ಕುಷ್ಟಗಿ (ಕೊಪ್ಪಳ ಜಿಲ್ಲೆ): ಕುಷ್ಟಗಿ, ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕುಗಳ ಜನರ ಬಹು ವರ್ಷಗಳ ಬೇಡಿಕೆಯಾಗಿದ್ದ ಕುಷ್ಟಗಿ-ತಳಕಲ್ ಮಾರ್ಗದ ಹೊಸ ರೈಲು ಸಂಚಾರಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಗುರುವಾರ ಕುಷ್ಟಗಿಯಲ್ಲಿ ಚಾಲನೆ ನೀಡಿದರು.
ಸಾವಿರಾರು ಸಂಖ್ಯೆಯಲ್ಲಿ ಇಲ್ಲಿನ ರೈಲು ನಿಲ್ದಾಣದಲ್ಲಿ ಸೇರಿದ್ದ ಜನರ ಹರ್ಷೋದ್ಗಾರದ ನಡುವೆ ಸೋಮಣ್ಣ ಅವರು ರೈಲು ಓಡಾಟಕ್ಕೆ ಹಸಿರು ನಿಶಾನೆ ತೋರಿದರು.
ಕುಷ್ಟಗಿ ಹಾಗೂ ತಳಕಲ್ ನಡುವಿನ 56 ಕಿ.ಮೀ. ದೂರದ ಈ ಮಾರ್ಗದಲ್ಲಿ ರೈಲು ಕುಷ್ಟಗಿಯಿಂದ ಹೊರಡುವಾಗ ಲಿಂಗನಬಂಡಿ, ಹನುಮಾಪುರ, ಯಲಬುರ್ಗಾ, ಸಂಗನಾಳ, ಕುಕನೂರು ಹಾಗೂ ತಳಕಲ್ ಮಾರ್ಗದ ಮೂಲಕ ಹುಬ್ಬಳ್ಳಿ ತಲುಪಲಿದೆ.
ನಿತ್ಯ ಬೆಳಿಗ್ಗೆ 7 ಗಂಟೆಗೆ ಕುಷ್ಟಗಿಯಿಂದ ಹೊರಡುವ ರೈಲು 10.45ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ಸಂಜೆ 5 ಗಂಟೆಯಿಂದ ಹೊರಡಲಿದೆ.
ರೈಲು ಚಾಲನೆಗೂ ಮೊದಲು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮಣ್ಣ 'ರೈಲ್ವೆ ಸಂಪರ್ಕ ಅಭಿವೃದ್ಧಿಯಾದರೆ ಮಾತ್ರ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳ ರೀತಿ ಕೆಲಸ ಮಾಡಬೇಕು. ದೇಶದ ಎಲ್ಲ ರೈಲು ಮಾರ್ಗಗಳನ್ನು ವಿದ್ಯುದ್ವೀಕರಣ ಮಾಡಲಾಗುತ್ತಿದೆ. ಅದೇ ಯೋಜನೆಯಲ್ಲಿ ಕುಷ್ಟಗಿ ಹಾಗೂ ತಳಕಲ್ ಮಾರ್ಗವನ್ನೂ ವಿದ್ಯುದ್ವೀಕರಣ ಮಾಡಲಾಗುವುದು' ಎಂದು ತಿಳಿಸಿದರು.
ನಾವು ಎನೇ ರಾಜಕಾರಣ ಮಾಡಿದರೂ ರೈಲಿನಲ್ಲಿ ಎಲ್ಲ ಪಕ್ಷಗಳ ಜನರೂ ಓಡಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಹಿಂದಿನ ಹತ್ತು ವರ್ಷಗಳಲ್ಲಿ ರೈಲ್ವೆ ಕ್ಷೇತ್ರದ ಅಭಿವೃದ್ದಿಗೆ ಆದ್ಯತೆ ನೀಡಿದ್ದಾರೆ. ಆಧುನಿಕ ತಂತ್ರಜ್ಞಾನ ಗರಿಷ್ಠ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ, ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.