
ಕುಷ್ಟಗಿ: ‘ನಮ್ಮ ಕ್ಷೇತ್ರದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಗಾಳಿ ವಿದ್ಯುತ್ ಫ್ಯಾನ್‌ಗಳೇ ಕಾಣುತ್ತಿವೆ, ಅಷ್ಟೇ ಏಕೆ ಭೂಮಿಗಿಂತ ಹೆಚ್ಚಾಗಿ ವಿದ್ಯುತ್ ಉತ್ಪಾದಿಸುವ ಗಾಳಿಯಂತ್ರಗಳೇ ಎಲ್ಲೆಂದರಲ್ಲಿ ರಾರಾಜಿಸುತ್ತಿದ್ದು ರೈತರು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ’
ತಾಲ್ಲೂಕಿನಲ್ಲಿ ಮಿತಿಮೀರಿದ ಸಂಖ್ಯೆಯ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ಯಂತ್ರಗಳ ಸ್ಥಾಪನೆಯಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ಇಲ್ಲಿಯ ಶಾಸಕ ದೊಡ್ಡನಗೌಡ ಪಾಟೀಲ ಚುಕ್ಕೆ ಗುರುತಿನ ಪ್ರಶ್ನೆಗೆ ಸಭಾಧ್ಯಕ್ಷರ ಮುಂದೆ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಲ್ಲದೆ ವಿಂಡ್‌ಮಿಲ್ ಕಂಪೆನಿಗಳಿಗೆ ಸರ್ಕಾರ ಅಗತ್ಯ ಮೂಗುದಾರ ತೊಡಿಸಬೇಕಿದೆ ಎಂದು ಹೇಳಿದರು.
ರೈತರಿಂದ ಹೊಲಗಳನ್ನು ಖರೀದಿ ಮಾಡುತ್ತಿರುವ ಕಂಪನಿಗಳು ಯಾವ ಮಾನದಂಡ ಅನುಸರಿಸುತ್ತಿವೆ ಎಂಬುದು ಗೊತ್ತಾಗುತ್ತಿಲ್ಲ, ಒಬ್ಬ ರೈತ ಜಮೀನು ಕೊಟ್ಟರೆ ಅಕ್ಕಪಕ್ಕದ ರೈತರು ವಿಂಡ್‌ಮಿಲ್‌ಗಳ ಹಾವಳಿಯಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಮೇಲೆಯೇ ಕಂಪನಿಗಳ ಸಿಬ್ಬಂದಿ ಗೂಂಡಾಪ್ರವೃತ್ತಿ ಮೆರೆಯುತ್ತಿದ್ದಾರೆ. ಇನ್ನೊಂದೆಡೆ ರಕ್ಷಣಿಗೆ ಮುಂದಾಗಬೇಕಿದ್ದ ಪೊಲೀಸರೂ ರೈತರನ್ನೇ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎನರ್ಜಿಯವರು ಗುರುತಿಸಿದ ಪ್ರಕಾರ ರಾಜ್ಯದಲ್ಲಿ ಈಗಾಗಲೇ ಗಾಳಿ ಬೀಸುವ ಆಧಾರದ ಮೇಲೆ ವಿಂಡ್‌ಮಿಲ್‌ಗಳನ್ನು ಸ್ಥಾಪಿಸಲಾಗುತ್ತಿದ್ದು ಕಂಪನಿಗಳು ನೇರವಾಗಿ ರೈತರಿಂದ ಜಮೀನು ಖರೀದಿಸುತ್ತಿವೆ. ವಿದ್ಯುತ್ ಅಭಾವದ ಕಾರಣಕ್ಕೆ ಸರ್ಕಾರ ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ವಿಂಡ್‌ಮಿಲ್‌ಗಳ ಸಲಕರಣೆಗಳ ಸಾಗಣೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳು ಹೆಚ್ಚಿನ ಭಾರ ಹೊರುವ ಸಾಮರ್ಥ್ಯ ಹೊಂದಿರುವುದಿಲ್ಲ ಎಂಬುದು ಗೊತ್ತಾಗಿದೆ. ರಸ್ತೆ ದುರಸ್ತಿ ಮಾಡುವುದು ವಿಂಡ್‌ಮಿಲ್ ಸ್ಥಾಪನೆ ಮಾಡುವವರದ್ದೇ ಜವಾಬ್ದಾರಿಯಾಗಿದೆ. ಈಗಾಗಲೇ ಸಂಬಂಧಿಸಿದವರಿಗೆ ನಿರ್ದೇಶನ ನೀಡಲಾಗಿದೆ’ ಎಂದು ಭರವಸೆ ನೀಡಿದರು.
ರಸ್ತೆಗಳ ದುರಸ್ತಿ ಜವಾಬ್ದಾರಿ ಗಾಳಿಯಂತ್ರ ಅಳವಡಿಸುವ ಕಂಪನಿಗಳಿಗೆ ಸೇರಿದೆ ಈ ಬಗ್ಗೆ ಸರ್ಕಾರ ಶೀಘ್ರದಲ್ಲಿ ಸ್ಪಷ್ಟ ಆದೇಶ ಹೊರಡಿಸಲಿದೆ.ಕೆ.ಜೆ.ಜಾಜ್ ಇಂಧನ ಸಚಿವ
ಬೇಸಿಗೆಯಲ್ಲಿ ಹೆಚ್ಚಿನ ವಿದ್ಯುತ್ ನೀಡಿ
ಕುಷ್ಟಗಿ ಕ್ಷೇತ್ರದಲ್ಲಿ ಹೆಚ್ಚಿನ ರೈತರು ನೀರಾವರಿಗೆ ಕೃಷಿಪಂಪ್‌ಸೆಟ್‌ಗಳನ್ನೇ ಅವಲಂಬಿಸಿದ್ದು ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಹಗಲಿನಲ್ಲಿ ರೈತರ ಕೃಷಿಪಂಪ್‌ಸೆಟ್‌ಗಳಿಗೆ ನಿರಂತರ ಮೂರು ಫೇಸ್ ವಿದ್ಯುತ್ ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಮತ್ತು ಕಲಾಲಬಂಡಿ ಕೊರಡಕೇರಾಗಳಲ್ಲಿ 33 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸುವಂತೆ ಇಂಧನ ಸಚಿವರಲ್ಲಿ ಮನವಿ ಮಾಡಿದರು. ಭೂಮಿಯ ಲಭ್ಯತೆ ಆಧರಿಸಿ ಕೊರಡಕೇರಾ ಹಾಗೂ ಕಲಾಲಬಂಡಿ ಬಳಿ 33 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಮಂಜೂರಾತಿ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.