
ಯಲಬುರ್ಗಾ: ತಾಲ್ಲೂಕಿನ ಚಿಕ್ಕವಂಕಲಕುಂಟಾದಲ್ಲಿ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ಪೂರ್ವಭಾವಿ ಸಭೆ ನಡೆಯಿತು.
ನೇತೃತ್ವ ವಹಿಸಿದ್ದ ದೇವಸ್ಥಾನ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಹಾಗೂ ಉಪ ತಹಶೀಲ್ದಾರ್ ವಿಜಯಕುಮಾರ ಗುಂಡೂರ ಮಾತನಾಡಿ, ‘ಫೆ.7ರಿಂದ9ರವರೆಗೆ ಜರುಗಲಿರುವ ಮಾರುತೇಶ್ವರ ಜಾತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ಸೌಲಭ್ಯ, ಸಿದ್ಧತೆ ಮಾಡಿಕೊಳ್ಳಬೇಕಾಗಿದೆ’ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆಯಿಂದ ಅಹಿತಕರ ಘಟನೆಗಳು ನಡೆಯಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು, ಜಾತ್ರೆಗೆ ಬರುವ ಭಕ್ತರ ವಾಹನಗಳ ನಿಲುಗಡೆಗೆ ಮಾಡಿದ ಸ್ಥಳದಲ್ಲಿಯೇ ನಿಲ್ಲುವಂತೆ ನೋಡಿಕೊಳ್ಳುವುದು, ಗಣ್ಯರು ಭೇಟಿ ನೀಡುವ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸುವುದು, ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ವೈದ್ಯರೊಂದಿಗೆ ಅಗತ್ಯ ಸಿಬ್ಬಂದಿ ನಿಯೋಜಿಸುವುದಕ್ಕೆ ಕ್ರಮಕೈಗೊಳ್ಳುವುದು ಅವಶ್ಯ ಎಂದು ಹೇಳಿದರು.
ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು, ಜಾತ್ರೆಯ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವುದು, ಕೊಪ್ಪಳ, ಕುಷ್ಟಗಿ, ಗಂಗಾವತಿ, ಯಲಬುರ್ಗಾ ಹಾಗೂ ಇನ್ನಿತರ ಪ್ರದೇಶಗಳಿಂದ ಸಾರಿಗೆ ಸೌಲಭ್ಯಕ್ಕೆ ಹೆಚ್ಚುವರಿ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳುವುದು ಸೇರಿದಂತೆ ಅನೇಕ ಅಗತ್ಯತೆಗಳನ್ನು ಕಲ್ಪಿಸಿಕೊಡುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಪರಿಶೀಲನೆ: ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ವಿತರಿಸುವ ಪ್ರಸಾದವನ್ನು ಕಡ್ಡಾಯವಾಗಿ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪರಿಶೀಲಿಸುವುದು ಹಾಗೂ ಆಹಾರ ತಯಾರಿಕೆ ಬಳಸುವ ಪದಾರ್ಥಗಳನ್ನು ಪರಿಶೀಲನೆಗೆ ಒಳಪಡಿಸಿಯೇ ಬಳಸಲು ಕ್ರಮಕೈಗೊಳ್ಳಲಾಗುವುದು. ಒಟ್ಟಾರೆ ಜಾತ್ರೋತ್ಸವನ್ನು ಸಡಗರ ಸಂಭ್ರಮದೊಂದಿಗೆ ಯಾವುದೇ ರೀತಿಯಲ್ಲಿ ತೊಂದರೆಗೆ ಅವಕಾಶವಿಲ್ಲದ ರೀತಿಯಲ್ಲಿ ಅಚ್ಚಕಟ್ಟಾಗಿ ನೆರವೇರಿಸಲು ಪ್ರತಿಯೊಬ್ಬರು ಬದ್ಧತೆ ತೋರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ದಯಾನಂದ ಸ್ವಾಮಿ ಎಂ.ಎಂ., ಕಂದಾಯ ಇಲಾಖೆ ನಿರೀಕ್ಷಕ ಶರಣಪ್ಪ ಮುರ್ನಾಪುರ, ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ರೇಣಿ, ಕಾರ್ಯದರ್ಶಿ ಶಿವಪ್ಪ ಪುರ್ತಗೇರಿ, ಗ್ರಾಮ ಆಡಳಿತಾಧಿಕಾರಿ ಶಿವಶರಣಪ್ಪಗೌಡ ಪಾಟೀಲ, ಆಯುಷ್ ವೈದ್ಯಾಧಿಕಾರಿ ಟಿ.ಜೆ.ಗಾಟ್ಗೆ, ಜೆಸ್ಕಾಂ ಶಾಖಾಧಿಕಾರಿ ಸೋಮಶೇಖರ.ಆರ್, ದೇವಸ್ಥಾನದ ವ್ಯವಸ್ಥಾಪಕ ಚಂದಪ್ಪ ಕುರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಂಟೆಪ್ಪ ಚಿಣಗಿ, ಮಾಹಾಲಿಂಗಪ್ಪ ಗುಡದೂರ, ಬಸವರಾಜ ತಳವಾರ, ಕುಂಟೆಪ್ಪ ಹುನೂರು, ರವೀಂದ್ರಗೌಡ ದಳಪತಿ, ಮಂಜುನಾಥ ಬೇವೂರು, ದೇವಪ್ಪ ಕುರಿ, ಹನುಮೇಶ ಚಿಣಗಿ, ಯಂಕಪ್ಪ ಗದ್ದಿ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.