ಅಳವಂಡಿ: ‘ನ್ಯಾನೊ ಯೂರಿಯಾ ಒಂದು ದ್ರವ ರೂಪದ ರಸಗೊಬ್ಬರವಾಗಿದೆ. ಇದು ಸಂಪ್ರದಾಯಿಕ ಯೂರಿಯಾ ಗೊಬ್ಬರಕ್ಕಿಂತ 8 ರಿಂದ 10 ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತ ಪೋಷಕಾಂಶಗಳನ್ನು ನೀಡುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಜೀವನಸಾಬ ಕುಷ್ಟಗಿ ಹೇಳಿದರು.
ಗ್ರಾಮದಲ್ಲಿ ಜಿ.ಪಂ, ಕೃಷಿ ಇಲಾಖೆ, ಆತ್ಮ ಯೋಜನೆ, ರೈತ ಸಂಪರ್ಕ ಕೇಂದ್ರ ಅಳವಂಡಿ, ಇಪ್ಕೋ ಕಂಪನಿ ವತಿಯಿಂದ ನಡೆದ ನ್ಯಾನೊ ರಸಗೊಬ್ಬರಗಳ ಕುರಿತು ಮಾಹಿತಿ ಸಭೆಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.
‘ಅತಿಯಾದ ಯೂರಿಯಾ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಳಾಗುತ್ತದೆ. ಭೂಮಿಯ ಪೋಷಕಾಂಶಗಳಲ್ಲಿ ಅಸಮತೋಲನ ಉಂಟಾಗಿ ಸಸ್ಯಗಳ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗೂ ಭೂಮಿಯ ಅಂತರ್ಜಲ ಮಟ್ಟಕ್ಕೂ ಹೋಗಿ ನೀರು ಕುಲುಷಿತಗೊಳ್ಳುತ್ತದೆ. ಕಾರಣ ಬೆಳೆಗಳಿಗೆ ನೇರವಾಗಿ ಸಿಗುವ ನ್ಯಾನೊ ಯೂರಿಯಾ ಬಳಸಿ’ ಎಂದರು
ನಂತರ ನ್ಯಾನೊ ಯೂರಿಯಾ, ಡಿಎಪಿ ರಸಗೊಬ್ಬರಗಳನ್ನು ಡ್ರೋನ್ ಮುಖಾಂತರ ಸಿಂಪರಣೆಯ ಮಾಡುವ ಮೂಲಕ ಪ್ರಾತ್ಯಕ್ಷಿಕೆ ಕೈಗೊಳ್ಳಲಾಯಿತು.
ಇಪ್ಕೋ ಕ್ಷೇತ್ರಾಧಿಕಾರಿ ರಾಘವೇಂದ್ರ, ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ, ಎಎಒ ಮಾರುತಿ, ಪ್ರಮುಖರಾದ ಸಿದ್ದಣ್ಣ ಮೇಟಿ, ಹನುಮರಡ್ಡಿ, ಸಂಜೀವರಡ್ಡಿ, ಶ್ರೀನಿವಾಸ, ಗುರುಬಸವರಾಜ, ದೇವಪ್ಪ, ನೀಲಪ್ಪ, ಗೂಳರಡ್ಡಿ, ಮೌನೇಶ, ವೀರೇಶ, ಬಸಣ್ಣ, ಪರಪ್ಪ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.