ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಉಕ್ಕಿನ ಕಾರ್ಖಾನೆ ವಿಸ್ತರಣೆ ಮಾಡಲಾಗುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಬುಧವಾರ ನಗರದಲ್ಲಿ ಸಭೆ ನಡೆಸಿ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ರೂಪಿಸಲು ತೀರ್ಮಾನಿಸಲಾಯಿತು.
ಜಿಲ್ಲಾ ಬಚಾವೊ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಪದಾಧಿಕಾರಿಗಳು ಸಭೆ ನಡೆಸಿದ್ದು ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಢಿಕರಿಸಲಾಯಿತು.
‘ಹೋರಾಟಕ್ಕೆ ಕೊಪ್ಪಳ ಮತ್ತು ಬಾಧಿತ ಪ್ರದೇಶಗಳ ಜನರನ್ನು ಸಜ್ಜುಗೊಳಿಸಬೇಕು, ಕೊಪ್ಪಳದ 31, ಭಾಗ್ಯನಗರದ 19 ಹಾಗೂ ಸುಮಾರು 30 ಗ್ರಾಮಗಳಲ್ಲಿ ಪರಿಸರ ಜಾಗೃತಿ ಸಭೆ ನಡೆಸುವುದು, ನಗರದ ಅಶೋಕ ವೃತ್ತದಲ್ಲಿ ನಿರಂತರ ಧರಣಿ ಹಾಗೂ ಸತ್ಯಾಗ್ರಹ ನಡೆಸಬೇಕು. ಪ್ರತಿಯೊಂದು ಸಂಘಟನೆಯನ್ನು ತೊಡಗಿಸಿಕೊಳ್ಳುವಂತೆ ಮಾಡುವುದು. ವಿದ್ಯಾರ್ಥಿಗಳಿಂದ ರಾಷ್ಟ್ರಪತಿ, ಮುಖ್ಯಮಂತ್ರಿ, ಹಸಿರು ನ್ಯಾಯಾಧಿಕರಣಕ್ಕೆ ಮತ್ತು ಬಲ್ಡೋಟಾ ಮಾಲೀಕರಿಗೆ ಸುಮಾರು ಒಂದು ಲಕ್ಷ ಪತ್ರ ಬರೆಸುವ ಮೂಲಕ ಪತ್ರ ಚಳವಳಿ ನಡೆಸಬೇಕು’ ಎಂದು ಸಭೆಯಲ್ಲಿ ನಿರ್ಧಾರಿಸಲಾಯಿತು.
ಪೋಸ್ಟರ್ ಜಾಗೃತಿ ಅಭಿಯಾನ, ಕೊಪ್ಪಳದಿಂದ ಗಿಣಿಗೇರಾ ತನಕ ಸೈಕಲ್ ಜಾಥಾ, ಪರಿಸರ ಹಾನಿ ಕುರಿತು ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ ಏರ್ಪಡಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ಸಂಘಟನೆಗಳ ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಸೋಮರಡ್ಡಿ ಅಳವಂಡಿ, ಬಸವರಾಜ ಶೀಲವಂತರ, ರಮೇಶ ತುಪ್ಪದ, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಮಂಜುನಾಥ ಸಜ್ಜನ್, ಸಂತೋಷ ದೇಶಪಾಂಡೆ, ಮುದುಕಪ್ಪ ಹೊಸಮನಿ, ಶಿವಕುಮಾರ ಕುಕನೂರ, ಶರಣು ಪಾಟೀಲ, ಶರಣು ಡೊಳ್ಳಿನ, ಕೇಶವ ಕಟ್ಟಿಮನಿ, ಎಸ್.ಎ. ಗಫಾರ್, ಮಖಬುಲ್ ರಾಯಚೂರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.