ಕೊಪ್ಪಳ: ವಿಶ್ವ ಸೊಳ್ಳೆ ದಿನಾಚರಣೆಯ ಅಂಗವಾಗಿ ನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ಸೊಳ್ಳೆಗಳಿಂದ ಹರಡಬಹುದಾದ ರೋಗ, ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆಯ ಬಗ್ಗೆ ಅರಿವು ಕಾರ್ಯಕ್ರಮ ಈಚೆಗೆ ನಡೆಯಿತು.
ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಆಧಿಕಾರಿಗಳ ಕಚೇರಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿ.ಪಿ.ಶಿವಾನಂದ ಅವರು ಮಾತನಾಡಿ, ಮಳೆಗಾಲದ ಕಾರಣ ಈಡಿಸ್ ಜಾತಿಯ ಸೊಳ್ಳೆ ಮೊಟ್ಟೆಗಳನ್ನಿಟ್ಟು ಸಂತಾನಾಭಿವೃದ್ಧಿ ಮಾಡುತ್ತದೆ. ಮನುಷ್ಯರಿಗೆ ಈ ಸೊಳ್ಳೆ ಕಚ್ಚುವುದರಿಂದ ಡೆಂಗಿ ಹರಡುವ ಸಾಧ್ಯತೆ ಇದೆ. ತಲೆನೋವು, ವಾಂತಿ, ಕಣ್ಣಿನ ಹಿಂಭಾಗದಲ್ಲಿ ನೋವು, ಮೈಮೇಲೆ ಬಿಲ್ಲೆ ಆಕಾರದ ಕಪ್ಪು ಕಲೆ, ಒಸಡುಗಳಲ್ಲಿ ರಕ್ತಸ್ರಾವ ಈ ರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.
ಶಾಲೆಯ ಪ್ರಾಚಾರ್ಯ ಮಂಜುನಾಥ ಬೇಳೂರು ಅವರು ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ತಮ್ಮ ಮನೆ, ವಾರ್ಡ್ ಹಾಗೂ ಊರುಗಳಲ್ಲಿ ಜನರಿಗೆ ಜಾಗೃತಿ ಉಂಟುಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಆರೋಗ್ಯ ಇಲಾಖೆಯ ಜೊತೆ ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.
ಆರೋಗ್ಯ ಕೇಂದ್ರದ ಸಿಬ್ಬಂದಿ ಶ್ರೀನಿವಾಸ, ವಸತಿ ನಿಲಯದ ನಿಲಯ ಪಾಲಕರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು ಇದ್ದರು.
ಶಿಕ್ಷಕ ಸಂತೋಷ ಕವಲೂರು ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.