ಕುಷ್ಟಗಿ: ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಆವಕದಲ್ಲಿ ದಾಖಲೆ ನಿರ್ಮಿಸುತ್ತಿದ್ದು ಉತ್ತಮ ಫಸಲು ಬಂದರೂ ಬೆಲೆ ಇಳಿಕೆಯತ್ತ ಮುಖ ಮಾಡಿರುವುದು ರೈತರನ್ನು ಕಂಗಾಲಾಗಿಸಿದೆ.
ಸದ್ಯ ಇಲ್ಲಿಯ ಎಪಿಎಂಸಿ ಪ್ರಾಂಗಣದಲ್ಲಿ ಎಲ್ಲೆಂದರಲ್ಲಿ ಮೆಕ್ಕೆಜೋಳದ್ದೇ ಭರಾಟೆ. ಚೀಲ ತುಂಬಿಕೊಂಡು ವಾಹನಗಳು ಭಾರಿ ಸಂಖ್ಯೆಯಲ್ಲಿ ಬರುತ್ತಿದ್ದು ಪ್ರಾಂಗಣದಲ್ಲಿ ಕಾಲಿಡುವುದಕ್ಕೂ ಸಾಧ್ಯವಾಗದಂಥ ಪರಿಸ್ಥಿತಿ ಇದೆ. ವ್ಯಾಪಾರ ವಹಿವಾಟಿನ ಭರಾಟೆ ಶನಿವಾರ ಕಂಡುಬಂದಿತು.
ಮಳೆ ಕೃಪೆ: ಮೆಕ್ಕೆಜೋಳ ಏಕ ಬೆಳೆಯತ್ತ ಆಸಕ್ತಿ ವಹಿಸಿದ್ದು ಈ ಬಾರಿ ಮೆಕ್ಕೆಜೋಳ ಸಾಂಪ್ರದಾಯಿಕ ಬೆಳೆಯಂತಾಗಿದೆ. ಅತಿಯಾದ ಮಳೆಗೆ ಎಳ್ಳು, ಸಜ್ಜೆ, ಹೆಸರು ಹಾಳಾದರೆ ಮೆಕ್ಕೆಜೋಳ ಮಾತ್ರ ಭರಪೂರ ಇಳುವರಿ ನೀಡಿದೆ. ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳ ಜಾಗಗಳು ಮೆಕ್ಕೆಜೋಳದಿಂದ ತುಂಬಿಹೋಗಿವೆ. ಹೆಚ್ಚಿನ ಕ್ಷೇತ್ರದಲ್ಲಿ ಮತ್ತು ಏಕಕಾಲದಲ್ಲಿ ಬಿತ್ತನೆಯಾಗಿದ್ದು ಕಾಲಕಾಲಕ್ಕೆ ಮಳೆ ಕೃಪೆತೋರಿದ್ದು, ಏಕಕಾಲದಲ್ಲಿಯೇ ಕಟಾವು ಮಾಡಿರುವ ಕಾರಣದಿಂದ ಮಾರುಕಟ್ಟೆಗೆ ಮೆಕ್ಕೆಜೋಳ ನಿರೀಕ್ಷೆಗೂ ಮೀರಿ ಆವಕವಾಗುತ್ತಿದೆ.
ವರ್ತಕರು ಹೇಳುವ ಪ್ರಕಾರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆವಕ ಶೇಕಡ ಅರ್ಧದಷ್ಟು ಹೆಚ್ಚಾಗಿದೆ. ಕಳೆದ ಇಡೀ ವರ್ಷದಲ್ಲಿ ಎಪಿಎಂಸಿಗೆ ಒಟ್ಟು 4.80 ಲಕ್ಷ ಕ್ವಿಂಟಲ್ ಮೆಕ್ಕೆಜೋಳ ಆವಕವಾಗಿತ್ತು. ಆದರೆ ಈ ವರ್ಷ ಕೇವಲ ಒಂದು ತಿಂಗಳ ಅವಧಿಯಲ್ಲಿ ಎರಡು ತಿಂಗಳ ಅವಧಿಯಲ್ಲಿಯೇ ಅಂದಾಜು 1.50 ಲಕ್ಷ ಕ್ವಿಂಟಲ್ ಆವಕವಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಸುರೇಶ ತಂಗನೂರು ವಿವರಿಸಿದರು.
ತಮಿಳುನಾಡಿಗೆ ರವಾನೆ: ಇಲ್ಲಿಯ ಎಪಿಎಂಸಿಯಿಂದ ಖರೀದಿಸಿದ ಬಹುತೇಕ ಮೆಕ್ಕೆಜೋಳಕ್ಕೆ ಹೆಚ್ಚಿನ ಬೇಡಿಕೆ ಇರುವ ತಮಿಳುನಾಡಿಗೆ ಹೋಗುತ್ತಿದೆ. ಕೋಳಿ ಆಹಾರ ಸೇರಿದಂತೆ ಇತರೆ ಆಹಾರದ ಉಪ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳು ಹೇರಳವಾಗಿರುವುದು ಅದಕ್ಕೆ ಕಾರಣ. ಅಷ್ಟೇ ಅಲ್ಲದೆ ಮೆಕ್ಕೆಜೋಳದ ಶೇಕಡ 20ರಷ್ಟು ಮೆಕ್ಕೆಜೋಳ ಇಥೆನಾಲ್ ತಯಾರಿಕೆಗೆ ಬಳಕೆ ಮಾಡಲಾಗುತ್ತದೆ ಎಂಬುದು ತಿಳಿಯಿತು.
