ADVERTISEMENT

ಕೊಪ್ಪಳ: ನಾಮಫಲಕ ವಿಚಾರ; ಚಕಮಕಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 7:08 IST
Last Updated 14 ನವೆಂಬರ್ 2021, 7:08 IST
ಕಾರಟಗಿ ತಾಲ್ಲೂಕಿನ ನಂದಿಹಳ್ಳಿಯಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ನಾಮಫಲಕ ಅಳವಡಿಸಿರುವುದು
ಕಾರಟಗಿ ತಾಲ್ಲೂಕಿನ ನಂದಿಹಳ್ಳಿಯಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ನಾಮಫಲಕ ಅಳವಡಿಸಿರುವುದು   

ನಂದಿಹಳ್ಳಿ (ಕಾರಟಗಿ): ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ವಾಲ್ಮೀಕಿ ಮತ್ತು ಮಾದಿಗ ಸಮುದಾಯದವರ ನಡುವೆ ಶನಿವಾರ ಮಾತಿನ ಚಕಮಕಿ ನಡೆದಿದ್ದು, ವೈಮನಸ್ಸಿಗೆ ಕಾರಣವಾಗಿದೆ.

‘ವಾಲ್ಮೀಕಿ ಸಮುದಾಯದವರು ಮಹರ್ಷಿ ವಾಲ್ಮೀಕಿ ನಾಮಫಲಕ ಅಳವಡಿಸಲು 7 ತಿಂಗಳ ಹಿಂದೆ ಸರ್ಕಾರಿ ಜಾಗದಲ್ಲಿ ಕಟ್ಟೆ ನಿರ್ಮಿಸಲು ಮುಂದಾಗಿದ್ದರು. ಪಕ್ಕದಲ್ಲಿ ಮಾದಿಗ ಸಮುದಾಯದವರೊಬ್ಬರ ಜಮೀನಿದೆ ಎಂಬ ಕಾರಣಕ್ಕೆ ಕಟ್ಟೆ ನಿರ್ಮಿಸಲು ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಇದು ವೈಮನಸ್ಸಿಗೂ ಕಾರಣವಾಗಿತ್ತು’ ಎಂದು ಮೂಲಗಳು ತಿಳಿಸಿವೆ.

‘ನವೆಂಬರ್ 13ರಂದು ವಾಲ್ಮೀಕಿ ಸಮುದಾಯದವರು ಮಹರ್ಷಿ ವಾಲ್ಮೀಕಿ ನಾಮಫಲಕ ಅಳವಡಿಸಿದ್ದಾರೆ. ಇದಕ್ಕೆ ಪೈಪೋಟಿ ಎಂಬಂತೆ ಮಾದಿಗ ಸಮುದಾಯದವರು ಗ್ರಾಮದಲ್ಲಿದ್ದ ಅಂಬೇಡ್ಕರ್ ನಾಮಫಲಕವನ್ನು ಕಿತ್ತು ತಂದು ವಾಲ್ಮೀಕಿ ನಾಮಫಲಕ ಪಕ್ಕದಲ್ಲೇ ಅಳವಡಿಸಿದ್ದಾರೆ. ಇದರಿಂದ ಎರಡು ಸಮುದಾಯಗಳ ನಡೆವೆ ಮಾತಿನ ಚಕಮಕಿ ನಡೆಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸ್ಥಳಕ್ಕೆ ಇನ್‌ಸ್ಪೆಕ್ಟರ್ ವೀರಭದ್ರಯ್ಯ ಹಿರೇಮಠ ಭೇಟಿ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್ ಪಡೆಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.