ADVERTISEMENT

'ಗುರು'ವಿಲ್ಲದ ಮುದೇನೂರು ಮಠ ಭಣ ಭಣ

ಆರು ವರ್ಷಗಳಲ್ಲಿ ನಾಲ್ವರು ಸ್ವಾಮೀಜಿಗಳ ನಿರ್ಗಮನ, ಉತ್ತರ ಸಿಗದ ಪ್ರಶ್ನೆ, ಭಕ್ತರ ಕಳವಳ

ನಾರಾಯಣರಾವ ಕುಲಕರ್ಣಿ
Published 29 ಜನವರಿ 2025, 6:12 IST
Last Updated 29 ಜನವರಿ 2025, 6:12 IST
ಕುಷ್ಟಗಿ ತಾಲ್ಲೂಕು ಮುದೇನೂರಿನ ಉಮಾಚಂದ್ರಮೌಳೇಶ್ವರ ಮಾಂಗಲ್ಯ ಮಂದಿರದ ಹೊರನೋಟ
ಕುಷ್ಟಗಿ ತಾಲ್ಲೂಕು ಮುದೇನೂರಿನ ಉಮಾಚಂದ್ರಮೌಳೇಶ್ವರ ಮಾಂಗಲ್ಯ ಮಂದಿರದ ಹೊರನೋಟ   

ಮುದೇನೂರು (ಕುಷ್ಟಗಿ): ತಾಲ್ಲೂಕಿನ ಮುದೇನೂರು ಎಂದಾಕ್ಷಣ ನೆನಪಿಗೆ ಬರುವುದು ಸಾಮೂಹಿಕ ಮದುವೆ ಪರಿಕಲ್ಪನೆ ಸಾಕಾರಕ್ಕೆ ಬೀಜ ಮೊಳೆತದ್ದು.

ಅಷ್ಟೇ ಅಲ್ಲ ಸ್ವಾತಂತ್ರ್ಯಪೂರ್ವದಲ್ಲಿಯೇ ಮಹಿಳೆಯರು, ಕುಮಾರಿಯರ ಸಾರಥ್ಯದಲ್ಲಿಯೆ ರಥ ಎಳೆಯುವ ಸಂಪ್ರದಾಯಕ್ಕೆ ಚಾಲನೆ ನೀಡಿ ಮಹಿಳಾ ಸಮಾನತೆ, ಸ್ವಾತಂತ್ರ್ಯದ ಆಶಯಕ್ಕೆ ಬಲ ತಂದುಕೊಟ್ಟು ಅವರಿಗೂ ಪುರುಷರಷ್ಟೇ ಸಮಾನ ಹಕ್ಕು ಇದೆ ಎಂಬುದನ್ನು ಸ್ವತಃ ಆಚರಣೆಗೆ ತಂದಿದ್ದ ಉಮಾಚಂದ್ರಮೌಳೇಶ್ವರ ಮಾಂಗಲ್ಯ ಮಂದಿರ ಮಠದ ಕರ್ತೃ, ಲಿಂಗೈಕ್ಯ ಚಂದ್ರಶೇಖರ ಸ್ವಾಮೀಜಿ ಅವರ ದೂರದೃಷ್ಟಿ ಸ್ಮೃತಿ ಪಟಲದಲ್ಲಿ ಸುಳಿಯದೆ ಇರದು.

