ಕುಷ್ಟಗಿ: ‘ಮುಂಬರುವ ಲೋಕಸಭಾ ಚುನಾವಣೆ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು, ಈ ವಿಷಯದಲ್ಲಿ ಯಾವುದೇ ತಪ್ಪಿಗೆ ಕ್ಷಮೆಯೇ ಇರುವುದಿಲ್ಲ’ ಎಂದು ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯೊಂದಿಗೆ ನಡೆಸಿದ ಮೊದಲ ಪೂರ್ವಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.
‘ಒಬ್ಬರು ಮಾಡುವ ತಪ್ಪಿಗೆ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ. ಚುನಾವಣೆ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ನಿವೃತ್ತರಾಗುವವರೆಗೂ ತೊಂದರೆ ತಪ್ಪಿದ್ದಲ್ಲ’ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.
‘ಮತದಾರರ ಪಟ್ಟಿಯಲ್ಲಿ ದೋಷ ಇಲ್ಲದಂತೆ ನೋಡಿಕೊಳ್ಳಬೇಕು. ಎಲೆಕ್ಟ್ರಾನಿಕ್ ಮತಯಂತ್ರಗಳ ಸಿದ್ಧತೆ ನಡೆದಿದೆ, ಮತದಾನದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಯಂತ್ರಗಳಲ್ಲಿ ಎದುರಾಗುವ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ತಾವೇ ಸರಿಪಡಿಸಿಕೊಳ್ಳಲು ಸೆಕ್ಟರ್ ಅಧಿಕಾರಿಗಳು ಅಗತ್ಯ ತಾಂತ್ರಿಕ ಮಾಹಿತಿ ಪಡೆದಿರಬೇಕು’ ಎಂದು ಹೇಳಿದರು.
‘ಈ ಬಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯವರಿಗೆ ಅಂಚೆ ಮತಪತ್ರಗಳನ್ನು ನೀಡುವುದಿಲ್ಲ, ಬೇರೆ ಕ್ಷೇತ್ರದಿಂದ ಬಂದವರಿಗೆ ಮಾತ್ರ ಅಂಚೆ ಮತಪತ್ರ ನೀಡಲಾಗುತ್ತದೆ’ ಎಂದರು.
ತಹಶೀಲ್ದಾರ್ ರವಿ ಅಂಗಡಿ ಮಾತನಾಡಿ,‘ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿ ಮುತುವರ್ಜಿಯಿಂದ ಕೆಲಸ ನಿರ್ವಹಿಸುವ ಮೂಲಕ ತಾಲ್ಲೂಕಿನ ಮತದಾನ ವ್ಯವಸ್ಥೆ ಮಾದರಿಯಾಗುವಂತೆ ನೋಡಿಕೊಳ್ಳಬೇಕಿದೆ’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಿಂಗಪ್ಪ ಮಸಳಿ, ಇತರೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.