ADVERTISEMENT

ಮುನಿರಾಬಾದ್: ಕಾಲುವೆ ಒತ್ತುವರಿ ತೆರವಿಗೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 7:19 IST
Last Updated 31 ಅಕ್ಟೋಬರ್ 2025, 7:19 IST
ಮುನಿರಾಬಾದ್‌ನ ತುಂಗಭದ್ರಾ ವಿತರಣಾ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ರೈತರು ಖಂಡಿಸಿದರು
ಮುನಿರಾಬಾದ್‌ನ ತುಂಗಭದ್ರಾ ವಿತರಣಾ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ರೈತರು ಖಂಡಿಸಿದರು   

ಮುನಿರಾಬಾದ್: ‘ತುಂಗಭದ್ರಾ ಯೋಜನೆಯ 1ನೇ ಉಪಕಾಲುವೆ ಜೀರೋ ಮೈಲಿನಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಕಾಲುವೆಯ ಎರಡೂ ಬದಿ ಒತ್ತುವರಿಯಾಗಿದ್ದು, ಕೆಲ ಪ್ರಭಾವಿಗಳು ಅಲ್ಲಿ ಅಕ್ರಮವಾಗಿ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಿಸುತ್ತಿದ್ದಾರೆ. ನಿಗಮದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ’ ಎಂದು ಗುರುವಾರ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಚತುಷ್ಪಥ ಹೆದ್ದಾರಿ ಬದಿಗೆ ವಿತರಣಾ ಕಾಲುವೆಗೆ ಅಕ್ರಮವಾಗಿ ಪೈಪುಗಳನ್ನು ಅಳವಡಿಸಿ, ಕಾಲುವೆಯ ಎರಡೂ ಬದಿಯನ್ನು ನೆಲಸಮ ಮಾಡಿ ಅದರ ಮೇಲೆ ವಾಣಿಜ್ಯ ಕಟ್ಟಡ ಕಟ್ಟಿಕೊಳ್ಳುತ್ತಿದ್ದಾರೆ. ಇದು ಕಾನೂನುಬಾಹಿರ, ತಕ್ಷಣ ಪೈಪುಗಳನ್ನು ತೆರವುಗೊಳಿಸಿ ಕಾಲುವೆಯ ಎರಡೂ ಬದಿಗೆ ರಸ್ತೆಯನ್ನು ನಿರ್ಮಿಸಿ ಕೊಡಬೇಕು ಎಂದು ರೈತರು ಆಗ್ರಹಿಸಿದರು.

ಕಾಲುವೆಗೆ ಅಕ್ರಮವಾಗಿ ಪೈಪ್ ಅಳವಡಿಕೆಯಿಂದ ಭವಿಷ್ಯದಲ್ಲಿ ಕಾಲುವೆಯ ನಿರ್ವಹಣೆ ಮತ್ತು ದುರಸ್ತಿಗೆ ತೊಂದರೆಯಾಗುತ್ತದೆ. ಇದರಿಂದ ಕಾಲುವೆಯಲ್ಲಿ ನೀರು ಹರಿಯದೆ ರೈತರು ಪರಿತಪಿಸಬೇಕಾಗುತ್ತದೆ. ಈಗಾಗಲೇ ಹಲವು ಬಾರಿ ನೀರಾವರಿ ನಿಗಮದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ADVERTISEMENT

ರೈತರ ಪ್ರತಿಭಟನೆಯಿಂದ ಸ್ಥಳಕ್ಕೆ ಬಂದ ನಿಗಮದ ಸೆಕ್ಷನ್ ಆಫೀಸರ್ ಪ್ರಾಣೇಶ ಅವರನ್ನು ತರಾಟೆಗೆ ತೆಗೆದುಕೊಂಡ ರೈತರು, ಅಕ್ರಮವಾಗಿ ಹಾಕಿದ ಪೈಪುಗಳನ್ನು ತೆರವುಗೊಳಿಸಿ ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ತುರ್ತು ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿದ ರೈತರು ಸಮಸ್ಯೆ ಬಗ್ಗೆ ವಿವರಿಸಿದರು. ಸ್ಥಳಕ್ಕೆ ಬಂದ 112 ಪೊಲೀಸ್ ಸಿಬ್ಬಂದಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುವಂತೆ ಸಲಹೆ ನೀಡಿದರು.

ನೀರು ಬಳಕೆದಾರರ ಸಂಘದ ಅಧ್ಯಕ್ಷ ಯಂಕಪ್ಪ ಹೊಸಳ್ಳಿ, ಸಂಘದ ನಿರ್ದೇಶಕ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭುರಾಜ ಪಾಟೀಲ್, ಹುಲಿಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ, ಮುಖಂಡರಾದ ಖಾಜಾ ಹುಸೇನ್ ದೊಡ್ಮನಿ ಹೊಸಹಳ್ಳಿ, ಭುಜಬಲಿ ಸೇರಿದಂತೆ ಹುಲಿಗಿ, ಹೊಸಹಳ್ಳಿ, ಹೊಸ ಲಿಂಗಾಪುರ, ಮುದ್ಲಾಪುರ ಗ್ರಾಮದ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಈ ಬಗ್ಗೆ 'ಪ್ರಜಾವಾಣಿ' ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಮರೇಶಪ್ಪ ಅವರಿಗೆ ದೂರವಾಣಿ ಕರೆ ಮಾಡಿದರೆ ಅವರು ಸ್ಪಂದಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.