ನಾಗನೂರು ನವಲಗುಂದ ಅವರಿಂದ ಹಾಸ್ಯ ಕಾರ್ಯಕ್ರಮ, ಹೊಸಪೇಟೆಯ ಕಲಾವಿದೆ ಅಂಜಲಿ ಅವರಿಂದ ಭರತನಾಟ್ಯ ಜರುಗಲಿದೆ. ಬಳಿಕ ಮದ್ದು ಸುಡುವುದು, ಮಿಟ್ಟಿಕೇರಿಯ ಮಾರುತೇಶ್ವರ ಭಜನಾ ಹಾಗೂ ಸಾಂಸ್ಕೃತಿಕ ಸೇವಾ ಸಂಘದ ವತಿಯಿಂದ ಭಜನೆ ಜರುಗಲಿದೆ. 

ADVERTISEMENT

‘ಶಿವರಾತ್ರಿ ಸಂಭ್ರಮವನ್ನು ವಿಭಿನ್ನವಾಗಿ ಆಯೋಜಿಸಲು ಈ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬರುವ ಎಲ್ಲ ಭಕ್ತರಿಗೆ ಫಲಹಾರದ ವ್ಯವಸ್ಥೆ ಮಾಡಲಾಗಿದೆ. ಕೊಪ್ಪಳದ ಸಾಂಸ್ಕೃತಿಕ ಪರಿಸರ ಹುಮ್ಮಸ್ಸಿನಿಂದ ಇರಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಸಂಸದರು ಹೇಳಿದರು.

ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಉಪಾಧ್ಯಕ್ಷ ಶ್ರೀನಿವಾಸ ಗುಪ್ತಾ, ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲ್‌ ನಾಲವಾಡ ಪಾಲ್ಗೊಂಡಿದ್ದರು.

ಮಹಾಶಿವರಾತ್ರಿ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು
- ರಾಜಶೇಖರ ಹಿಟ್ನಾಳ, ಸಂಸದ
ಮಹಾಶಿವರಾತ್ರಿ ಅಂಗವಾಗಿ ಭಕ್ತರಿಗಾಗಿ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿವಸಂದೇಶ ರಥ ಯಾತ್ರೆಯು ಕೊಪ್ಪಳದ ವಿವಿಧೆಡೆ ಸಂಚರಿಸಲಿದೆ
- ಯೋಗಿನಿ, ಪ್ರಜಾಪಿತ ಬ್ರಹ್ಮಕುಮಾರಿ ವಿ.ವಿ.

ಶಿವ ಸಂದೇಶ ರಥಯಾತ್ರೆ ಇಂದು

ಕೊಪ್ಪಳ: ಪ‍್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಶನಿವಾರ ಸಂಜೆ 4 ಗಂಟೆಗೆ ಶಿವಸಂದೇಶ ರಥ ಯಾತ್ರೆಯ ಮೆರವಣಿಗೆ ನಗರದಲ್ಲಿ ಜರುಗಲಿದೆ.

ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಯೋಗಿನಿ ಅವರು ಮಾತನಾಡಿ ‘ಶಿವಧ್ವಜಾರೋಹಣ ಹಾಗೂ 12 ಜ್ಯೋತಿರ್ಲಿಂಗಗಳನ್ನು ಹೊತ್ತ ಶಿವಸಂದೇಶ ರಥ ಯಾತ್ರೆ ನಡೆಸಲಿದೆ. 15ರಿಂದ 20ರ ತನಕ ಸಂಜೆ 5 ಗಂಟೆಯಿಂದ ರಾತ್ರಿ 10ರ ತನಕ ದೇವರಾಜ್‌ ಅರಸ್‌ ಕಾಲೊನಿಯಲ್ಲಿರುವ ವಿ.ವಿ. ಆವರಣದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಭಾನುವಾರದ ಕಾರ್ಯಕ್ರಮ ಉದ್ಘಾಟಿಸಲಿದ್ದು ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಮಾಜಿ ಸಂಸದ ಸಂಗಣ್ಣ ಕರಡಿ ಹಾಗೂ ಅಧಿಕಾರಿಗಳು ಪಾಲ್ಗೊಳ್ಳುವರು. 16ರ ಸಮಾರಂಭವನ್ನು ಸಂಸದ ರಾಜಶೇಖರ ಹಿಟ್ನಾಳ ಉದ್ಘಾಟಿಸುವರು. ಫೆ.21ರಿಂದ ಮಾರ್ಚ್‌ 31ರ ತನಕ ಬೆಳಿಗ್ಗೆ 6.30ರಿಂದ ಉಚಿತವಾಗಿ ಶಿವಧ್ಯಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಬಿ.ಕೆ. ಸ್ನೇಹಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.