ಮೆಕ್ಕೆಜೋಳವನ್ನೂ ಬೆಂಬಲಬೆಲೆಯಲ್ಲಿ ಖರೀದಿಸುವ ಮೂಲಕ ಸರ್ಕಾರ ಕಷ್ಟಪಟ್ಟು ಬೆಳೆದ ರೈತರ ನೆರವಿಗೆ ಬರಬೇಕಿದೆ.– ಮಹಾಂತಯ್ಯ ಅರಳೆಲೆಮಠ, ಅಧ್ಯಕ್ಷ ಎಪಿಎಂಸಿ ವರ್ತಕರ ಸಂಘ
ಉತ್ತಮ ಗುಣಮಟ್ಟದ ಮೆಕ್ಕೆಜೋಳ ತಂದ ರೈತರಿಗೆ ಉತ್ತಮ ಬೆಲೆ ದೊರಕಿಸುವ ಮತ್ತು ತೂಕದಲ್ಲಿ ಮೋಸ ಆಗದಂತೆ ಸಮಿತಿ ನಿಗಾ ವಹಿಸುತ್ತಿದೆ.– ಸುರೇಶ ತಂಗನೂರು, ಎಪಿಎಂಸಿ ಕಾರ್ಯದರ್ಶಿ
ಹತ್ತು ವರ್ಷದ ಹಿಂದೆಯೂ ಇದೇ ದರ ಇತ್ತು. ಆಗ ವ್ಯವಸಾಯದ ಖರ್ಚು ಈಗಿನ ಅರ್ಧದಷ್ಟೂ ಇರಲಿಲ್ಲ. ಹಾಗಾಗಿ ಮೆಕ್ಕೆಜೋಳದ ದರ ಕನಿಷ್ಟ ₹ 2000 ಆದರೂ ಇರಬೇಕಿತ್ತು.– ವೀರಭದ್ರಗೌಡ ಅರಹುಣಸಿ, ರೈತ
ಮೆಕ್ಕೆಜೋಳ ಬೆಂಬಲಬೆಲೆ ವ್ಯಾಪ್ತಿಯಲ್ಲಿಲ್ಲ
ಮೆಕ್ಕೆಜೋಳದ ಧಾರಣೆ ನಿರ್ಧಾರವಾಗುವುದು ತಮಿಳುನಾಡಿನ ಸಗಟು ವ್ಯಾಪಾರಿಗಳಿಂದ ಆವಕ ಕಡಿಮೆ ಇದ್ದಾಗ ಈ ವರ್ಷ ಗರಿಷ್ಟ ದರ ₹ 2350 ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಇಲ್ಲಿಯ ಎಪಿಎಂಸಿಯಲ್ಲಿ ಕನಿಷ್ಟ ದರ ₹ 2221 ಇತ್ತು. ಈಗಿನ ಗರಿಷ್ಠ ದರ ₹ 1800 ಆಗಿದೆ. ಈಗಷ್ಟೇ ಮೆಕ್ಕೆಜೋಳ ಆವಕವಾಗುತ್ತಿದ್ದು ಆರಂಭದಲ್ಲೇ ದರ ಕುಸಿದಿದೆ. ಇನ್ನೂ ಇಳಿಮುಖವಾಗಲಿದೆ ಎಂಬ ಮಾಹಿತಿ ರೈತರ ನಿದ್ದೆಗೆಡಿಸಿದೆ. ಉತ್ತಮ ಇಳುವರಿಯ ಜೊತೆಗೆ ದರವೂ ಸಿಗಬಹುದೆಂಬ ರೈತರ ನಿರೀಕ್ಷೆ ಹುಸಿಯಾಗಿದೆ.
ಆಹಾರ ಉತ್ಪನ್ನ ಅಲ್ಲ ಎಂಬ ಕಾರಣಕ್ಕೆ ಮೆಕ್ಕೆಜೋಳವು ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ವ್ಯಾಪ್ತಿಗೆ ಬರುವುದಿಲ್ಲ. ಆಹಾರ ಉತ್ಪನ್ನ ಎಂದು ಪರಿಗಣಿಸಿದ್ದರೆ ಸರ್ಕಾರ ದರ ಕುಸಿದಾಗ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗುತ್ತಿತ್ತು. ಅದರಿಂದ ಮಾರುಕಟ್ಟೆಯಲ್ಲಿ ಬೆಲೆ ಸಮತೋಲನ ಸಾಧ್ಯವಾಗುತ್ತಿತ್ತು. ಈ ಕಾರಣಕ್ಕೆ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ದರ ಇಳಿಕೆ ನಾಗಾಲೋಟ ಮುಂದುವರಿದಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.