
ಕೊಪ್ಪಳದ ಗವಿಮಠದ ಮಹಾದಾಸೋಹದ ಮನೆಯಲ್ಲಿ ಶನಿವಾರ ಮೈಸೂರು ಪಾಕ್ ತಯಾರಿಸಿದ ಬಾಣಸಿಗರು
ಪ್ರಜಾವಾಣಿ ಚಿತ್ರ/ ಭರತ್ ಕಂದಕೂರ
ಕೊಪ್ಪಳ: ಗವಿಮಠದ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಸಿಂಧನೂರಿನ ಗವಿಸಿದ್ಧೇಶ್ವರ ಆಗ್ರೋ ಫುಡ್ಸ್ ವಿಜಯಕುಮಾರ್ ಗೆಳೆಯರ ಬಳಗ ತುಪ್ಪದ ಮೈಸೂರು ಪಾಕ್‌ನ ಸವಿ ಉಣಬಡಿಸಲು ಸಿದ್ಧತೆ ಮಾಡಿಕೊಂಡಿದೆ.
ಗವಿಮಠದ ಮಹಾದಾಸೋಹದ ಆವರಣದಲ್ಲಿ 100 ಜನ ಮುಖ್ಯ ಬಾಣಸಿಗರು ಹಾಗೂ 100 ಜನ ಸಹಾಯಕರು ಮೈಸೂರು ಪಾಕ್ ತಯಾರಿಸುವ ಕಾರ್ಯವನ್ನು ಶನಿವಾರ ಆರಂಭಿಸಿದ್ದಾರೆ. ಮೊದಲ ದಿನ 30 ಕ್ವಿಂಟಲ್‌ನಲ್ಲಿ ನಾಲ್ಕು ಲಕ್ಷ ಮೈಸೂರು ಪಾಕ್ ತಯಾರಿ ಮಾಡಿದರು. ಭಾನುವಾರವೂ ಈ ಕೆಲಸ ಮುಂದುವರಿಯಲಿದ್ದು, ಇನ್ನೂ ಐದಾರು ಲಕ್ಷ ತಯಾರಿಸುವ ಗುರಿ ಹೊಂದಿದ್ದಾರೆ.
ಮೈಸೂರು ಪಾಕ್ ತಯಾರಿಸಲು ಪರಿಣತಿ ಹೊಂದಿರುವ ಬಾಣಸಿಗರು ರಾಯಚೂರು ಜಿಲ್ಲೆ ಹಾಗೂ ಆಂಧ್ರದ ಆದೋನಿಯಿಂದ ಬಂದಿದ್ದಾರೆ. ಮುಖ್ಯ ಬಾಣಸಿಗರಲ್ಲಿ ಬಹುತೇಕರು ಎರಡು ದಶಕಗಳಿಂದ ಇದೇ ಕೆಲಸದಲ್ಲಿ ತೊಡಗಿದ್ದಾರೆ. ಸಿಂಧನೂರಿನ ಗೆಳೆಯರು ಬಳಗದ ಸದಸ್ಯರು ಅನೇಕ ವರ್ಷಗಳಿಂದ ಸಿಹಿ ತಿನಿಸು ಮಾಡಿಸಿ ಸೇವೆಯ ರೂಪದಲ್ಲಿ ಮಠಕ್ಕೆ ಅರ್ಪಿಸುತ್ತಾರೆ. ಮಹಾರಥೋತ್ಸವ ಹಾಗೂ ಅದರ ಮರುದಿನ ಮಠಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಸಿಹಿ ಸವಿಯುವ ಅವಕಾಶ ಲಭಿಸುತ್ತದೆ.
ಮೈಸೂರು ಪಾಕ್ ತಯಾರಿಕೆಗೆ ಒಟ್ಟು 60 ಕ್ವಿಂಟಲ್ ಸಕ್ಕರೆ, ಐದು ಸಾವಿರ ಲೀಟರ್ ಅಡುಗೆ ಎಣ್ಣೆ, 30 ಕ್ವಿಂಟಲ್ ಕಡಲೆ ಹಿಟ್ಟು, ಐದು ಕ್ವಿಂಟಲ್ ಮೈದಾ, ಮೂರು ಕ್ವಿಂಟಲ್ ತುಪ್ಪ ಹಾಗೂ 50 ಕೆ.ಜಿ. ಯಾಲಕ್ಕಿ ಬಳಕೆ ಮಾಡಲಾಗಿದೆ. ಇದಕ್ಕಾಗಿ ₹ 18ರಿಂದ ₹ 20 ಲಕ್ಷ ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
‘ಮೊದಲು ನಾಲ್ಕೂವರೆಯಿಂದ ಐದು ಲಕ್ಷ ಮಾತ್ರ ಮೈಸೂರು ಪಾಕ್ ತಯಾರಿಸಲು ಯೋಜಿಸಲಾಗಿತ್ತು. ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಲಿರುವ ಕಾರಣ ದುಪ್ಪಟ್ಟು ಮೈಸೂರು ಪಾಕ್ ಮಾಡಲು ನಿರ್ಧರಿಸಲಾಗಿದೆ. ಅನೇಕರು ಗವಿಮಠದ ಸಲುವಾಗಿ ಕೆಲಸ ಮಾಡಲು ಸ್ವಯಂಪ್ರೇರಣೆಯಿಂದ ಬಂದಿದ್ದಾರೆ. ಕೆಲವರಿಗೆ ಮಾತ್ರ ಹಣ ಪಾವತಿಸಲಾಗುತ್ತದೆ’ ಎಂದು ಗೆಳೆಯರ ಬಳಗದ ಸದಸ್ಯರು ತಿಳಿಸಿದರು.
ಗವಿಮಠದ ಜಾತ್ರೆಗೆ ಕಳೆದ ವರ್ಷ ಸಾವಯವ ಬೆಲ್ಲದ ಜಿಲೇಬಿ ಈ ವರ್ಷ ಮೈಸೂರು ಪಾಕ್ ತಯಾರಿಸಲಾಗುತ್ತಿದೆ. ಸ್ವಯಂ ಸೇವೆ ಮಾಡುವವರು ನಮಗೆ ದೊಡ್ಡ ಶಕ್ತಿಹನುಮರೆಡ್ಡಿ ಹೊಸಮನಿ ಗೆಳೆಯರ ಬಳಗದ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.