ನರಗುಂದದ ದಲ್ಲಿ ಖಾಸಗಿ ಜಾಗೆಯಲ್ಲಿರುವ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲು
ನರಗುಂದ: 1980ರಲ್ಲಿ ಸರ್ಕಾರದ ವಿರುದ್ಧ ನಡೆದ ರೈತ ಬಂಡಾಯಕ್ಕೆ ಇಂದಿಗೆ 44 ವರ್ಷ. ಈ ನಿಮಿತ್ತ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲು ಬಳಿ ಇಂದು (ಭಾನುವಾರ) ಹುತಾತ್ಮ ರೈತ ದಿನಾಚರಣೆ ನಡೆಯಲಿದೆ.
ಪ್ರತಿವರ್ಷದ ಉತ್ಸಾಹ, ರೈತ ಸಂಘಟನೆಗಳ ಅಬ್ಬರ, ರಾಜಕೀಯ ಪಕ್ಷಗಳ ಸಮಾವೇಶ ಈ ಸಲ ಕಾಣುತ್ತಿಲ್ಲ. ಆದರೆ ಆಚರಣೆಯ ನೆಪಮಾತ್ರಕ್ಕೆ ಎಂಬಂತೆ ಕೆಲ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ.
ದಿನಾಚರಣೆ ಹಿನ್ನೆಲೆ: ಅವಿಭಜಿತ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರ ನೀರಾವರಿ ಸೌಲಭ್ಯಕ್ಕಾಗಿ ಸರ್ಕಾರವು ಮಲಪ್ರಭಾ ನದಿಗೆ ಸವದತ್ತಿ ಬಳಿಯ ನವಿಲುತೀರ್ಥದಲ್ಲಿ ಆಣೆಕಟ್ಟು ನಿರ್ಮಾಣ ಮಾಡಿತು.
ಆದರೆ, ಇದಕ್ಕೆ ಪ್ರತಿಯಾಗಿ ರೈತರ ಮೇಲೆ ಅಭಿವೃದ್ಧಿ ಕರ ಹೇರಿತು. ಕಾಲುವೆಗಳಿಗೆ ನೀರು ಹರಿಯದಿದ್ದರೂ ಕರ ತುಂಬಬೇಕಿತ್ತು. ಇದನ್ನು ಭರಿಸದ ರೈತರ ಪಹಣಿ ಪತ್ರದ ಮೇಲೆ ‘ಸರ್ಕಾರಿ’ ಎಂದು ನಮೂದಿಸಿತು. ಇದರಿಂದ ಸರ್ಕಾರಿ ಸಾಲ, ವಿವಿಧ ಸೌಲಭ್ಯಗಳಿಂದ ರೈತರು ವಂಚಿತರಾದರು. ಇದನ್ನು ವಿರೋಧಿಸಿ ಮಲಪ್ರಭೆ ಅಚ್ಚುಕಟ್ಟು ಪ್ರದೇಶದಲ್ಲಿ 21 ಸದಸ್ಯರ ನೇತೃತ್ವದಲ್ಲಿ ಹೋರಾಟ ಆರಂಭವಾಯಿತು. ಈ ಹೋರಾಟಕ್ಕೆ ಸರ್ಕಾರ ಮಣಿಯಲಿಲ್ಲ. ಬಳಿಕ 1980 ಜುಲೈನಲ್ಲಿ ನರಗುಂದದ ತಹಶೀಲ್ದಾರ್ ಕಚೇರಿ ಎದುರು ರೈತರು ಸರಣಿ ಉಪವಾಸ ಆರಂಭಿಸಿದರೂ ಬೇಡಿಕೆಗೆ ಸ್ಪಂದಿಸಲಿಲ್ಲ.
ಹೋರಾಟ ಹಿಂಸಾರೂಪ ತಾಳಿ ಜುಲೈ 21ರಂದು ತಹಶೀಲ್ದಾರ್ ಕಚೇರಿ ಎದುರು ಮಲಗಿ ಧರಣಿ ನಡೆಸಿದ ರೈತರನ್ನು ಅಂದಿನ ತಹಶೀಲ್ದಾರ್ ತುಳಿದುಕೊಂಡೇ ಕಚೇರಿ ಒಳಗೆ ಹೋದರು. ಇದರಿಂದ ಇದರಿಂದ ಆಕ್ರೋಶಗೊಂಡ ರೈತರು ತಹಶೀಲ್ದಾರ್ ಅವರನ್ನು ಥಳಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಈ ವೇಳೆ ಪೊಲೀಸರು ಹಾರಿಸಿದ ಗುಂಡಿಗೆ ಚಿಕ್ಕನರಗುಂದದ ರೈತ ವೀರಪ್ಪ ಕಡ್ಲಿಕೊಪ್ಪ ಗುಂಡಿಗೆ ಬಲಿಯಾದರು. ಇದರಿಂದಾಗಿ ಅಂದಿನ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಲಿಯಾಯಿತು. ಅಭಿವೃದ್ಧಿ ಕರ ರದ್ದಾಯಿತು.
ಆದರೆ ಇದು ಬಿಟ್ಟರೆ ಈವರೆಗೆ ರೈತರ ಸಮಸ್ಯೆ ಮಾತ್ರ ಹಾಗೇ ಉಳಿದಿವೆ. ಹೋರಾಟದಲ್ಲಿ ಹುತಾತ್ಮರಾದ ರೈತರ ಸ್ಮಾರಕ ನಿರ್ಮಾಣ ಮಾಡಿಲ್ಲ.
ಅಲ್ಲದೆ, ಹಲವು ವರ್ಷಗಳಿಂದ ಮಹದಾಯಿ, ಕಳಸಾ–ಬಂಡೂರಿ ಹೋರಾಟ ನಡೆಯುತ್ತಲೇ ಇದೆ. ನೀರು ಹಂಚಿಕೆ, ಅಧಿಸೂಚನೆ, ಟೆಂಡರ್ ಪ್ರಕ್ರಿಯೆ ಎನ್ನುತ್ತಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ, ರಾಜಕೀಯ ಪಕ್ಷಗಳು ಕಾಲಹರಣ ಮಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.