ADVERTISEMENT

ಪಟ್ಟಣ ಪಂಚಾಯಿತಿ ಚುನಾವಣೆ: ಅಭ್ಯರ್ಥಿಗಳ ಕೈ ಚಳಕ, ಮತದಾರರ ಫಜೀತಿ

ಸುಲಭ ಗೆಲುವಿಗೆ ಮತದಾರರ ವಾರ್ಡ್‌ ಬದಲು

ಮೆಹಬೂಬ ಹುಸೇನ
Published 18 ಡಿಸೆಂಬರ್ 2021, 5:34 IST
Last Updated 18 ಡಿಸೆಂಬರ್ 2021, 5:34 IST

ಕನಕಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಯ ಅಧಿಸೂಚನೆ ಹೊರಡಿಸಿದ ನಂತರ ಟಿಕೆಟ್ ಆಕಾಂಕ್ಷಿಗಳು ಮತದಾರರ ಒಪ್ಪಿಗೆ ಇಲ್ಲದೆ ಬೂತ್ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತಮಗೆ ಬೇಕಾದ ವಾರ್ಡ್‌ಗಳಿಗೆ ಮತದಾರರನ್ನು ಸೇರ್ಪಡೆ ಮಾಡಿಕೊಂಡ ಘಟನೆ ನಡೆದಿವೆ.

ಮತದಾರರ ಸೇರ್ಪಡೆ ಮಾಡಿಕೊಳ್ಳುವಲ್ಲಿ ವಿವಿಧ ಪಕ್ಷದ ಟಿಕೆಟ್ ಆಕಾಂಕ್ಷಿಗಳು ತಮ್ಮ ಕೈ ಚಳಕ ತೋರಿಸಿದ್ದು ಮತದಾರರು ಫಜೀತಿ ಅನುಭವಿಸುವಂತಾಗಿದೆ.

2,3,4, 10, 14, 15 ಹಾಗೂ 16ನೆ ವಾರ್ಡ್‌ನ ಕಾಂಗ್ರೆಸ್, ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಬೇರೆ ವಾರ್ಡ್‌ನಲ್ಲಿ ಇರುವ ತಮ್ಮ ಸಂಬಂಧಿಕರು ಮತ್ತು ತಮ್ಮ ಮಾತು ಕೇಳಿ ವಿಧೇಯರಾಗಿರುವವರ ಹೆಸರುಗಳನ್ನು ತಮ್ಮ ವಾರ್ಡ್‌ಗೆ ಸೇರಿಸಿ ಗೆಲುವು ಸರಳವಾಗುವಂತೆ ನೋಡಿಕೊಂಡಿರುವುದು ಕಂಡು ಬರುತ್ತಿದೆ.

ADVERTISEMENT

ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ತಾವು ವಾಸಿಸುವ ವಾರ್ಡ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸುತ್ತಿದ್ದವರು ಈಗ ಅನಿವಾರ್ಯವಾಗಿ ಬೇರೆ ವಾರ್ಡ್‌ಗೆ ಬಂದು ಮತ ಚಲಾಯಿಸಬೇಕಾಗಿದೆ.

14ನೇ ವಾರ್ಡ್‌ನಲ್ಲಿದ್ದ 38 ಜನ ಮತದಾರರನ್ನು 16ನೇ ವಾರ್ಡ್‌ನ ಅಭ್ಯರ್ಥಿಯೊಬ್ಬರ ಬೆಂಬಲಿಗರು ತಮ್ಮ ಒಪ್ಪಿಗೆ ಇಲ್ಲದೆ 16ನೇ ವಾರ್ಡ್‌ನಲ್ಲಿ ಸೇರ್ಪಡೆ ಮಾಡಿಸಿದ್ದಾರೆ ಎಂದು ಅಲ್ಲಿನ ಮತದಾರರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರಸ್ವಾಮಿ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಕಂದಾಯ ಇಲಾಖೆಯ ಅಧಿಕಾರಿಗಳ ಜತೆಗೆ ವಾಗ್ವಾದ ನಡೆಸಿದ್ದಾರೆ.

’ಬೂತ್ ಮಟ್ಟದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಚರ್ಚಿಸಿದ್ದಾರೆ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೊಂಡ ನಂತರ 2016ರಲ್ಲಿ ನಡೆದಿದ್ದ ಪಟ್ಟಣ ಪಂಚಾಯಿತಿಯ ಪ್ರಥಮ ಚುನಾವಣೆಯಲ್ಲಿಯೂ ಮತದಾರರ ಸೇರ್ಪಡೆ ವಿಷಯ ಬಹಳ ಚರ್ಚೆಗೆ ಗ್ರಾಸ ಒದಗಿಸಿತ್ತು. ಬೂತ್ ಮಟ್ಟದ ಅಧಿಕಾರಿಗಳು ಗಮನ ನೀಡಿರಲಿಲ್ಲ. ಈಗ ಮತ್ತೆ ಮತದಾರರ ಒಪ್ಪಿಗೆ ಇಲ್ಲದೆ ವರ್ಗಾವಣೆಗೆ ಸಹಕಾರ ನೀಡಿದ್ದಾರೆ‘ ಎಂದು ಯುವ ಮುಂದಾಳು ಟಿ. ಜೆ.ರಾಮಚಂದ್ರ ದೂರಿದರು.

ಚುನಾವಣೆಯ ಅಧಿಸೂಚನೆ ಬರುವ ಮುಂಚೆಯೇ ಕೆಲ ಆಕಾಂಕ್ಷಿಗಳು ತಾವೇ ಮತದಾರರ ಹೆಸರನ್ನು ವರ್ಗಾವಣೆ ಮಾಡಿಸಿಕೊಂಡಿದ್ದರೂ ಸ್ಪರ್ಧೆಗೆ ಮೀಸಲಾತಿ ಅಡ್ಡಿಪಡಿಸಿದ್ದರಿಂದ ಮೌನಕ್ಕೆ ಜಾರಿದ್ದಾರೆ.

‘ಮತದಾರರ ಪರಿಷ್ಕರಣೆ, ಹೊಸ ಮತದಾರರ ಸೇರ್ಪಡೆ ಮತ್ತು ಮತದಾರರ ಪಟ್ಟಿ ಪ್ರಚಾರ ಪಡಿಸಿದಾಗ ಯಾರೂ ಸಹ ಆಕ್ಷೇಪಣೆ ಸಲ್ಲಿಸಿಲ್ಲ. ಚುನಾವಣೆ ನಡೆಯುವ ಸಮಯದಲ್ಲಿ ಆಕ್ಷೇಪಣೆ ಬಂದಿವೆ. ಮುಂದಿನ ದಿನದಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಲಾಗುವುದು’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ
ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.