ADVERTISEMENT

ತಪಾಸಣೆಗೆ ಒಳಗಾಗದ ವಲಸಿಗರು, ಚೆಕ್‌ಪೋಸ್ಟ್‌ ತೆರೆಯುವಂತೆ ಸಾರ್ವಜನಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 3:56 IST
Last Updated 30 ಏಪ್ರಿಲ್ 2021, 3:56 IST
ಕುಷ್ಟಗಿ ತಾಲ್ಲೂಕಿನ ಮುದೇನೂರಿಗೆ ಗುರುವಾರ ತಹಶೀಲ್ದಾರ್ ಎಂ.ಸಿದ್ದೇಶ್ ಭೇಟಿ ನೀಡಿ ಕೋವಿಡ್‌ ಮುಂಜಾಗ್ರತೆ ಪರಿಶೀಲಿಸಿದರು
ಕುಷ್ಟಗಿ ತಾಲ್ಲೂಕಿನ ಮುದೇನೂರಿಗೆ ಗುರುವಾರ ತಹಶೀಲ್ದಾರ್ ಎಂ.ಸಿದ್ದೇಶ್ ಭೇಟಿ ನೀಡಿ ಕೋವಿಡ್‌ ಮುಂಜಾಗ್ರತೆ ಪರಿಶೀಲಿಸಿದರು   

ಕುಷ್ಟಗಿ: ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿಯೂ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ಅನ್ಯ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ವಲಸಿಗರ ಮೇಲೆ ಸೂಕ್ತ ರೀತಿಯಲ್ಲಿ ನಿಗಾ ಇರಿಸದೇ ಇರುವುದು ಜನರಲ್ಲಿನ ಆತಂಕಕ್ಕೆ ಕಾರಣವಾಗಿದೆ.

ಈ ಭಾಗದಿಂದ ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರ,ಪುಣೆ, ಮುಂಬೈ ಸೇರಿದಂತೆ ಇತರೆ ಪ್ರದೇಶಗಳು ಹಾಗೂ ಬೆಂಗಳೂರು, ಮಂಗಳೂರು ಇತರೆ ನಗರಗಳಿಗೆ ಸಾಕಷ್ಟು ಸಂಖ್ಯೆ ಜನರು ದುಡಿಮೆ ಅರಸಿ ವಲಸೆ ಹೋಗಿದ್ದಾರೆ. ಆ ಭಾಗಗಳಲ್ಲಿ ಸೋಂಕು ಹೆಚ್ಚುತ್ತಿರುವುದರಿಂದ ಸ್ವ ಗ್ರಾಮ, ಪಟ್ಟಣಗಳಿಗೆ ಮರಳುತ್ತಿರುವುದು ಕಂಡುಬಂದಿದೆ.

ಆದರೆ, ಹೀಗೆ ಬರುವ ಜನರು ಯಾವುದೇ ವೈದ್ಯಕೀಯ ಪರೀಕ್ಷೆಗೆ ಒಳಗಾಗದೆ ಮನೆಗೆ ಸೇರುತ್ತಿದ್ದಾರೆ.

ADVERTISEMENT

ಕಳೆದ ವರ್ಷ ಲಾಕ್‌ಡೌನ್‌ ಸಂದರ್ಭದಲ್ಲಿ ಜಿಲ್ಲೆ ಮತ್ತು ರಾಜ್ಯದ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ವಲಸೆ ಬರುವ ಜನರ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸುವ ಮೂಲಕ ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿತ್ತು. ಆದರೆ ಈಗ ಅಂಥ ಕೆಲಸ ನಡೆಯುತ್ತಿಲ್ಲ. ಸಾರಿಗೆ ಬಸ್‌ಗಳು ಇಲ್ಲದಿದ್ದರೂ ಖಾಸಗಿ ವಾಹನ, ಲಾರಿಗಳ ಮೂಲಕ ತಂಡೋಪತಂಡವಾಗಿ ವಲಸಿಗರು ಊರಿಗೆ ಮರಳುತ್ತಿದ್ದಾರೆ. ಹಾಗಾಗಿ ಸೋಂಕು ವ್ಯಾಪಕವಾಗುವ ಸಾಧ್ಯತೆ ಇದೆ ಎಂದು ಪಟ್ಟಣದ ನಾಗರಿಕರು ಆತಂಕ ವ್ಯಕ್ತಪಡಿಸಿದರು.

ಭೇಟಿ: ‘ಕುಷ್ಟಗಿ ಪಟ್ಟಣದಲ್ಲಿ ಬುಧವಾರ 37 ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 110 ಕೋವಿಡ್ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಮುದೇನೂರು, ದೋಟಿಹಾಳ, ಬೆಂಚಮಟ್ಟಿ ಸುತ್ತಲಿನ ಹಳ್ಳಿಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬಂದಿದೆ. ಈ ಕಾರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಲು ಸಂಬಂಧಿಸಿದ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಅಗತ್ಯ ತಿಳಿವಳಿಕೆ, ಎಚ್ಚರಿಕೆ ನೀಡಲಾಗಿದೆ’ ಎಂದು ತಹಶೀಲ್ದಾರ್ ತಿಳಿಸಿದರು.

ಗ್ರಾಮ ಭೇಟಿ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವಿ.ವೆಂಕಟೇಶ್, ವೈದ್ಯ ಡಾ.ನೀಲಪ್ಪ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ ಮಾಹಿತಿ ನೀಡಿ, 'ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಪಟ್ಟಣಕ್ಕೆ ಬರುವವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಂಥವರು ಸ್ವಯಂ ಪ್ರೇರಣೆಯಿಂದ ತಪಾಸಣೆಗೆ ಮುಂದೆ ಬಂದರೆ ಅವರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಎಲ್ಲ ರೀತಿಯ ಅನುಕೂಲಗಳನ್ನು ಒದಗಿಸಿಕೊಡಲಾಗುತ್ತದೆ. ಅದೇ ರೀತಿ ಪಾಸಿಟಿವ್ ಇದ್ದವರು ಮನೆಯಲ್ಲಿಯೇ ಪ್ರತ್ಯೇಕವಾಗಿ ಉಳಿಯಬೇಕು' ಎಂದು ಮನವಿ ಮಾಡಿದ್ದಾರೆ.

'ಹೊರಗೆ ಬೇರೆಯವರೊಂದಿಗೆ ಬೆರೆಯುತ್ತಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಪರಸ್ಥಳಗಳಿಂದ ಬಂದವರು, ಸೋಂಕಿತ ವ್ಯಕ್ತಿಗಳು ಕಂಡುಬಂದರೆ ಅಕ್ಕಪಕ್ಕದ ಮನೆಯವರು ಮಾಹಿತಿ ನೀಡಬೇಕು' ಎಂದು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.