
ಕೊಪ್ಪಳ: ‘ಪ್ರಸ್ತುತ ದಿನಮಾನಗಳಲ್ಲಿ ಪ್ರಯೋಗಾಲಯಗಳ ಸಂಶೋಧನೆ ಕೃಷಿಭೂಮಿಗೆ ಬರಬೇಕು, ಸಾರ್ವಜನಿಕರು ಇದರ ನೇರ ಉಪಯೋಗ ಪಡೆದುಕೊಳ್ಳಬೇಕು. ಬಹುಶಿಸ್ತೀಯ ಸಂಶೋಧನೆ ಇಂದಿನ ಅಗತ್ಯವಾಗಿದೆ’ ಎಂದು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ಸಿದ್ದು ಅಲಗೂರ ಹೇಳಿದರು.
ಎಸ್‌ಜಿವಿವಿಟಿ ಸಂಸ್ಥೆಯ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯವು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಸಸ್ಯ ಹಾಗೂ ಪ್ರಾಣಿ ವಿಜ್ಞಾನ ಕ್ಷೇತ್ರದ ಇತ್ತೀಚಿನ ಸಂಶೋಧನಾ ಪ್ರಗತಿ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ‘ಸಂಶೋಧನೆಗಳು ಸುಸ್ಥಿರ ಅಭಿವೃದ್ಧಿ ಮತ್ತು ಬಹುಶಿಸ್ತೀಯ ಹಂತದಲ್ಲಿ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವು ಅವರು ವಿಚಾರ ಸಂಕಿರಣದ ಸಂಚಿಕೆ ಬಿಡುಗಡೆ ಮಾಡಿ ‘ಯುವಕರು ಹೆಚ್ಚು ಪ್ರಯೋಗಾತ್ಮಕ ಸಂಶೋಧನೆಯಲ್ಲಿ ತೊಡಗಬೇಕು’ ಎಂದು ಸಲಹೆ ನೀಡಿದರು.
ಸಮ್ಮೇಳನದಲ್ಲಿ ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ, ಕೇರಳ, ತೆಲಂಗಾಣ ಸೇರಿದಂತೆ ಒಂಬತ್ತು ರಾಜ್ಯಗಳಿಂದ ತಜ್ಞರು ಪಾಲ್ಗೊಂಡಿದ್ದು 120ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಮಂಡಿಸಿದರು.
ಪುಣೆಯ ಸಿಎಸ್‌ಐಆರ್‌ನ ಹಿರಿಯ ವಿಜ್ಞಾನಿ ದಸ್ತಗೀರ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ ಸಿ.ಬಿ. ಗಣೇಶ್, ಟ್ರಸ್ಟ್‌ನ ಕಾರ್ಯದರ್ಶಿ ಆರ್. ಮರೇಗೌಡ, ಎಸ್.ವಿ. ಹಿರೇಮಠ, ಸಮ್ಮೇಳನದ ಸಂಚಾಲಕ ಪ್ರಶಾಂತ್ ಕೊಂಕಲ, ಸುಂದರ ಮೇಟಿ, ಅರುಣಕುಮಾರ್, ಮಂಜುನಾಥ ಎಂ. ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.