ADVERTISEMENT

ಕನಕಗಿರಿ: ದೆಹಲಿಯಲ್ಲಿ ಮಿಂಚಿದ ಹಳ್ಳಿ ಹುಡುಗ

ಗಾಯನಕ್ಕೆ ಸಂದ ಹಲವು ಸನ್ಮಾನ

ಮೆಹಬೂಬ ಹುಸೇನ
Published 2 ಫೆಬ್ರುವರಿ 2025, 4:46 IST
Last Updated 2 ಫೆಬ್ರುವರಿ 2025, 4:46 IST
ಸಂಗೀತ ಕಾರ್ಯಕ್ರಮ ನೀಡುತ್ತಿರುವ ಮಹ್ಮದಹುಸೇನ
ಸಂಗೀತ ಕಾರ್ಯಕ್ರಮ ನೀಡುತ್ತಿರುವ ಮಹ್ಮದಹುಸೇನ   

ಕನಕಗಿರಿ: ಕಲೆ ಎಲ್ಲಾರನ್ನು ಕೈ ಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂಬ ನುಡಿ ಅಕ್ಷರಶಃ ಸಮೀಪದ ಸುಳೇಕಲ್ ಗ್ರಾಮದ ಗಾಯಕ ಮಹ್ಮದಹುಸೇನ‌ ಅವರಿಗೆ ಅನ್ವಯವಾಗುತ್ತದೆ. ಹುಟ್ಟಿನಿಂದಲೇ ಸಂಪೂರ್ಣ ಅಂಧತ್ವ ಹೊಂದಿರುವ  ಕಲಾವಿದ ಮಹ್ಮದ ಅವರು, ತಮ್ಮ ಪ್ರತಿಭೆ ಮೂಲಕ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಬಾಲ್ಯದಲ್ಲಿ ಮಹ್ಮದ ಹುಸೇನ ಅವರ ಕಲಾ ಆಸಕ್ತಿ ಅರಿತ ಗ್ರಾಮದ ಬೃಹನ್ಮಠದ ಭುವನೇಶ್ವರಯ್ಯ ತಾತನವರು ಶಿಕ್ಷಣ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರ ನೀಡಿದ್ದಾರೆ.

ಸಂಗೀತ ಶಿಕ್ಷಣವನ್ನು ಪಂಡಿತ ಪಂಚಾಕ್ಷರಿ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದಲ್ಲಿ ಅಭ್ಯಾಸ ಮಾಡಿದ್ದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ರಂಗಗೀತೆಗಳು, ಕನ್ನಡ ಕವಾಲಿ ಹಾಡುಗಳು, ಜನಪದ, ಭಾವ ಗೀತೆಗಳು, ತತ್ವಪದಗಳು, ಲಾವಣಿ , ವಚನಗಾಯನ ಮತ್ತು ದಾಸರ ಪದಗಳನ್ನು ಹಾಡುವುದರಲ್ಲಿ ಎತ್ತಿದ ಕೈ ಆಗಿದ್ದಾರೆ.

ADVERTISEMENT

ಹಾಡುಗಳಲ್ಲದೆ ತಂಬೂರಿ, ಹಾರ್ಮೋನಿಯಂ, ಕೀಬೋರ್ಡ್‌, ಇತ್ಯಾದಿ ವಾದ್ಯಗಳನ್ನು ನುಡಿಸುವುದನ್ನು‌ ಕರಗತ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಅಂಧರ ಸಾಂಸ್ಕೃತಿಕ ಮೇಳ, ವಾಣಿಜ್ಯ ಮೇಳ, ಕೊಪ್ಪಳ, ಗದಗ ದಲ್ಲಿ ಆಯೋಜಿಸಿದ್ದ ಯುವಜನ ಮೇಳ, ಗಂಗಾವತಿ ಹಾಗೂ ಗದಗಿನಲ್ಲಿ ನಡೆದ 78 ಹಾಗೂ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಹಾಡುಗಳನ್ನು ಹಾಡುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

ಗಂಗಾವತಿ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗದಗ, ಹುಬ್ಬಳ್ಳಿ, ಹರಿಹರ, ಹಗರಿಬೊಮ್ಮನಹಳ್ಳಿ, ರಾಯಚೂರು, ಬೀದರ, ಧಾರವಾಡ ಮಾತ್ರವಲ್ಲದೆ ಮುಂಬೈ, ದೆಹಲಿ, ಬಿಹಾರ, ನಾಶಿಕ್, ಅನಂತಪುರ, ಗೋವಾ, ಭೂಪಾಲ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿದ್ದಾರೆ.

