
ಕಾರಟಗಿ: ಹೈ-ಕ ಭಾಗದಲ್ಲಿ 371ಜೆ ಸಂಜೀವಿನಿಯಾಗಿದೆ. ಈಗಾಗಲೇ ಅಧಿಕ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಭವಿಷ್ಯದಲ್ಲಿ ನಮ್ಮ ಭಾಗದವರೇ ಶೇ 80ಕ್ಕೂ ಅಧಿಕ ಸಂಖ್ಯೆಯಲ್ಲಿ ಶಿಕ್ಷಕರಿರಲಿದ್ದಾರೆ. ಜೊತೆಗೆ ಇತರ ಉದ್ಯೋಗ, ಉನ್ನತ ಶಿಕ್ಷಣಕ್ಕೂ ಪ್ರಾಶಸ್ತ್ಯ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲ್ಲೂಕಿನ ಮರ್ಲಾನಹಳ್ಳಿಯಲ್ಲಿ ನಡೆದ ಕಾರಟಗಿ ತಾಲ್ಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಕನಕಗಿರಿ ಕ್ಷೇತ್ರದಲ್ಲಿ ಕೆರೆ ತುಂಬುವ ಯೋಜನೆಯಿಂದ ಜನ, ಜಾನುವಾರು, ಕೃಷಿ, ತೋಟಗಾರಿಕೆಗೆ ಬಹುದೊಡ್ಡ ವರದಾನವಾಗಿದೆ. ಈ ಯೋಜನೆ ರಾಜ್ಯಕ್ಕೆ ಮಾದರಿಯಾಗಿದೆ. ತುಂಗಭದ್ರಾ ಜಲಾಶಯದ 10 ಗೇಟ್‍ಗಳನ್ನು ಅಳವಡಿಸಲಾಗಿದೆ. ಮೇ ಅಂತ್ಯದೊಳಗೆ ಉಳಿದೆಲ್ಲಾ ಗೇಟ್‍ಗಳನ್ನು ಅಳವಡಿಸಲಾಗುವುದು’ ಎಂದರು.
ಹೋರಾಟಗಾರ ಬಸವಂತರಾಯ ಕುರಿ ಮಾತನಾಡಿ, ‘ಭಾಷೆಯ ಪ್ರಾಮುಖ್ಯತೆ ಸಾಕಷ್ಟಿದೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಭಾಷೆಯನ್ನು ನಿರ್ಲಕ್ಷಿಸುತ್ತಿರುವುದು ವಿಷಾದಕರ. ದಾರ್ಶನಿಕರು, ತತ್ವಪದಕಾರರ ಸಂವೇದನೆಯನ್ನು ಜನರು ಅರಿತು ಅವನ್ನು ಅಳವಡಿಸಿಕೊಳ್ಳಬೇಕಿದೆ’ ಎಂದರು.
‘ಪ್ರಾದೇಶಿಕ ಅಸಮಾನತೆ ಕೆಲ ಶತಮಾನ ಉರುಳಿದರೂ ಮುಂದುವರೆದಿದೆ. 371ಜೆ ಕಲಂನಿಂದ ಅಲ್ಪ ಮಟ್ಟಿಗೆ ಪ್ರಾದೇಶಿಕ ಅಸಮಾನತೆ ದೂರವಾಗಿ, ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ. ಡಿ.ಎಂ. ನಂಜುಂಡಪ್ಪ ವರದಿ, ಗೋವಿಂದರಾವ್ ವರದಿಯಲ್ಲಿ ಹಿಂದುಳಿತ ತಾಲ್ಲೂಕುಗಳ ಪಟ್ಟಿಯಲ್ಲಿ ನಮ್ಮ ಭಾಗದ ತಾಲ್ಲೂಕುಗಳು ಮುಂದುವರೆದಿರುವುದು ದುರಂತ’ ಎಂದರು.
ಸಮ್ಮೇಳನದ ಅಧ್ಯಕ್ಷ ಸಿ.ಬಿ. ಚಿಲ್ಕರಾಗಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸಪಾಟೀಲ್, ತಾಲ್ಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ ಸಹಿತ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.