ADVERTISEMENT

ಮನವೊಲಿಕೆ: ವಾಹನ ಕಾರ್ಯಾಚರಣೆಯಲ್ಲಿ ಪ್ರಗತಿ

ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗೆ ₹59ಕೋಟಿ ನಷ್ಟ: ಕಠಿಣ ಕ್ರಮ ಅನಿವಾರ್ಯ–ಕೂರ್ಮಾರಾವ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 11:35 IST
Last Updated 19 ಏಪ್ರಿಲ್ 2021, 11:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಪ್ಪಳ: ‘ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಮುಷ್ಕರ ನಿರತ ಚಾಲನಾ ಸಿಬ್ಬಂದಿಯ ಮನವೊಲಿಸಲಾಗುತ್ತಿದೆ. ಏ.7 ರಿಂದ 18ರವರೆಗೆ ವಾಹನಗಳ ಕಾರ್ಯಾಚರಣೆಯಲ್ಲಿ ಪ್ರಗತಿಯಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ತಿಳಿಸಿದ್ದಾರೆ.

‘ಏ.15 ರಂದು ಹುಮನಾಬಾದ್‌ ಬಸ್ ನಿಲ್ದಾಣದಲ್ಲಿ ಬಸ್‌ವೊಂದನ್ನು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಮುಷ್ಕರ ನಿರತ ಚಾಲಕ ರಾಜು ಎಂಬುವವರ ಮೇಲೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಬ್ಬಂದಿ ಮುಷ್ಕರ ಕೈಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಸಿಬ್ಬಂದಿ ಮುಷ್ಕರದ ಕಾರಣ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಖಾಸಗಿ, ಅಂತರರಾಜ್ಯ ಬಸ್‌ಗಳು ಹಾಗೂ ಇತರ ವಾಹನಗಳು ಸೇರಿ ಏ.12 ರಂದು ಒಟ್ಟು 3,660 ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು’ ಎಂದು ತಿಳಿಸಿದ್ದಾರೆ.

ಏ. 13 ರಂದು 2820, ಏ.14 ರಂದು 2625, ಏ.15 ರಂದು 3236, ಏ.16 ರಂದು 3103, ಏ. 17 ರಂದು 2964 ಹಾಗೂ ಏ. 18 ರಂದು 1,880 ಖಾಸಗಿ ವಾಹನಗಳು ಸಂಸ್ಥೆಯ ಬಸ್ ನಿಲ್ದಾಣಗಳ ಮೂಲಕ ಪ್ರಯಾಣಿಕರ ಸೇವೆಗೆ ಲಭ್ಯವಿದ್ದವು. ಸಿಬ್ಬಂದಿ ಮುಷ್ಕರದ ಕಾರಣ ಏ.7 ರಿಂದ 18ರ ವರೆಗೆ ಸಂಸ್ಥೆಗೆ ₹59 ಕೋಟಿಗಳಷ್ಟು ಆದಾಯದಲ್ಲಿ ಕೊರತೆಯಾಗಿದೆ ಎಂದಿದ್ದಾರೆ.

ADVERTISEMENT

ಮುಷ್ಕರ ನಿರತ ಚಾಲನಾ ಸಿಬ್ಬಂದಿಗೆ ಇಲ್ಲಿಯವರೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ವಿನಂತಿಸಿಕೊಳ್ಳಲಾಗಿದೆ. ಕೆಲವು ಸಿಬ್ಬಂದಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕೆಲ ಸಿಬ್ಬಂದಿಯನ್ನು ಸಂಸ್ಥೆಯಿಂದ ವಜಾಗೊಳಿಸಲಾಗಿದೆ. ಇಷ್ಟಾದರೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಉಂಟಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.