ವಿಶಿಷ್ಟ ಪರಂಪರೆಯ ಮತ್ತು ಐದು ಶಾಖಾ ಮಠಗಳನ್ನು ಹೊಂದಿರುವ ಮುದೇನೂರಿನ ಈ ಮಠ ಧಾರ್ಮಿಕ ಆಚರಣೆಗೆ ಸೀಮಿತವಾಗಿಲ್ಲ. ಬದಲಾಗಿ ಸಾಮಾಜಿಕ ಕ್ರಾಂತಿಯಿಂದಲೂ ಪ್ರಸಿದ್ಧಿ ಪಡೆದಿದೆ. ಗುರು ಪರಂಪರೆಯಲ್ಲಿ ಬೆಳೆದ ಉಮಾಚಂದ್ರಮೌಳೇಶ್ವರ ಮಠ ಈಗ 'ಗುರು'ಗಳ ವಿಚಾರದಲ್ಲಿಯೇ ಸುದ್ದಿಯಲ್ಲಿದೆ. ಕಾರಣವಿಷ್ಟೇ ಚಂದ್ರಶೇಖರ ಸ್ವಾಮೀಜಿಯವರ ಶಿಷ್ಯರಾಗಿದ್ದ ಶಶಿಧರ ಸ್ವಾಮೀಜಿ ನಂತರದಲ್ಲಿ ಈ ಮಠದಲ್ಲಿ ಗುರುಗಳು ಉಳಿದದ್ದೇ ಅಪರೂಪ. ಕೇವಲ ಆರೇಳು ವರ್ಷದಲ್ಲಿ ನಾಲ್ವರು ಗುರು, ನಿಯೋಜಿತ ಪೀಠಾಧಿಕಾರಿಗಳು ಮಠದಿಂದ ನಿರ್ಗಮಿಸಿದ್ದಾರೆ. ಆದರೆ ಹೀಗೇಕಾಗುತ್ತದೆ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ADVERTISEMENT

ಶ್ರೀ ಗಳಿಗೆ ಬ್ಲಾಕ್ ಮೇಲ್ ಆರೋಪ: ಮಠದ ಬಗ್ಗೆ ಎಲ್ಲ ಜಾತಿಗಳು ಹಾಗೂ ಸಮುದಾಯಗಳಿಗೆ ಅಪಾರ ಗೌರವವಿದೆ. ಆದರೆ ಟ್ರಸ್ಟ್ ಕೆಲವರಿಗೇ ಸೀಮಿತವಾಗಿದೆ. ಗ್ರಾಮದ ಕೆಲವರು ಸ್ವಾಮೀಜಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ಇನ್ನೂ ಕೆಲವರು ಬ್ಲಾಕ್ ಮೇಲ್ ಮಾಡಿದ್ದೂ ಇದೆ ಎಂಬ ಆರೋಪಗಳು ಕೇಳಿಬಂದವು.

ಈ ಕಾರಣಕ್ಕೆ ಮಠ ದೇವರಿಲ್ಲದ ಗುಡಿಯಂತಾಗಿದ್ದು ಅಸಂಖ್ಯ ಭಕ್ತರ ಅನಾಥ ಪ್ರಜ್ಞೆಗೆ ಕಾರಣವಾಗಿದೆ. ತಿಂಗಳು ಕಳೆದರೆ (ಶಿವರಾತ್ರಿ ವೇಳೆ) ನಡೆಯಲಿರುವ ಧಾರ್ಮಿಕ, ಸಾಮಾಜಿಕ ಜಾಗೃತಿಯ ಜಾತ್ರೆಯ ಮೇಲೆ ಕಾರ್ಮೋಡ ಆವರಿಸಿದೆ. ಮಠದ ಒಳ ಹೊರ ಆವರಣದಲ್ಲಿ ಒಂದು ರೀತಿಯಲ್ಲಿ ನೀರವ ಮೌನ ಆವರಿಸಿದ್ದು ಎಲ್ಲರ ಮಾತಿನಲ್ಲೂ ವಿಷಾದ ಇರುವುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು.

ಮಠ ಇಷ್ಟವಿಲ್ಲದಿದ್ದರೆ ಸುಮ್ಮನೆ ಹೋಗಬೇಕಿತ್ತು ಸ್ವಾಮೀಜಿ ಟ್ರಸ್ಟ್ ಬಗ್ಗೆ ಮಾಧ್ಯಮಗಳಲ್ಲಿ ದೂರಿದ್ದು ಸರಿಯಲ್ಲ.
ಆರ್.ಎಸ್.ಹಿರೇಮಠ ಟ್ರಸ್ಟ್ ಸದಸ್ಯ
ಯಾವ ರೀತಿ ಅಸಹಕಾರ ಎಂಬುದನ್ನು ಸ್ವಾಮೀಜಿ ಬಿಡಿಸಿ ಹೇಳಬೇಕಾಗಿತ್ತು. ಎಲ್ಲ ಅನುಕೂಲ ಕಲ್ಪಿಸಿದರೂ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ.
ಶರಣಗೌಡ ಹಳೇಗೌಡರ ಟ್ರಸ್ಟ್ ಅಧ್ಯಕ್ಷ