ಮೈಸೂರು ದಸರಾ ಉತ್ಸವ, ಕಿತ್ತೂರು, ಬನವಾಸಿ, ಹಂಪಿ ಉತ್ಸವ, ಲಕ್ಕುಂಡಿ, ಇಟಗಿ, ಆನೆಗೊಂದಿ, ಕನಕಗಿರಿ ಉತ್ಸವದಲ್ಲಿಯೂ‌ ಮಿಂಚಿದ್ದಾರೆ. ಯುವ ಸಬಲೀಕರಣ ಇಲಾಖೆಯಿಂದ ಬಾಗಲಕೋಟೆ, ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ಯುವಜನ ಮೇಳ, ಖಾದಿ ಉತ್ಸವ, ಕೊಪ್ಪಳದಲ್ಲಿ ಆಯೋಜಿಸಿದ್ದ ಕಲಾ ಪ್ರತಿಭೋತ್ಸವ, ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ಎಂಎಸ್‌ಐಎಲ್‌ ವತಿಯಿಂದ ನಡೆದ ನಿತ್ಯೋತ್ಸವ, ಮುಂಬೈ, ದೆಹಲಿಯಲ್ಲಿ ನಡೆದ
ಎಬಿಲಿಟಿ ಉತ್ಸವದಲ್ಲಿಯೂ ಮಹ್ಮದಹುಸೇನ‌ ತಮ್ಮ ಛಾಪು‌ ಮೂಡಿಸಿದ್ದಾರೆ.

ಧಾರವಾಡ ಹಾಗೂ ಹೊಸಪೇಟೆ ಆಕಾಶವಾಣಿ ಕೇಂದ್ರದವರು ನಡೆಸಿಕೊಡುವ ಬಾಲ ಪ್ರತಿಭೋತ್ಸವ, ಹಾಡು ಕೋಗಿಲೆ ಮಕ್ಕಳ ಗೀತಾ ಗಾಯನ ಸ್ಪರ್ಧೆಗಳಿಗೆ ನಿರ್ಣಾಯಕರಾಗಿ ಕೆಲಸ ಮಾಡಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನ ಕ್ಷೇತ್ರದಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವುದು ಹೆಗ್ಗಳಿಕೆಯಾಗಿದೆ.

ಮಹ್ಮದ ಹುಸೇನ ಅವರ‌ ಕಲೆ, ಸಂಗೀತ ಸೇವೆಯನ್ನು ಮೆಚ್ಚಿ ವಿವಿಧ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಉತ್ತಮ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ.   ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕನಕಗಿರಿ ತಾಲ್ಲೂಕು ಘಟಕವು ಮಹ್ಮದ ಅವರಿಗೆ ಸಾವಿತ್ರಿ ಬಾ‌ಪುಲೆ ತಾಲ್ಲೂಕು ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಿದೆ‌.

ಅಂಧರಾಗಿದ್ದರೂ ತಾಂತ್ರಿಕತೆಯಲ್ಲಿ ಮುಂಚೂಣಿಯಲ್ಲಿರುವ ಮಹ್ಮದ ಅವರು ಸದ್ಯ ಇಲ್ಲಿನ ಖಜಾನೆ ಇಲಾಖೆಯ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ಪಂಡಿತ ಪುಟ್ಟರಾಜ ಗವಾಯಿಗಳ ಆಶೀರ್ವಾದ ಹಾಗೂ ಪ್ರೇರಣೆ ಅಧಿಕಾರಿಗಳ ಪ್ರೋತ್ಸಾಹದಿಂದ‌ ಸಂಗೀತ ಸೇವೆ ‌ಮಾಡಲು ಅವಕಾಶ ಸಿಕ್ಕಿದೆ. ಕಲೆ‌ ಎಂಬುದು ಒಂದು ತಪಸ್ಸಿನ ಸಾಧನೆ. ಶ್ರದ್ದೆಯಿಂದ ಕಲಿಯಬೇಕು.
ಮಹ್ಮದಹುಸೇನ ಕೇಸರಹಟ್ಟಿ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.