ADVERTISEMENT

ಏಪ್ರಿಲ್‌ 10ರವರೆಗೆ 2ನೇ ಬೆಳೆಗೆ ನೀರು ಖಚಿತ

ಶಾಸಕ ಬಸವರಾಜ ದಢೇಸುಗೂರ ಭರವಸೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 11:04 IST
Last Updated 23 ನವೆಂಬರ್ 2019, 11:04 IST
ಬಸವರಾಜ್ ದಢೇಸುಗೂರು
ಬಸವರಾಜ್ ದಢೇಸುಗೂರು   

ಕಾರಟಗಿ: ‘ರೈತರ ಎರಡನೇ ಬೆಳೆಗೆ ತುಂಗಭದ್ರಾ ಜಲಾಶಯದಿಂದ ಏಪ್ರಿಲ್‌ 10ರವರೆಗೆ ನೀರು ಬಿಡುವುದು ಖಚಿತ.ಈ ಸಂಬಂಧ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು. ರೈತರು ಧೃತಿಗೆಡದೇ ಎಂದಿನಂತೆ ಬೆಳೆ ಬೆಳೆಯಲು ಮುಂದಾಗಿ’ ಎಂದು ಶಾಸಕ ಬಸವರಾಜ ದಢೇಸುಗೂರು ಭರವಸೆ ನೀಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ನಡೆದ ಐಸಿಸಿ ಸಭೆಯ ತೀರ್ಮಾನದಿಂದ ರೈತರು ಆತಂಕಪಡಬೇಕಿಲ್ಲ. ನೀರಾವರಿ ವರ್ಷ ಮಾರ್ಚ್‌ 31ರವರೆಗೆ ಇರುವಂತೆ ತೀರ್ಮಾನ ಕೈಗೊಳ್ಳಲಾಗಿದ್ದು, ನೀರು ಬಿಡುವ ಅವಧಿಯನ್ನು ಬಳಿಕ ವಿಸ್ತರಿಸಲಾಗುವುದು. ಇದಕ್ಕಾಗಿ ನಮ್ಮ ಭಾಗದ ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಹಿತ ಇತರ ಸಚಿವರನ್ನು ಸಂಪರ್ಕಿಸಿ, ರೈತರ ಬೆಳೆ ರಕ್ಷಿಸಲಾಗುವುದು ಎಂದು ಅಭಯ ನೀಡಿದರು.

ರೈತರು ಮುಂಗಾರು ಹಂಗಾಮಿಗೆ ಸಸಿ ನಾಟಿ ಮಾಡಲು ಕೆಲ ಸಮಸ್ಯೆಗಳಿಂದ ತಡವಾಗಿದೆ. 2ನೇ ಬೆಳೆಗೆ ಬೇಕಾದ ನೀರನ್ನು ಒದಗಿಸಲಾಗುವುದು. ಹೆಚ್ಚು ದಿನಗಳವರೆಗೆ ನೀರು ಬಿಡುವುದಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಶ್ರೀರಾಮುಲು, ಶಾಸಕರು, ಸಂಸದರೊಂದಿಗೆ ಚರ್ಚಿಸಲಾಗಿದೆ. ಅವರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾದ ವಾರದೊಳಗೆ ನೀರು ಬಿಡುವ ಬಗ್ಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ. ರಾಜ್ಯದ ಬಿಜೆಪಿ ಸರ್ಕಾರ ರೈತರ ಪರವಾಗಿದೆ. ಹೆಚ್ಚಿನ ದಿನಗಳ ಕಾಲ ಎಡದಂಡೆ ಮುಖ್ಯನಾಲೆಗೆ ನೀರು ಹರಿಸುವಂತೆ ಶಾಸಕನಾಗಿ ಪ್ರಾಮಾಣಿಕ ಯತ್ನ ಮಾಡುವೆ. ರೈತರು ರಾಜಕೀಯ ಪ್ರೇರಿತ ಹೇಳಿಕೆ, ಹೋರಾಟಕ್ಕೆ ತಲೆ ಕೆಡಿಸಿಕೊಳ್ಳಬಾರದು’ ಎಂದು ಮನವಿ ಮಾಡಿದರು.

ಭರವಸೆಯ ಹೇಳಿಕೆಗೆ ಬದ್ಧ: 2ನೇ ಬೆಳೆಗೆ ಏಪ್ರಿಲ್‌ 10ರವರೆಗೆ ನೀರು ಬಿಡಿಸಲಾಗುವುದು ಎಂಬ ಹಿಂದಿನ ಭರವಸೆಯ ಹೇಳಿಕೆಗೆ ಈಗಲೂ ಬದ್ಧ. ಈ ಭಾಗದ ರೈತರ ಸಮ್ಮುಖದಲ್ಲಿ ಸಾರ್ವಜನಿಕವಾಗಿ ಇದೇ ಹೇಳಿಕೆ ನೀಡಲು ಸಿದ್ದ. ರೈತರ, ನೀರಿನಂತಹ ಗಂಭೀರ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಕಳೆದ ಬಾರಿ ಬಳ್ಳಾರಿ ಜಿಲ್ಲೆಯವರು ಹೆಚ್ಚುವರಿಯಾಗಿ ಬಳಸಿಕೊಂಡಿರುವ 3.8 ಟಿಎಂಸಿ ನೀರಿನ ವಿಷಯ ಮುಗಿದ ಅಧ್ಯಾಯ. ಇನ್ನು ಸಿಸ್ಟಂ ಲಾಸ್, ಡೆಡ್ ಸ್ಟೋರೇಜ್ ಹಾಗೂ ಆವಿಯಾಗುವ ನೀರಿನ ಪ್ರಮಾಣ 14 ಟಿಎಂಸಿ ಕಾಯ್ದಿರಿಸಿರುವ ವಿಷಯವನ್ನು ಮತ್ತೊಮ್ಮೆ ಡಿಸಿಎಂ ಹಾಗೂ ನೀರಾವರಿ ಅಧಿಕಾರಿಗಳ ಜತೆಗೆ ಚರ್ಚಿಸಲಾಗುವುದು ಹೇಳಿದರು.

‘ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದು 4 ತಿಂಗಳಾಗಿದೆ. ಕಾರ್ಖಾನೆಗಳಿಗೆ ನೀರು ಮಾರಾಟ ಮಾಡುವ ಮಾಡುವ ನೀಚ ಕೆಲಸ ಬಿಜೆಪಿಯವರಿಗೆ ಬರುವುದಿಲ್ಲ. ಇಂತಹ ಕೆಲಸ ತಂಗಡಗಿ ಅವರಂತಹ ಜನಪ್ರತಿನಿಧಿಗಳಿಗೆ ಮಾತ್ರ ಗೊತ್ತು’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ಅವರ ಆರೋಪಕ್ಕೆ ತಿರುಗೇಟು ನೀಡಿದರು.


ವಕೀಲ ರಮೇಶ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಿರೇಬಸಪ್ಪ ಸಜ್ಜನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.