ಕುಕನೂರು: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರ ಶಾಸಕ ಪ್ರದೇಶಾಭಿವೃದ್ಧಿ ನಿಧಿಯ ಬಹುಪಾಲು ಮೊತ್ತವು ಕ್ಷೇತ್ರದಲ್ಲಿ ಮೂಲಸೌಕರ್ಯ ಒದಗಿಸುವುದಕ್ಕೆ ವಿನಿಯೋಗವಾಗಿದೆ.
2018-19, 2021-22ನೇ ಸಾಲಿನ ಅಂಕಿ ಅಂಶಗಳನ್ನು ಅವಲೋಕಿಸಿದಾಗ ಮೂಲಸೌಕರ್ಯ ಕಲ್ಪಿಸುವುದು ಅವರ ಆದ್ಯತೆ ಎನ್ನುವುದು ಗೊತ್ತಾಗುತ್ತದೆ. ಜೊತೆಗೆ ದೇವಸ್ಥಾನಗಳಿಗೂ ಪ್ರದೇಶಾ ಭಿವೃದ್ಧಿ ನಿಧಿಯನ್ನು ವಿನಿಯೋಗಿಸಿದ್ದಾರೆ.
93 ಅಂಗವಿಕಲರ ತ್ರಿಚಕ್ರ ವಾಹನ ಹಾಗೂ ಶ್ರವಣ ಉಪಕರಣಗಳಿಗೆ ಅನುದಾನವನ್ನು ಬಳಕೆ ಮಾಡಿಕೊಂಡಿದ್ದಾರೆ. ಆರಾಧನೆ ಯೋಜನೆ ಅಡಿಯಲ್ಲಿ ದೇವಸ್ಥಾನಗಳಿಗೆ ಪ್ರತಿವರ್ಷ ಅನುದಾನ ನೀಡಿದ ಹಲವು ಯೋಜನೆಗಳು ಇವೆ. ಎಸ್.ಸಿ ಸಮುದಾಯದ 25 ದೇವಸ್ಥಾನಗಳಿಗೆ ಹಾಗೂ ಇತರೆ ಸಮುದಾಯದ 147 ದೇವಸ್ಥಾನಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ದೇವಸ್ಥಾನಗಳಿಗೆ ಅನುದಾನವನ್ನು ನೀಡದೇ ಹೋದರೆ ಜನರ ಭಾವನೆಗೆ ನೋವು ಉಂಟಾಗುತ್ತದೆ ಎಂಬ ಭಾವನೆ ಎಲ್ಲಾ ರಾಜಕಾರಣಿಗಳಿಗೆ ಇರುವುದ ರಿಂದ ಮಸೀದಿ, ಚರ್ಚ್, ದೇವಸ್ಥಾನಕ್ಕೆ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ.
2018-19ರಲ್ಲಿ ಬರಬೇಕಾಗಿದ್ದ ₹ 2 ಕೋಟಿ ಅನುದಾನದಲ್ಲಿ ₹1.65 ಕೋಟಿ ಮಾತ್ರ ಬಂದಿದೆ. ಅದರಲ್ಲಿ 60 ಕಾಮಗಾರಿ ಪೂರ್ಣಗೊಳಿಸಿದ್ದಾರೆ. 2019-20ರಲ್ಲಿ ₹ 2 ಕೋಟಿ ಬರಬೇಕಾದ ಅನುದಾನದಲ್ಲಿ ₹1.91 ಕೋಟಿ ಬಂದಿದ್ದು 65 ಕಾಮಗಾರಿ ಪೂರ್ಣಗೊಳಿಸಿದ್ದಾರೆ.
2020-21ರಲ್ಲಿ ₹ 1 ಕೋಟಿ ಬರಬೇಕಾದ ಅನುದಾನ ₹ 90.85 ಲಕ್ಷ ಬಂದಿದ್ದು 30 ಕಾಮಗಾರಿ ಪೂರ್ಣಗೊಳಿಸಿದ್ದಾರೆ. 2021-22ರಲ್ಲಿ ₹ 1 ಕೋಟಿ ಬರಬೇಕಾದ ಅನುದಾನದಲ್ಲಿ ಇದುವರೆಗೆ ₹ 55 ಲಕ್ಷ ಬಂದಿದ್ದು 25 ಕಾಮಗಾರಿ ಪೂರ್ಣಗೊಳಿಸಿದ್ದಾರೆ.
ಪ್ರಸ್ತುತ ವರ್ಷದ ಅನುದಾನ ₹ 45 ಲಕ್ಷ ಇನ್ನೂ ಬರಬೇಕಿದೆ. ಉಳಿದ ಅನುದಾನ ಮುಂದಿನ ವರ್ಷ ಬಳಸಿಕೊಳ್ಳಲು ವಿವಿಧ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನುದಾನ ವಿನಿಯೋಗ ಮಾಡಿದ್ದಾರೆ.
ವಿವಿಧ ಜಾತಿ ಮತ್ತು ಸಮುದಾಯಗಳ ಹೆಚ್ಚಿನ ಬೇಡಿಕೆಯಾಗಿರುವ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಇತರೆ ಸಣ್ಣಪುಟ್ಟ ಸಮುದಾಯಗಳ ಭವನವನ್ನು ನಿರ್ಮಿಸಲಾಗಿದೆ.
ಬರುವ ₹ 2 ಕೋಟಿ ಅನುದಾನದಲ್ಲಿ ಹೆಚ್ಚಿನ ಅಭಿವೃದ್ಧಿ ಹಾಗೂ ನಿರೀಕ್ಷೆ ಇಲ್ಲ. ಜಾತ್ರೆ, ಧಾರ್ಮಿಕ ಸಮಾರಂಭ ಮತ್ತು ವಿವಿಧ ಜಾತಿಗಳ ಸಮಾವೇಶಗಳಿಗೆ ಹೋದಾಗ ನೀಡಿದ ಆಶ್ವಾಸನೆಯಂತೆ ಕೆಲವು ಲಕ್ಷ ರೂಪಾಯಿನೀಡಿದ್ದಾರೆ.
‘ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುದಾನವನ್ನು ಬಹುಪಾಲು ಬಳಕೆ ಮಾಡಿಕೊಂಡಿದ್ದೇನೆ. ನಮ್ಮ ತಾಲ್ಲೂಕನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತೇನೆ‘ ಎಂದು ಸಚಿವ ಹಾಲಪ್ಪ ಆಚಾರ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.