
ಯಲಬುರ್ಗಾ: ‘ಯುವಜನತೆಗೆ ಉತ್ತಮ ನೌಕರಿ ಲಭಿಸಲು ಕೌಶಲ ಕೂಡ ಅಗತ್ಯವಾಗಿದ್ದು, ನಮ್ಮ ಸರ್ಕಾರ ಬಡಮಕ್ಕಳಿಗೆ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಆರಂಭಿಸಲು ಆದ್ಯತೆ ಕೊಡುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಖಾತೆ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ‘ಬಸವರಾಜ ರಾಯರಡ್ಡಿ ಅವರಿಗೆ ಜನಪರ ಕಾಳಜಿ ಇರುವುದರಿಂದಲೇ ಕ್ಷೇತ್ರದಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸಗಳಾಗುತ್ತಿವೆ. ಬಡವರಿಗೆ ಯೋಜನೆಗಳನ್ನು ಕೊಟ್ಟರೆ ಕೆಲವರಿಗೆ ಹೊಟ್ಟೆಕಿಚ್ಚು. ಆದರೆ ನಮಗೆ ಬಡವರು ಉದ್ದಾರವಾದರೆ ಮಾತ್ರ ರಾಜ್ಯದ ಅಭಿವೃದ್ಧಿಯಾಗುತ್ತದೆ ಎನ್ನುವ ಆಶಯ ಹೊಂದಿದ್ದೇವೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದ್ದು, ಪ್ರಣಾಳಿಕೆಯಲ್ಲಿ ಹೇಳಿದಂತೆ ಕೆಲಸಗಳನ್ನು ಮಾಡಿದ್ದೇವೆ. ದೇಶದಲ್ಲಿಯೇ ರಾಜ್ಯದ ಜಿಡಿಪಿ ಹೆಚ್ಚಿದೆ. ಬಡವರ ಅನುಕೂಲಕ್ಕಾಗಿ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ನೀಡಿದ್ದೇವೆ. ರಾಜ್ಯದಲ್ಲಿ 800 ಬಿಎಸ್‌ಸಿ ನರ್ಸಿಂಗ್ ಕಾಲೇಜುಗಳು ಇದ್ದು, ನರ್ಸಿಂಗ್ ಕಲಿತರೆ ಖಂಡಿತವಾಗಿಯೂ ಉದ್ಯೋಗ ಲಭಿಸುತ್ತದೆ’ ಎಂದು ಹೇಳಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಆದ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಮಾತನಾಡಿ ‘ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಸದ್ವಿನಿಯೋಗ ಮಾಡುತ್ತಿದೆ. ಆದರೂ ಕೆಲವರು ಅಭಿವೃದ್ಧಿಯಾಗುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ನೂತನ ನರ್ಸಿಂಗ್ ಕಾಲೇಜು ಆರಂಭವಾಗಿದ್ದರಿಂದ ಬಡವರಿಗೂ ನರ್ಸಿಂಗ್ ಕಲಿಕೆ ಸುಲಭವಾಗಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಮುಂದಿನ ಕೆಲ ದಿನಗಳಲ್ಲಿ ಕನಿಷ್ಠ ಎರಡು ಸಾವಿರ ಮಕ್ಕಳಿಗೆ ಆಗುವಷ್ಟು ಹಾಸ್ಟೆಲ್ ಸೌಲಭ್ಯ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಯಲಬುರ್ಗಾ ಕ್ಷೇತ್ರದಲ್ಲಿ ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿ ಓದುವ ತತನಕ ಎಲ್ಲ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಸಿಗುತ್ತದೆ. ಕೃಷ್ಣಾ ನದಿಯಿಂದ ಕೆರೆ ತುಂಬಿಸುವ ಯೋಜನೆಗೆ ₹272 ಕೋಟಿ ಅನುದಾನ ಒದಗಿಸಲು ಸರ್ಕಾರ ನಿರ್ಧರಿಸಿದೆ. ಮಾರ್ಚ್‌ನಲ್ಲಿ ಕೆಲಸ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮಹೇಶ್ ಮಾಲಗಿತ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ. ವೈ. ಶೆಟ್ಟೆಪ್ಪನವರ್. ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ, ಡಿಎಚ್‌ಒ ಡಾ. ಲಿಂಗರಾಜು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ನರ್ಸಿಂಗ್ ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರದಿಂದ 10 ಎಕರೆ ಭೂಮಿ ನೀಡಿದ್ದು ₹9.85 ಕೋಟಿ ಕಾಲೇಜಿನ ಸಿಬ್ಬಂದಿ ಪ್ರಯೋಗಾಲಯ ಮತ್ತು ಇತರೆ ಕಟ್ಟಡಗಳ ನಿರ್ಮಾಣಕ್ಕೆ ನೀಡಲಾಗಿದೆ.ಡಾ. ಸುರೇಶ ಇಟ್ನಾಳ ಜಿಲ್ಲಾಧಿಕಾರಿ
ಕಾನ್ವೆಂಟ್ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿದವರು ಮಾತ್ರ ಬುದ್ಧಿವಂತರು ಎನ್ನುವ ಕೀಳರಿಮೆ ಭಾವದಿಂದ ಹೊರಬರಬೇಕು. ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಓದಿದವರ ಆತ್ಮವಿಶ್ವಾಸ ಹೆಚ್ಚಿರುತ್ತದೆ.ಬಸವರಾಜ ರಾಯರಡ್ಡಿ ಶಾಸಕ
ಯಾವ ಕಾಮಗಾರಿಗಳು?
ಸಚಿವ ಶರಣಪ್ರಕಾಶ ಪಾಟೀಲ ಅವರು ಬಿಎಸ್‌ಸಿ ನರ್ಸಿಂಗ್ ಕಾಲೇಜು ಪ್ರಾರಂಭೋತ್ಸವ ಕಾಲೇಜಿನ ನೂತನ ಕಟ್ಟಡಕ್ಕೆ ಭೂಮಿಪೂಜೆ ತಾಲ್ಲೂಕು ಪಂಚಾಯಿತಿ ಆಡಳಿತ ಭವನದ ಅಡಿಗಲ್ಲು ಶಿಕ್ಷಕರ ತರಬೇತಿ ಕೇಂದ್ರ ಕಚೇರಿ ಶಂಕುಸ್ಥಾಪನೆ ಯಲಬುರ್ಗಾ- ಕುಕನೂರ ಪಟ್ಟಣ ಪಂಚಾಯತಿಯಿಂದ ಮಲ ಕೆಸರು ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ ಬಾಲ ಭವನ ಅಂಗನವಾಡಿ ತರಬೇತಿ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.