ಕೊಪ್ಪಳ: ‘ಕಿರು ಉದ್ಯಮಗಳ ಮೂಲಕ ರೈತರನ್ನು ಉದ್ಯಮಿಗಳನ್ನಾಗಿಸಬೇಕಿದ್ದು, ಪ್ರಾಕೃತಿಕವಾಗಿ ಕೊಪ್ಪಳ ಜಿಲ್ಲೆ ಹೇರಳ ಸಂಪನ್ಮೂಲ ಹೊಂದಿದೆ. ತುಂಗಭದ್ರಾ ನದಿಯ ನೀರು ಯಥೇಚ್ಛವಾಗಿ ಸಿಗುತ್ತಿದ್ದು, ಈ ಜಿಲ್ಲೆ ಉತ್ತರ ಕರ್ನಾಟಕಕ್ಕೆ ಅಕ್ಷಯಪಾತ್ರೆಯಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ತಾಲ್ಲೂಕಿನ ಮೆತಗಲ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಬಾರ್ಡ್ ಮೂಲಕ ನಿರ್ಮಿಸಲಾದ ಕೃಷಿ ಸಂಸ್ಕರಣಾ ತರಬೇತಿ ಘಟಕ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಬುಧವಾರ ಉದ್ಘಾಟಿಸಿದ ಅವರು ರೈತರಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ಜಿಎಸ್‌ಟಿ ಸರಳೀಕರಣದಿಂದಾಗಿ ರೈತರಿಗೆ ಆಗುವ ಪ್ರಯೋಜನಗಳನ್ನು ಹಂಚಿಕೊಂಡರು.
‘ಹನುಮ ಜನಿಸಿದ ನಾಡು, ಕಿನ್ನಾಳ ಕಲೆಯ ತವರೂರಿನ ಕೊಪ್ಪಳ ಜಿಲ್ಲೆಯ ಜನರಿಗೆ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಮಾತು ಆರಂಭಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿದ ಅವರು ‘ಕರ್ನಾಟಕದಿಂದ ಸಂಸದಳಾಗಿದ್ದೇನೆ. ನನ್ನ ಸ್ಥಳೀಯ ಅನುದಾನದಿಂದ ಸಂಸ್ಕರಣಾ ಘಟಕಕ್ಕೆ ನೆರವು ಒದಗಿಸಿದ್ದೇನೆ. ಮೆತಗಲ್‌ನಲ್ಲಿ ಕಾರ್ಯನಿರ್ವಹಿಸುವ ಹಣ್ಣು ಸಂಸ್ಕರಣೆ ಘಟಕದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಜೋಡಣೆ ವ್ಯವಸ್ಥೆ ಕಲ್ಪಿಸಲಾಗುವುದು. ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಯಿಂದ ರೈತರಿಗೂ ಅನುಕೂಲವಾಗುತ್ತದೆ’ ಎಂದು ಹೇಳಿದರು.
‘ಪಪ್ಪಾಯ, ದ್ರಾಕ್ಷಿ, ಮಾವಿನ ಹಣ್ಣು, ಪೇರಲ ಎಲ್ಲವನ್ನೂ ಇಲ್ಲಿ ಬೆಳೆಯಲಾಗುತ್ತಿದ್ದು, ರೈತರಿಗೆ ಸೌಕರ್ಯ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಮಳೆ ಸಮಯಕ್ಕೆ ಸರಿಯಾಗಿ ಆಗದ ಕಾರಣಕ್ಕೆ ಬೆಂಗಳೂರು ಹಾಗೂ ಮಂಗಳೂರಿಗೆ ಈ ಭಾಗದ ಹೆಚ್ಚು ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಸ್ಥಳೀಯವಾಗಿಯೇ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ಆದ್ದರಿಂದ ಫಸಲು ಮೌಲ್ಯವರ್ಧನ ಮಾಡಿಕೊಳ್ಳಬೇಕು. ಮೆತಗಲ್‌ನಲ್ಲಿರುವ ಸಂಸ್ಕರಣಾ ಘಟಕದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಬೆಂಗಳೂರು, ಆಂಧ್ರದಲ್ಲಿ ಮಾರುಕಟ್ಟೆ ಸಿಗಲಿದ್ದು, ಆಹಾರ ಸುರಕ್ಷತೆಯ ಮುದ್ರೆಯೂ ಲಭಿಸಲಿದೆ. ವಾರ್ಷಿಕ 840 ಮೆಟ್ರಿಕ್ ಟನ್ ಮಾವಿನ ಪುಡಿ ತಯಾರಿಸುವ ಸಾಮರ್ಥ್ಯ ಇಲ್ಲಿನ ಸಂಸ್ಕರಣಾ ಘಟಕಕ್ಕೆ ಇದೆ’ ಎಂದು ತಿಳಿಸಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಅಧ್ಯಕ್ಷ ಶಾಜಿ ಕೆ.ವಿ. ಮಾತನಾಡಿ ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಬಾರ್ಡ್ ಮೂಲಕ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಸಂಸ್ಕರಣಾ ಘಟಕ ಆರಂಭಿಸಿದ ಅದರ ಪ್ರಗತಿಯ ವರದಿಯನ್ನೂ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಳುಹಿಸುತ್ತೇವೆ. ಕೃಷಿಕರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು, ಬಿಜೆಟ್‌ನಲ್ಲಿ ಅವುಗಳನ್ನು ಈಗಾಗಲೇ ಘೋಷಿಸಲಾಗಿದೆ’ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ವೇದಿಕೆ ಮೇಲಿದ್ದರು.
ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ನಬಾರ್ಡ್ ಉಪನಿರ್ದೇಶಕ ಎ.ಕೆ. ಸೂದ್, ವನಬಳ್ಳಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಮ್ಮ ಶ್ರೀಕಂಠ ಹುಲಸನಹಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಅನೇಕರು ಪಾಲ್ಗೊಂಡಿದ್ದರು.
ಮೋದಿ ಆರ್ಥಿಕ ಶಕ್ತಿ ಕನಸು ನನಸು: ರೆಡ್ಡಿ
ಕೊಪ್ಪಳ: ಜಗತ್ತಿನಲ್ಲಿಯೇ ಆರ್ಥಿಕ ಶಕ್ತಿಯ ಬಲಾಢ್ಯ ರಾಷ್ಟ್ರವಾಗಿ ಭಾರತ ಹೊರಹೊಮ್ಮಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದ್ದು ಅದನ್ನು ನನಸಾಗಿರಲು ನಿರ್ಮಲಾ ಸೀತಾರಾಮನ್ ಅವರು ಶ್ರಮಿಸುತ್ತಿದ್ದಾರೆ ಎಂದು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಹೇಳಿದರು. ನಿರ್ಮಲಾ ಸೀತಾರಾಮನ್ ಅವರಿಗೆ ಸುಲಭವಾಗಿ ಅರ್ಥವಾಗಲೆಂದು ತೆಲುಗು ಭಾಷೆಯಲ್ಲಿ ಮಾತನಾಡಿದ ರೆಡ್ಡಿ ‘ಗಂಗಾವತಿ ಕ್ಷೇತ್ರದಲ್ಲಿ ನೀರಾವರಿಗೆ ಕ್ರಮ ಕೈಗೊಳ್ಳಲಾಗಿದೆ. ರಾಮನ ಬಂಟ ಹನುಮಂತನ ಕ್ಷೇತ್ರ ಅಂಜನಾದ್ರಿ ಅಭಿವೃದ್ಧಿಗೆ ₹1350 ಕೋಟಿ ಮೊತ್ತದ ಯೋಜನೆ ರೂಪಿಸಿ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಕಳಿಸಲಾಗುವುದು. ಇದಕ್ಕೆ ಅಗತ್ಯ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಇನ್ನೊಂದು ಸಂಸ್ಕರಣಾ ಘಟಕ ಆರಂಭಿಸಲು ನಿರಂತರವಾಗಿ ಪ್ರಯತ್ನಿಸಬೇಕು. ರೈತರಿಗೆ ನೇರವಾಗಿ ಆದಾಯ ಲಭಿಸುವಂತೆ ಮಾಡಲು ನಬಾರ್ಡ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಮನ್ವಯತೆ ಇದ್ದರೆ ಹೇಗೆಲ್ಲ ಕೆಲಸ ಮಾಡಬಹುದು ಎನ್ನುವುದಕ್ಕೆ ಇದು ಉತ್ತಮ ನಿದರ್ಶನ. ಅಂಜನಾದ್ರಿ ಅಭಿವೃದ್ಧಿ ಹಾಗೂ ಮೆತಗಲ್‌ಗೆ ರಸ್ತೆ ಸೌಲಭ್ಯದ ಬಗ್ಗೆಯೂ ಯೋಜನೆ ರೂಪಿಸಲಾಗುವುದು.ವಿಶಾಲ್ ಆರ್., ರಾಜ್ಯ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.