ADVERTISEMENT

ನೌಕರಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿ: ಪರಿಷತ್‌ ಸದಸ್ಯೆ ಹೇಮಲತಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 4:27 IST
Last Updated 3 ಮಾರ್ಚ್ 2026, 4:27 IST
ಹೇಮಲತಾ ನಾಯಕ
ಹೇಮಲತಾ ನಾಯಕ   

ಕೊಪ್ಪಳ: ‘ರಾಜ್ಯ ಸರ್ಕಾರ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಲು ಒಂದು ತಿಂಗಳಲ್ಲಿ ಪ್ರಕ್ರಿಯೆ ಆರಂಭಿಸುವುದಾಗಿ ಘೋಷಿಸಿದ್ದು, ಈ ಪ್ರಕ್ರಿಯೆಯನ್ನು ಶೇ. 56ರ ಮೀಸಲಾತಿ ಹೊರಗಿಟ್ಟು ಮಾಡುತ್ತಿರುವುದರಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಯುವಕರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಪ್ರಕ್ರಿಯೆ ತಕ್ಷಣವೇ ನಿಲ್ಲಿಸಬೇಕು’ ಎಂದು ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಆಗ್ರಹಿಸಿದರು.

‘ಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗ ರಚಿಸುವಾಗ ಶೇ. 56ರಷ್ಟೇ ಮೀಸಲಾತಿ ಇತ್ತು. ಸರ್ಕಾರ ಒಳಮೀಸಲಾತಿಗಾಗಿ ಮಸೂದೆ ಮಂಡಿಸಿ ರಾಜ್ಯಪಾಲರ ಅನುಮೋದನೆ ಪಡೆಯುವಾಗಲೂ ಅಷ್ಟೇ ಮೀಸಲಾತಿಯಿತ್ತು. ಈಗ ಏಕಾಏಕಿ ಮೀಸಲಾತಿಯನ್ನು ಶೇ. 50ಕ್ಕೆ ಇಳಿಸುವಾಗ ಪರಿಶಿಷ್ಟವರ್ಗದ ನಾಯಕರನ್ನು ಹಾಗೂ ಹೋರಾಟಗಾರರನ್ನು ಕತ್ತಲಲ್ಲಿ ಇರಿಸಲಾಗಿದೆ‘ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರಿಂದ  ಹಿಡಿದು ಅನೇಕ ಇಲಾಖೆಗಳ ಉದ್ಯೋಗಿಗಳಿಗೆ ವೇತನ ಕೊಡಲಾಗದೆ ಪರದಾಡುತ್ತಿದೆ. ಸಾರಿಗೆ, ಆರೋಗ್ಯ ಇಲಾಖೆ ನೌಕರರಿಗೆ ಪಾವತಿಸಬೇಕಾದ ಮೊತ್ತದಲ್ಲಿ ನೂರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ತನ್ನ ಎಡವಟ್ಟುಗಳನ್ನು ಹಾಗೂ ಆರ್ಥಿಕ  ದಿವಾಳಿತನ ಮುಚ್ಚಿಕೊಳ್ಳಲು ಮೀಸಲಾತಿಯನ್ನು ಗೊಂದಲ ಸೃಷ್ಟಿಸಿ ಉದ್ಯೋಗದ ಆಕಾಂಕ್ಷಿಗಳ ನಿರೀಕ್ಷೆಗಳಿಗೆ ಮಣ್ಣು ಸುರಿಯುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ಬಿಜೆಪಿ ರಾಜ್ಯ ಕಾರ್ಯಕಾರಿಣಿ ನೂತನ ಸದಸ್ಯ ನಾಗರಾಜ್‌ ಬಿಲ್ಗಾರ ಮಾತನಾಡಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಸಮುದಾಯದ ಜನರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುತ್ತಿದ್ದಾರೆ. ಸಮಾಜವನ್ನು ಹೆಚ್ವು ತುಳಿದಿದ್ದೇ ಕಾಂಗ್ರೆಸ್‌. ಸಮಾಜದ ಕಾಂಗ್ರೆಸ್‌ ಶಾಸಕರು ಅಧಿಕಾರದಲ್ಲಿದ್ದು ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಬಿಜೆಪಿ ಎಸ್.ಸಿ. ಘಟಕದ ಅಧ್ಯಕ್ಷ ಗಣೇಶ ಹೊರತಟ್ನಾಳ, ಎಸ್‌ಟಿ ಘಟಕದ ಅಧ್ಯಕ್ಷ ವಿಜಯ್ ತಾಳಕೇರಿ ಹಾಗೂ ಜಿಲ್ಲಾಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ ಪಾಲ್ಗೊಂಡಿದ್ದರು.

ಮೀಸಲಾತಿ ವಿಚಾರ ಸ್ಪಷ್ಟಪಡಿಸದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕಾತಿ ಪ್ರಕ್ರಿಯೆ ಮುಂದುವರಿಸಬಾರದು. ಇದರಿಂದ ನಮ್ಮ ಸಮಾಜದ ಯುವಜನತೆಗೆ ಅನ್ಯಾಯವಾಗುತ್ತದೆ.
ಹೇಮಲತಾ ನಾಯಕ ವಿಧಾನಪರಿಷತ್‌ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.