Cut-off box - 'ಗುರು'ಗಳಿಗೆ ಮಠ ವೈರಾಗ್ಯ ಈ ಮಠದಲ್ಲಿ ಗುರುಗಳು ಕಾರ್ಯನಿರ್ವಹಿಸದೆ ನಿರ್ಗಮಿಸುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. ಶಶಿಧರ ಸ್ವಾಮೀಜಿಯವರ ಕಾಲದಲ್ಲಿ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಉಚ್ಛ್ರಾಯ ಸ್ಥಿತಿಗೆ ತಲುಪಿರುವ ಮಠದ ವಿಶಿಷ್ಟ ಪರಂಪರೆ ಧಾರ್ಮಿಕ ಸಾಂಪ್ರದಾಯಿಕ ಹಿರಿಮೆಗೆ ಪೆಟ್ಟು ಬೀಳುತ್ತಿದೆ. ಶಶಿಧರ ಶ್ರೀಗಳ ನಂತರ ಪಟ್ಟಕ್ಕೆ ಬಂದ ಗುಮ್ಮಗೋಳದ ದಿವಾಕರ ದೇವರು ಎಂಬುವವರು ಎರಡ್ಮೂರು ವರ್ಷಗಳಲ್ಲಿ ಮಠದಿಂದ ಹೊರನಡೆದರು. ನಂತರ ವಿಜಯಪುರ ಜಿಲ್ಲೆಯ ಮಸೂತಿಯ ಸಿದ್ಧಲಿಂಗ ದೇವರು ಎಂಬುವವರು ನಿಯೋಜಿತರಾದರೂ ಪಟ್ಟಾಧಿಕಾರ ನಡೆಯುವ ಮೊದಲೇ ಮರಳಿ ಹೋದರು. ನಂತರ ಹಂಪಸಾಗರದಿಂದ ಬಂದ ಶಿವರುದ್ರಮುನಿಸ್ವಾಮಿ ಮುದೇನೂರು ಮಠವನ್ನು ರಂಭಾಪುರಿ ಪೀಠದ ಶಾಖಾಮಠವೆಂದು ಗುರುತಿಸಲಿಲ್ಲ ಎಂಬ ಕಾರಣಕ್ಕೆ ಗುರುಪೀಠಕ್ಕೆ ಬರಲು ಒಪ್ಪಲಿಲ್ಲ. ವರ್ಷದ ಹಿಂದೆ ಕಲಬುರಗಿ ಜಿಲ್ಲೆಯ ಜೋಗೂರಿನ ಮರುಳಸಿದ್ಧ ದೇವರು ಎಂಬುವವರೂ ಎರಡು ವರ್ಷಗಳ ಒಳಗೇ ಪಟ್ಟಾಧಿಕಾರಕ್ಕೆ ಬರದೆ ನಿರ್ಗಮಿಸಿದ್ದಾರೆ. ಮದ್ದಾನೇಶ್ವರ ಮಠದ ಕರಿಬಸವ ಸ್ವಾಮೀಜಿ ಸೇರಿದಂತೆ ಊರಿನವರ ಮನ ಒಲಿಕೆಗೂ ಮಣಿಯದ ನಿಯೋಜಿತ ಮರುಳಸಿದ್ಧ ದೇವರು ನಿರ್ಧಾರ ಬದಲಿಸದೆ ಜಾತ್ರೆಯ ಸಂದರ್ಭದಲ್ಲಿಯೇ ಮಠ ತೊರೆದು ಹೋಗಿರುವುದು ಭಕ್ತರನ್ನು ವಿಚಲಿತಗೊಳಿಸಿದೆ.

Cut-off box - ಸ್ವಾಮೀಜಿಗಳಿಗೂ ಐಷಾರಾಮಿ ಬದುಕಿನ ಸೆಳೆತ ನಾಲ್ವರಲ್ಲಿ ಒಬ್ಬರ ಪಟ್ಟಾಧಿಕಾರ ಮಾತ್ರ ನಡೆದಿತ್ತು. ಮಠ 15 ಪ್ರಮುಖರನ್ನು ಒಳಗೊಂಡ ಟ್ರಸ್ಟ್‌ ಹೊಂದಿದ್ದು ಸದಸ್ಯರ ಮಧ್ಯೆ ಸಮನ್ವಯ ಕೊರತೆ ಟ್ರಸ್ಟ್‌ ಹಾಗೂ ಸ್ವಾಮೀಜಿಗಳ ಮಧ್ಯೆ ಹೊಂದಾಣಿಕೆ ಸಾಧ್ಯವಾಗದಿರುವುದು ಪ್ರಮುಖ ಕಾರಣ ಎನ್ನಲಾಗಿದೆ. ಕೆಲ ಸ್ವಾಮೀಜಿಗಳ ನಿರ್ಗಮನಕ್ಕೆ ಗ್ರಾಮಸ್ಥರು ಟ್ರಸ್ಟ್‌ನ ಕೆಲವರು ಬೇರೆ ಬೇರೆ ಕಾರಣಗಳ ಪಟ್ಟಿ ಮಾಡುತ್ತಾರೆ. ಸ್ವಾಮೀಜಿಗಳು ಆಗಿರುವವರಲ್ಲಿ ಎಲ್ಲ ರೀತಿಯ 'ಕಟ್ಟುನಿಟ್ಟು' ಇರಬೇಕು. ಕೆಲವರಲ್ಲಿ ಅದೇ ಸಮಸ್ಯೆ. ಒಬ್ಬರಿಗೆ ದುಂದುವೆಚ್ಚ ಐಷಾರಾಮಿ ಬದುಕು ಇಷ್ಟ ಸಾವಿರಾರು ರೂಪಾಯಿ ಮೌಲ್ಯದ ಸುಗಂಧದ್ರವ್ಯದ ಖಯಾಲಿ. ಒಬ್ಬರಂತೂ ಮಠದ ಧನ ಕನಕವನ್ನೂ ಬಿಡಲಿಲ್ಲ. ಮಠದಲ್ಲಿದ್ದು ಧಾರ್ಮಿಕ ಆಚರಣೆ ಕೈಗೊಂಡಿದ್ದೇ ಅಪರೂಪ. ಅವರು ಎಲ್ಲಿ ಹೋಗುತ್ತಾರೊ ಬರುತ್ತಾರೆಂಬುದೇ ನಿಗೂಢವಾಗಿರುತ್ತಿತ್ತು ಎಂದು ಹೆಸರು ಹೇಳಲು ಬಯಸದ ಟ್ರಸ್ಟ್‌ನ ಕೆಲ ಪ್ರಮುಖರು 'ಪ್ರಜಾವಾಣಿ'ಗೆ ಬಳಿ ಬೇಸರ ವ್ಯಕ್ತಪಡಿಸಿದರು. ‘ಸ್ವಾಮೀಜಿಗಳು ಸರಿದಾರಿಯಲ್ಲಿ ಹೋಗುವಂತಿದ್ದರೂ ಟ್ರಸ್ಟ್‌ನ ಕೆಲವರು ಅಡ್ಡಿಯಾದರು. ತಮ್ಮ ಮಾತೇ ಅಂತಿಮ ಎನ್ನುವ ಮನೋಭಾವದಿಂದ ವರ್ತಿಸುತ್ತಿರುವುದೇ ಮಠಕ್ಕೆ ಈ ಗತಿ ಬಂದಿದೆ’ ಎಂದು ಸಾರ್ವಜನಿಕರು ಟ್ರಸ್ಟ್ ಪ್ರಮುಖರ ಬಗ್ಗೆ ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.